ಉಗ್ರರಿಂದ ಆನ್‌ಲೈನ್ ಶಾಪಿಂಗ್ ದುರುಪಯೋಗ : ಶಾಕಿಂಗ್‌ ಸಂಗತಿ ಬಯಲು

ನವದೆಹಲಿ: 

    ಆನ್‌ಲೈನ್ ಶಾಪಿಂಗ್ , ಆನ್‌ಲೈನ್ ಪಾವತಿಗಳು  ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿವೆ. ಸಾಕಷ್ಟು ಮಂದಿ ಈ ಮೂಲಕ ತಮಗೆ ಬೇಕಾದ ವಸ್ತುಗಳನ್ನು ಮನೆಗೆ ಅಥವಾ ತಮಗೆ ಬೇಕಾದ ಸ್ಥಳಕ್ಕೆ ತರಿಸಿಕೊಳ್ಳುತ್ತಿದ್ದಾರೆ. ಇದು ಭಯೋತ್ಪಾದಕರ ಪಾಲಿಗೂ ವರದಾನವಾಗಿದೆ ಎನ್ನುತ್ತದೆ ಎಫ್ಎಟಿಎಫ್ ವರದಿ . ಭಾರತದಲ್ಲಿ ಇತ್ತೀಚೆಗೆ ನಡೆದಿರುವ ಭಯೋತ್ಪಾದನಾ ದಾಳಿಗೆ  ಬೇಕಾದ ಸಾಮಗ್ರಿಗಳನ್ನು ಆನ್‌ಲೈನ್ ಶಾಪಿಂಗ್ ಮೂಲಕವೇ ತರಿಸಲಾಗಿತ್ತು ಎನ್ನುವುದು ಇದೀಗ ಬಹಿರಂಗವಾಗಿದೆ. ಆನ್‌ಲೈನ್ ಶಾಪಿಂಗ್ ಎಷ್ಟೋ ಜನರಿಗೆ ತಮ್ಮ ನಿತ್ಯದ ಕೆಲಸವನ್ನು ಸುಲಭಗೊಳಿಸಿದ್ದರೂ ಇದರ ದುರುಪಯೋಗವೂ ಆಗುತ್ತಿದೆ ಎನ್ನುವುದನ್ನು ಕೂಡ ಅಲ್ಲಗಳೆಯುವಂತಿಲ್ಲ.

   2019ರ ಪುಲ್ವಾಮಾ ದಾಳಿ ಮತ್ತು 2022ರ ಗೋರಖ್‌ನಾಥ ದೇವಾಲಯ ಘಟನೆ ಸೇರಿದಂತೆ ಭಾರತದಲ್ಲಿ ಇತ್ತೀಚೆಗೆ ನಡೆದಿರುವ ಹಲವು ಭಯೋತ್ಪಾದಕ ದಾಳಿಗೆ ಭಯೋತ್ಪಾದಕ ಸಂಘಟನೆಗಳು ಇ-ಕಾಮರ್ಸ್ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿದೆ ಎಂಬುದನ್ನು ಜಾಗತಿಕ ಭಯೋತ್ಪಾದಕ ಹಣಕಾಸು ಕಾವಲು ಸಂಸ್ಥೆ ಹಣಕಾಸು ಕ್ರಿಯಾ ಕಾರ್ಯಪಡೆ (FATF) ತಿಳಿಸಿದೆ.

   ಈ ಕುರಿತು ವರದಿ ಪ್ರಕಟಿಸಿರುವ ಎಫ್ಎಟಿಎಫ್, ಕೆಲವು ಭಯೋತ್ಪಾದಕ ಸಂಘಟನೆಗಳು ಸರ್ಕಾರದಿಂದಲೇ ಆರ್ಥಿಕ ಮತ್ತು ಇತರ ರೀತಿಯ ಬೆಂಬಲವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದೆ. ಕಳೆದ ಏಪ್ರಿಲ್ ೨೨ರಂದು ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ಎಫ್ಎಟಿಎಫ್, ಹಣಕಾಸಿನ ಬೆಂಬಲವಿಲ್ಲದೆ ಈ ಇಂತಹ ಕೃತ್ಯಗಳು ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದು, ಇದಕ್ಕೆ ಸಂಬಂಧಿಸಿ “ಭಯೋತ್ಪಾದಕ ಹಣಕಾಸಿನ ಸಮಗ್ರ ವಿಶ್ಲೇಷಣೆ”ಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.

   ಪಹಲ್ಗಾಮ್ ದಾಳಿಗೆ ಬಳಸಲಾದ ಸುಧಾರಿತ ಸ್ಫೋಟಕ ಸಾಧನದಲ್ಲಿ (IED) ಬಳಸಲಾಗುವ ಪ್ರಮುಖ ಅಂಶವಾದ ಅಲ್ಯೂಮಿನಿಯಂ ಪುಡಿಯನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಮೂಲಕ ಖರೀದಿಸಲಾಗಿದೆ ಎಂದು ಎಫ್ಎಟಿಎಫ್ ಭಾರತ ನಡೆಸಿದ ಪ್ರಕರಣ ಅಧ್ಯಯನವನ್ನು ಉಲ್ಲೇಖಿಸಿ ತಿಳಿಸಿದೆ.

   2019 ರ ಪುಲ್ವಾಮಾ ದಾಳಿಯ ಬಗ್ಗೆಯೂ ಭಾರತದ ತನಿಖೆ ಮಾಹಿತಿಯನ್ನು ಉಲ್ಲೇಖಿಸಿರುವ ಎಫ್ಎಟಿಎಫ್, ಪಾಕಿಸ್ತಾನವು ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿರುವುದನ್ನು ಮತ್ತು ಶಸ್ತ್ರಾಸ್ತ್ರ ಖರೀದಿಗೆ ಅಪಾರ ಹಣವನ್ನು ಬಳಸುತ್ತಿರುವುದನ್ನು ಭಾರತೀಯ ಅಧಿಕಾರಿಗಳು ಪದೇ ಪದೇ ಹೇಳಿದ್ದಾರೆ. ಪಾಕಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ತಾಣವಾಗಿದೆ ಎಂದು ಭಾರತ ಹೇಳುತ್ತಿದೆ. ಹೀಗಾಗಿ ಪಾಕಿಸ್ತಾನವನ್ನು “ಬೂದು ಪಟ್ಟಿ”ಗೆ ಮರಳಿ ಸೇರಿಸುವ ಅಗತ್ಯವಿದೆ ಎಂದು ಎಫ್ಎಟಿಎಫ್ ತಿಳಿಸಿದೆ.

   ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಆನ್‌ಲೈನ್ ಮಾರುಕಟ್ಟೆಗಳನ್ನು ಭಯೋತ್ಪಾದಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ಬೇಕಾದ ಉಪಕರಣ, ಶಸ್ತ್ರಾಸ್ತ್ರ, ರಾಸಾಯನಿಕ ಮತ್ತು 3ಡಿ ಮುದ್ರಣ ಸಾಮಗ್ರಿಗಳನ್ನು ಖರೀದಿ ಮಾಡಲು ಅವರು ಇಂತಹ ವೇದಿಕೆಗಳನ್ನು ಬಳಸುತ್ತಿರುವುದನ್ನು ಭಾರತ ಗಮನಿಸಿರುವುದಾಗಿ ಎಫ್ಎಟಿಎಫ್ ಹೇಳಿದೆ.

   2022ರ ಏಪ್ರಿಲ್ 3ರಂದು ಗೋರಖನಾಥ ದೇವಾಲಯದಲ್ಲಿ ನಡೆದ ಪ್ರಕರಣವನ್ನು ಉಲ್ಲೇಖಿಸಿರುವ ಎಫ್ಎಟಿಎಫ್, ಅಲ್ಲಿ ಮೊದಲು ಭದ್ರತಾ ಸಿಬ್ಬಂದಿಯ ಮೇಲೆ ದಾಳಿಯಾಗಿದೆ. ದಾಳಿ ನಡೆಸಿದ ಆರೋಪಿಯು ಅಂತಾರಾಷ್ಟ್ರೀಯ ವಹಿವಾಟುಗಳಿಗೆ ವಿಪಿಎನ್ ಸೇವೆಗಳನ್ನು ಬಳಸಿಕೊಂಡಿದ್ದು, ತನ್ನ ವಿಳಾಸವನ್ನು ಮರೆಮಾಡಲು ಪೇಪಾಲ್ ಮೂಲಕ ವಿದೇಶಿ ಖಾತೆಗಳಿಗೆ 6,69,841 ರೂ. ಹಣ ವರ್ಗಾಯಿಸಿದ್ದಾನೆ. ಅಲ್ಲದೇ ವಿದೇಶಿ ಮೂಲದಿಂದ 10,323.35 ರೂ. ಪಡೆದಿದ್ದಾನೆ. ಆತನಿಗೆ ವಿದೇಶಿ ಪೇಪಾಲ್ ಖಾತೆಯಿಂದಲೂ ಹಣ ಬಂದಿದೆ ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ. ಬಳಿಕ ಪೇಪಾಲ್ ಆರೋಪಿಯ ಖಾತೆಯನ್ನು ಅಮಾನತುಗೊಳಿಸಿದೆ. ಇದರಿಂದ ಮತ್ತಷ್ಟು ಅಕ್ರಮ ನಿಧಿ ವರ್ಗಾವಣೆಯನ್ನು ತಡೆಯಲಾಗಿದೆ ಎಂದು ಭಾರತದ ಹಣಕಾಸು ಸಚಿವಾಲಯ ಒದಗಿಸಿದ ಪ್ರಕರಣ ಅಧ್ಯಯನವನ್ನು ಎಫ್ಎಟಿಎಫ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. 

   ಆನ್‌ಲೈನ್ ಪಾವತಿ ಸೇವೆಗಳು ಬೆಳೆಯುತ್ತಿದ್ದಂತೆ ಭಯೋತ್ಪಾದಕರು ಇದನ್ನು ಗಣನೀಯ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಇದು ಹಣ ವರ್ಗಾವಣೆಗೆ ಅವರಿಗೆ ಸಾಕಷ್ಟು ಅವಕಾಶವನ್ನು ಮಾಡಿಕೊಟ್ಟಿದೆ. ಆನ್ಲೈನ್ ಪಾವತಿ ಸೇವೆಗಳು ಭಯೋತ್ಪಾದಕ ಸಂಘಟನೆಗಳಿಗೆ ಕಡಿಮೆ ವೆಚ್ಚದ ಮತ್ತು ವೇಗದ ಹಣ ವರ್ಗಾವಣೆಗೆ ದಾರಿಯಾಗಿದೆ ಎಂದು ಎಫ್ಎಟಿಎಫ್ ವರದಿ ತಿಳಿಸಿದೆ.

Recent Articles

spot_img

Related Stories

Share via
Copy link