ಶೇನ್ ವಾರ್ನ್​ಗೆ ಶ್ರದ್ಧಾಂಜಲಿ: ಎರಡನೇ ದಿನದಾಟ ಆರಂಭಕ್ಕೂ ಮುನ್ನ ಒಂದು ನಿಮಿಷ ಮೈದಾನವಿಡೀ ಮೌನ

 ಶೇನ್ ವಾರ್ನ್:

 ಶೇನ್ ವಾರ್ನ್ ನಿಧನಕ್ಕೆ ಇಡೀ ಕ್ರಿಕೆಟ್ ಜಗತ್ತೇ ಕಂಬನಿ ಮಿಡಿಯುತ್ತಿದೆ. ಭಾರತ ಕ್ರಿಕೆಟ್ ತಂಡದ ಆಟಗಾರರು ಕೂಡ ವಾರ್ನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಎರಡನೇ ದಿನದಾಟ ಆರಂಭಕ್ಕೂ ಮುನ್ನ ಭಾರತ ಹಾಗೂ ಶ್ರೀಲಂಕಾ ತಂಡದ ಆಟಗಾರರು ಮೈದಾನದಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್​ ಇತಿಹಾಸ ಕಂಡ ಶ್ರೇಷ್ಠ ಲೆಗ್​ ಸ್ಪಿನರ್​​ಗಳಲ್ಲಿ ಒಬ್ಬರಾದ ಶೇನ್​ ವಾರ್ನ್  ಶುಕ್ರವಾರ ರಾತ್ರಿ ಹೃದಯ ಸ್ತಂಭನದಿಂದ ನಿಧನರಾದರು.  ವಾರ್ನ್ ಕ್ಕೆ ನಿಧನಕ್ಕೆ ಇಡೀ ಕ್ರಿಕೆಟ್  ಜಗತ್ತೇ ಕಂಬನಿ ಮಿಡಿಯುತ್ತಿದೆ.

ಭಾರತದ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಭಾರತ ಕ್ರಿಕೆಟ್ ತಂಡದ ಆಟಗಾರರು ಕೂಡ ವಾರ್ನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಎರಡನೇ ದಿನದಾಟ ಆರಂಭಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡ ಹಾಗೂ ಶ್ರೀಲಂಕಾ  ಕ್ರಿಕೆಟ್ ತಂಡದ ಆಟಗಾರರು ಮೈದಾನದಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಲ್ಲದೆ ಉಭಯ ತಂಡದ ಆಟಗಾರರು ಕೈಗೆ ಕಪ್ಪುಪಟ್ಟಿ ಧರಿಸಿ ಗೌರವ ಸೂಚಿಸಿದರು.

ಶೇನ್​ ವಾರ್ನ್ ಹಠಾತ್ ನಿಧನದಿಂದ ಆಘಾತಕ್ಕೊಳಗಾದ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದು, ‘ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಭಾರತೀಯರಿಗೆ ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಹಾಗೆಯೇ ಭಾರತೀಯರ ಹೃದಯದಲ್ಲೂ ನೀವು ವಿಶೇಷ ಸ್ಥಾನ ಗಳಿಸಿದ್ದೀರಿ. ನೀವಿದ್ದ ಜಾಗದಲ್ಲಿ ಹರುಷಕ್ಕೆ ಕೊರತೆ ಇರುತ್ತಿರಲಿಲ್ಲ. ನಿಮ್ಮ ಸಾವು ತುಂಬಾ ದುಃಖ ತಂದಿದೆ’, ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

‘ನಂಬಲು ಸಾಧ್ಯವಿಲ್ಲ. ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರು, ಸೂಪರ್‌ಸ್ಟಾರ್ ಶೇನ್ ವಾರ್ನ್ ಇನ್ನಿಲ್ಲ. ಜೀವನ ತುಂಬಾ ದುರ್ಬಲವಾಗಿದೆ. ಆದರೆ, ಇದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’, ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಪೊಲೀಸರಿಂದ ಸ್ಪಷ್ಟನೆ:

ಥಾಯ್ಲೆಂಡ್​ಗೆ ತೆರಳಿದ್ದ ಶೇನ್ ವಾರ್ನ್ ಅವರ ಜೀವ ಉಳಿಸಲು ಮೂವರು ಸ್ನೇಹಿತರು ಸುಮಾರು 20 ನಿಮಿಷಗಳ ಕಾಲ ಹೋರಾಡಿದರು ಎಂದು ಥಾಯ್ ಪೊಲೀಸರು ತಿಳಿಸಿದ್ದಾರೆ. ವಾರ್ನ್ ಮತ್ತು ಇತರ ಮೂವರು ಸ್ನೇಹಿತರು ಕೊಹ್ ಸಮುಯಿಯಲ್ಲಿರುವ ಖಾಸಗಿ ವಿಲ್ಲಾದಲ್ಲಿ ತಂಗಿದ್ದರು. ಈ ವೇಳೆ ವಾರ್ನ್ ಭೋಜನಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ನೇಹಿತರಲ್ಲಿ ಒಬ್ಬರು ಈ ಬಗ್ಗೆ ವಿಚಾರಿಸಲು ಹೋದರು ಎಂದು ಥಾಯ್ ಪೊಲೀಸರು ತಿಳಿಸಿದ್ದಾರೆ.

ಇವರ ಮೃತದೇಹವನ್ನು ಶವಪರೀಕ್ಷೆಗಾಗಿ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಶನಿವಾರ ಶೇನ್ ವಾರ್ನ್ ಅವರ ಸ್ನೇಹಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಚಾಚವಾನ್ ನೀಡಿದ ಮಾಹಿತಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಪೊಲೀಸರು ಈ ಸಾವನ್ನು ಅನುಮಾನಾಸ್ಪ ಸಾವು ಎಂದು ಪರಿಗಣಿಸಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.

ಕೆಲ ವರದಿಗಳ ಪ್ರಕಾರ ಗುರುವಾರ ಶೇನ್ ವಾರ್ನ್ ಥಾಯ್ಲೆಂಡ್‌ಗೆ ಬಂದಿಳಿದಿದ್ದರು ಎನ್ನಲಾಗಿದೆ. ಕೊಹ್ ಸಮುಯಿನ ಐಷಾರಾಮಿ ಸಮುಜನ ವಿಲ್ಲಾಸ್ ರೆಸಾರ್ಟ್‌ಲ್ಲಿ ವಾಸ್ತವ್ಯ ಹೂಡಿದ್ದರು. ಇದೇ ವಿಲ್ಲಾದಲ್ಲಿ ವಾರ್ನ್ ಮೃತಪಟ್ಟಿದ್ದಾರೆ ಎಂಬ ಅಂಶವನ್ನು ಸ್ಥಳೀಯ ಪೊಲೀಸರು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap