ನವದೆಹಲಿ:
ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಗೌರವ ಸೂಚಕವಾಗಿ ಸರ್ಕಾರ ಸೋಮವಾರ ಮೂರು ದಿನಗಳ ರಾಜ್ಯ ಶೋಕಾಚರಣೆಯನ್ನು ಘೋಷಿಸಿದೆ. ಸುಮಾರು 1,300 ವರ್ಷಗಳಲ್ಲಿ ಮೊದಲ ಯುರೋಪಿಯನೇತರ ಪೋಪ್ ಆಗಿದ್ದ ಫ್ರಾನ್ಸಿಸ್ ಸೋಮವಾರ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಗೃಹಸಚಿವಾಲಯ ಇಂದಿನಿಂದ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ. ಕ್ರಿಶ್ಚಿಯನ್ನರ ಧರ್ಮಗುರು ಅಗಲಿದ್ದಾರೆ. ಹೀಗಾಗಿ ಏಪ್ರಿಲ್ 22 (ಮಂಗಳವಾರ) ಮತ್ತು ಏಪ್ರಿಲ್ 23 (ಬುಧವಾರ) ಶೋಕಾಚರಣೆ ಇರಲಿದೆ. ನಂತರ ಪೋಪ್ ಅಂತ್ಯಕ್ರಿಯೆ ನಡೆಯಲಿರುವ ದಿನದಂದು ಒಂದು ದಿನದ ಶೋಕಾಚರಣೆ ಇರಲಿದೆ ಎಂದು ಹೇಳಿದೆ.
ಶೋಕಾಚರಣೆಯ ಅವಧಿಯಲ್ಲಿ, ಭಾರತದಾದ್ಯಂತ ರಾಷ್ಟ್ರಧ್ವಜವನ್ನು ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ ಮತ್ತು ಯಾವುದೇ ಅಧಿಕೃತ ಮನರಂಜನೆ ಇರುವುದಿಲ್ಲ ಎಂದು ಅದು ಹೇಳಿದೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ಡಬಲ್ ನ್ಯುಮೋನಿಯಾದಿಂದ ಅಸ್ವಸ್ಥರಾಗಿದ್ದರು. ಅಲ್ಲದೆ ಅವರಿಗೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತ್ತು. ಆರೋಗ್ಯ ತೀವ್ರ ಹದಗೆಟ್ಟ ಕಾರಣ ವೆಂಟಿಲೇಟರ್ ಸಹಾಯದಿಂದ ಅವರು ಉಸಿರಾಡುತ್ತಿದ್ದರು.
ಅರ್ಜೆಂಟೀನಾದಲ್ಲಿ ಜಾರ್ಜ್ ಮಾರಿಯೋ ಬರ್ಗೊಗ್ಲಿಯೊ ಎಂದು ಜನಿಸಿದ ಫ್ರಾನ್ಸಿಸ್, ಅಮೆರಿಕ ಮೂಲದ ಮೊದಲ ಪೋಪ್ ಆಗಿದ್ದರು. ಅವರು ಮಾರ್ಚ್ 13, 2013 ರಂದು ತಮ್ಮ 76 ನೇ ವಯಸ್ಸಿನಲ್ಲಿ ಪೋಪ್ ಆಗಿ ಆಯ್ಕೆಯಾದರು. ಇವರು ಬಡವರ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿದ್ದ ಜನಮನ್ನಣೆ ಗಳಿಸಿದ್ದ ಪೋಪ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಆದರೆ ಅವರ ಪೋಪ್ ಅಧಿಕಾರ ಮುಂದುವರೆದಂತೆ, ಅವರು ಸಂಪ್ರದಾಯವಾದಿಗಳಿಂದ ತೀವ್ರ ಟೀಕೆಗಳನ್ನು ಎದುರಿಸಿದ್ದರು. ಅವರು ಪಾಲಿಸಬೇಕಾದ ಸಂಪ್ರದಾಯಗಳನ್ನು ಕಸದ ಬುಟ್ಟಿಗೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಮತ್ತೊಂದೆಡೆ 2,000 ವರ್ಷಗಳಷ್ಟು ಹಳೆಯದಾದ ಚರ್ಚ್ ಅನ್ನು ಮರುರೂಪಿಸಲು ಅವರು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿತ್ತು ಎಂದು ಭಾವಿಸಿದ ಪ್ರಗತಿಪರರ ಕೋಪಕ್ಕೂ ಗುರಿಯಾಗಿದ್ದರು. ಅವರು ಆಂತರಿಕ ಭಿನ್ನಾಭಿಪ್ರಾಯದೊಂದಿಗೆ ಹೋರಾಟ ನಡುವೆಯೇ ಫ್ರಾನ್ಸಿಸ್ ಜಾಗತಿಕ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದವರು. ವಲಸಿಗ ಪರ ಧ್ವನಿ, ಅಂತರ್ಧರ್ಮೀಯ ಸಂವಾದ ಮತ್ತು ದಣಿವರಿಯಿಲ್ಲದೆ ಶಾಂತಿಯನ್ನು ಉತ್ತೇಜಿಸುವ ಮೂಲಕ ಅವರು ಅಪಾರ ಜನಸಮೂಹವನ್ನು ಸೆಳೆಯುತ್ತಿದ್ದರು.
ತಮ್ಮ ಅಧಿಕಾರಾವಧಿಯಲ್ಲಿ, ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್‌ನಲ್ಲಿ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಮತ್ತು ಪಾದ್ರಿಗಳ ನಿಂದನೆಯನ್ನು ಪರಿಹರಿಸುವ ಪ್ರಯತ್ನಗಳನ್ನು ಒಳಗೊಂಡಂತೆ ಗಮನಾರ್ಹ ಸುಧಾರಣೆಗಳನ್ನು ಕೈಗೊಂಡರು. ಪರಿಸರ ಕಾಳಜಿಯನ್ನೂ ಹೊಂದಿದ್ದ ಅವರು, ಲೌಡಾಟೊ ಸಿ’ ಎಂಬ ವಿಶ್ವಕೋಶದ ಮೂಲಕ ವಿಶೇಷವಾಗಿ ಹವಾಮಾನ ಬದಲಾವಣೆಯ ಮೇಲೆ ಜಾಗತಿಕ ಕ್ರಮಕ್ಕಾಗಿ ಕರೆ ನೀಡಿದ್ದರು.
ಇತ್ತೀಚಿನ ವರ್ಷಗಳಲ್ಲಿ ಪೋಪ್ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಈ ವರ್ಷದ ಆರಂಭದಲ್ಲಿ ಡಬಲ್ ನ್ಯುಮೋನಿಯಾ ಸೇರಿದಂತೆ ಉಸಿರಾಟದ ಸಮಸ್ಯೆಗಳಿಂದಾಗಿ ಅವರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಅನಾರೋಗ್ಯದ ಹೊರತಾಗಿಯೂ, ಅವರು ತಮ್ಮ ಕರ್ತವ್ಯಗಳಲ್ಲಿ ಸಕ್ರಿಯರಾಗಿದ್ದರು, ಆಗಾಗ್ಗೆ ಸಾವು ಮತ್ತು ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾದ ಅಗತ್ಯತೆ ಬಗ್ಗೆ ಮಾತನಾಡುತ್ತಿದ್ದರು.
