ತುಮಕೂರು:
ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಶೈಕ್ಷಣಿಕ ನಗರಿ ಎಂದೇ ಪ್ರಸಿದ್ಧ ಪಡೆದಿರುವ ತುಮಕೂರು ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯೇ ಇದಕ್ಕೆ ಸಾಕ್ಷಿ.
ಡಿಪ್ಲೊಮಾ ನರ್ಸಿಂಗ್ ವಿಭಾಗದಲ್ಲಿ 120, ಬಿಎಸ್‌ಸಿ ನರ್ಸಿಂಗ್ ವಿಭಾಗದಲ್ಲಿ 240 ವಿದ್ಯಾರ್ಥಿಗಳು ಅಂದರೆ ಒಟ್ಟು 360 ವಿದ್ಯಾರ್ಥಿಗಳು ಕಾಲೇಜಿನಲ್ಲಿ ದಾಖಲಾತಿ ಪಡೆದುಕೊಂಡಿದ್ದು, ಇವರಿಗೆ ಬೋಧನೆ ಮಾಡಲು 40 ಉಪನ್ಯಾಸಕರು ಬೇಕಾಗಿದ್ದಾರೆ. ಆದರೆ ಪ್ರಸ್ತುತ ಇರುವ ಉಪನ್ಯಾಸಕರ ಸಂಖ್ಯೆ ಕೇವಲ 8.
ಪ್ರಮುಖವಾಗಿ ಖಾಸಗಿ ಕಾಲೇಜಿನಲ್ಲಿ ಲಕ್ಷ ಲಕ್ಷ ಶುಲ್ಕ ಪಾವತಿಗೆ ಸಾಧ್ಯವಾಗದ ಗ್ರಾಮೀಣ ಪ್ರದೇಶದ ಅದೆಷ್ಟೋ ಬಡ ವಿದ್ಯಾರ್ಥಿಗಳು ಇಲ್ಲಿ ನರ್ಸಿಂಗ್ ಕೋರ್ಸ್ಗೆ ಪ್ರವೇಶಾತಿ ಪಡೆದುಕೊಂಡಿದ್ದಾರೆ. ಕಾಲೇಜು ಮತ್ತು ಆಸ್ಪತ್ರೆ ಹತ್ತಿರವೇ ಇರುವುದರಿಂದ ಪ್ರಯೋಗಿಕ ಕಾರ್ಯಕ್ಕೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ನೆರೆಹೊರೆಯ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಈ ಕಾಲೇಜಿನಲ್ಲೇ ದಾಖಲಾಗಿದ್ದು, ಇದೀಗ ಉಪನ್ಯಾಸಕರ ಕೊರತೆಯಿಂದ ಗುಣಮಟ್ಟದ ಶಿಕ್ಷಣ ಸಿಗದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಪ್ರತಿವರ್ಷವೂ ಇಲ್ಲಿಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಉಪನ್ಯಾಸಕರ ಅಭಾವದಿಂದ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಉಪಸನ್ಯಾಸಕರಿಗೆ ಕೆಲಸ ಒತ್ತಡ ಹೆಚ್ಚಾಗಿದೆ. ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡರು ಸಿಲಬಸ್ ಮುಗಿಸಲು ಸಾಧ್ಯವಾಗುತ್ತಿಲ್ಲ. ಇತ್ತ ವಿದ್ಯಾರ್ಥಿಗಳು ಕಲಿಯಬೇಕೆಂಬ ಆಸಕ್ತಿ ಇದ್ದರೂ ಸರಿಯಾದ ರೀತಿಯಲ್ಲಿ ವಿದ್ಯಾಭ್ಯಾಸ ಸಿಗದೇ, ಸಿಲಬಸ್ ಮುಗಿಯದೇ ಕಲಿಕೆ ಅರ್ಧಂಬರ್ಧವಾಗಿ ನಿಂತು ಬಿಟ್ಟಿದ್ದು, ಭಾರಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜತೆಗೆ ತರಗತಿಗಳ ಕೊರತೆಯಿಂದ ಕೆಲ ವಿದ್ಯಾರ್ಥಿಗಳು ಆಸ್ಪತ್ರೆಯ ವಿವಿಧ ವಾರ್ಡ್ಗಳಲ್ಲಿ ರೋಗಿಗಳ ಆರೈಕೆಯಲ್ಲಿ ನಿರತರಾಗಿದ್ದಾರೆ.
40 ಉಪನ್ಯಾಸಕರ ಬೇಡಿಕೆ ಇದ್ದು, ಕೇವಲ 8 ಮಂದಿ ಮಾತ್ರ ನಮಗೆ ಬೋಧನೆ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಆಗಾಗಾ ಆಸ್ಪತ್ರೆಗೆ ಭೇಟಿ ನೀಡಿದರೂ ಕಾಲೇಜು ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ. ಈಗಾಗಲೇ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನರ್ಸಿಂಗ್ ಕಾಲೇಜಿಗೆ ಹೊಸದಾಗಿ ನಿರ್ಮಿಸಿದ್ದು, ಅದರ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಆದರೆ ಅದನ್ನು ಇದುವರೆಗೂ ಕಾಲೇಜಿಗೆ ಹಸ್ತಾಂತರಿಸಿಲ್ಲ. ಜತೆಗೆ ಇರುವ ಲ್ಯಾಬ್ ಚಿಕ್ಕದಾಗಿದ್ದು, ಲ್ಯಾಬ್ ಕೊಠಡಿ ಅವಶ್ಯಕವಿದೆ. ಆದರೆ ಈ ಬಗ್ಗೆ ಯಾವೊಬ್ಬ ಅಧಿಕಾರಿಯೂ ನಮ್ಮ ಬಳಿ ಸಮಸ್ಯೆ ಏನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
