ಬೆಂಗಳೂರು:
ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ಮುಷ್ಕರ ನೌಕರರು ನಡೆಸಿದ್ದ ನೌಕರರಿಗೆ ಸಾರಿಗೆ ನಿಗಮಗಳು ಶಾಕ್ ನೀಡಿವೆ. ಹೈಕೋರ್ಟ್ ಸೂಚನೆ ಉಲ್ಲಂಘಿಸಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರಿಗೆ ನೋಟಿಸ್ ಜಾರಿಯಾಗಿದ್ದು, ಕೆಲಸದಿಂದ ವಜಾಗೊಳಿಸುವ ಕುರಿತಾಗಿ ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಮುಷ್ಕರಕ್ಕೆ ಕರೆ ಕೊಟ್ಟಿದ್ದ ಸಾರಿಗೆ ನೌಕರರ ಸಂಘಟನೆಗಳಿಗೆ ಮುಷ್ಕರ ಮುಂದೂಡುವಂತೆ ಹೈಕೋರ್ಟ್ ಸೋಮವಾರ ಸೂಚನೆ ನೀಡಿತ್ತು. ಸಾರ್ವಜನಿಕರ ಹಿತಾಸಕ್ತಿ ಹಿನ್ನೆಲೆಯಲ್ಲಿ ಮುಷ್ಕರ ನಡೆಸದಂತೆ ನಿರ್ದೇಶಿಸಿತ್ತು. ಹಾಗಿದ್ದರೂ ಕೋರ್ಟ್ ಸೂಚನೆಯನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸಲಾಗಿತ್ತು. ಹೀಗಾಗಿ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಿಗಮಗಳು ಮುಂದಾಗಿವೆ.
ಮುಷ್ಕರದಿಂದ ಕರ್ತವ್ಯಕ್ಕೆ ಗೈರಾಗಿದ್ದ ಬಿಎಂಟಿಸಿ, ಕೆಎಸ್ಆರ್ಟಿಸಿ, ಕೆಕೆಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿಯ ನೌಕರರಿಗೆ ನೋಟಿಸ್ ನೀಡಿದೆ. ನಿನ್ನೆ ಒಂದೇ ದಿನ ಸಾವಿರಾರು ನೌಕರರಿಗೆ ನೋಟಿಸ್ ತಲುಪಿದ್ದು, ನೋಟಿಸ್ಗೆ ಸಕಾರಣ ನೀಡದಿದ್ದರೆ ವಜಾ ಮಾಡುವ ಎಚ್ಚರಿಕೆ ನೀಡಲಾಗಿದೆ. ಇದರಿಂದ ನೋಟಿಸ್ ಪಡೆದ ನೌಕರರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ಮಂಗಳವಾರ ಮುಷ್ಕರ ಮುಂದೂಡುವಂತೆ ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದೂಡಲಾಗಿತ್ತು. ಮುಷ್ಕರಕ್ಕೆ ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠಿದಂದ ವಿಚಾರಣೆ ನಡೆಸಿ, ಮುಷ್ಕರಕ್ಕೆ ನೀಡಿದ್ದ ಮಧ್ಯಂತರ ತಡೆ ಆದೇಶವನ್ನು ನ್ಯಾಯಾಲಯ ಎರಡು ದಿನಗಳ ಕಾಲ ವಿಸ್ತರಣೆ ಮಾಡಿದೆ. ಅಲ್ಲದೆ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 7 ಕ್ಕೆ ಮುಂದೂಡಿಕೆ ಮಾಡಿದೆ.
