ವಿಜಯೇಂದ್ರ ಕೇಳಿದ ಕೂಡಲೇ ನಾನು ರಾಜೀನಾಮೆ ಕೊಡಬೇಕಾ?: ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ: 

   “ವಿಜಯೇಂದ್ರ ಕೇಳಿದ ಕೂಡ್ಲೇ ನಾನು ರಾಜೀನಾಮೆ ಕೊಡಬೇಕಾ? ಮುಡಾ ಹಗರಣದಲ್ಲಿ ಯಾಕೆ ರಾಜೀನಾಮೆ ಕೊಡಬೇಕು? ವಿಜಯೇಂದ್ರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಂತಾ ನಾನು ಹೇಳುತ್ತೇನೆ. ಹಾಗೆ ನೋಡಿದರೆ ವಿಜಯೇಂದ್ರ ರಾಜೀನಾಮೆ ಕೊಡಬೇಕು. ಅವರು ರಾಜೀನಾಮೆ ಕೊಡುತ್ತಾರಾ?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

   ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, “ಮುಡಾ ಹಗರಣದಲ್ಲಿ ನಾನು ತಪ್ಪೇ ಮಾಡಿಲ್ಲ. ನಾಳೆ ಶಾಸಕರು, ಸಂಸದರು, ಎಂಎಲ್​ಸಿಗಳು ರಾಜ್ಯಪಾಲರನ್ನು ಭೇಟಿಯಾಗುತ್ತಾರೆ. ಕುಮಾರಸ್ವಾಮಿ, ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್​ಗೆ ಒತ್ತಾಯಿಸುತ್ತಾರೆ. ಕುಮಾರಸ್ವಾಮಿ ವಿರುದ್ಧ ತನಿಖೆ ಆಗಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಆದರೂ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿಲ್ಲ. ಹೀಗಾಗಿ ನಾಳೆ ನಮ್ಮ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಒತ್ತಾಯಿಸುತ್ತಾರೆ” ಎಂದರು. 

   “ಬಿಜೆಪಿ ಹೈಕಮಾಂಡ್ ನನ್ನನ್ನು ಟಾರ್ಗೆಟ್ ಮಾಡಿದೆ. ಬಿಜೆಪಿ ಹಾಗೂ ಜೆಡಿಎಸ್​ನವರು ಟಾರ್ಗೆಟ್ ಮಾಡಿದ್ದಾರೆ. ನಮ್ಮ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಮಾಡಿದ್ದಾರೆ. ಬಿಜೆಪಿಯವರು ಎಂದೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕವೇ ಅಧಿಕಾರಕ್ಕೆ ಬಂದಿದ್ದಾರೆ. ಹೀಗಾಗಿ ಮತ್ತೆ ಆಪರೇಷನ್ ಮಾಡೋ ಪ್ರಯತ್ನಗಳನ್ನು ನಡೆಸಿದ್ದಾರೆ.

   ರವಿ ಗಣಿಗ ಶಾಸಕರಿಗೆ 100 ಕೋಟಿ ಆಫರ್ ಮಾಡಿರೋ ಬಗ್ಗೆ ಹೇಳಿದ್ದಾರೆ. ಅವರು ಮಾತಾಡಿರೋ ವಿಚಾರ ನನಗೂ ಹೇಳಿದ್ರು. ಅದು ಸತ್ಯ ಇರಬಹುದು. ಯಾಕೆಂದರೆ ಬಿಜೆಪಿ ಯಾವತ್ತೂ ಸಂಪೂರ್ಣ ಬಹಮತದಿಂದ ಅಧಿಕಾರಕ್ಕೆ ಬಂದಿಲ್ಲ. ಹಿಂಬಾಗಿಲ ಮೂಲಕವೇ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಸರ್ಕಾರ ಅಸ್ಥಿರಗೊಳಿಸೋ ಪ್ರಯತ್ನ ನಡೆಯುತ್ತಿದೆ” ಎಂದು ಆರೋಪಿಸಿದರು.

   ಮುಡಾ ಹಗರಣದ ಕುರಿತು ನಾಳೆ ವಿಚಾರಣೆ ಇದೆ. ವಿಚಾರಣೆ ಮುಗಿಯಲಿ ನೋಡೋಣ. ರಾಷ್ಟ್ರಪತಿಯನ್ನು ಭೇಟಿ ಮಾಡುವ ಉದ್ದೇಶ ಇಲ್ಲ. ಸದ್ಯ ಆ ಬಗ್ಗೆ ವಿಚಾರ ಮಾಡಿಲ್ಲ ಎಂದರು.

Recent Articles

spot_img

Related Stories

Share via
Copy link
Powered by Social Snap