ಶೃಂಗ ಸಮ್ಮೇಳನ – 15 ವರ್ಷಗಳ ಬಳಿಕ ಒಂದಾದ ಪಂಚಪೀಠಾಧೀಶರು

ದಾವಣಗೆರೆ:

    40 ವರ್ಷಗಳ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವ ಶೃಂಗ ಸಮ್ಮೇಳನದಲ್ಲಿ 15 ವರ್ಷಗಳ ನಂತರ ಪಂಚಪೀಠಾಧೀಶರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

    ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ದಾವಣಗೆರೆಯ ರೇಣುಕಾ ಮಂದಿರದಲ್ಲಿ ಶೃಂಗಾ ಸಮ್ಮೇಳನ ಜರುಗಿತು. ಇದೇ ಮೊದಲ ಬಾರಿ ಪಂಚಪೀಠಗಳಾದ ಕೇದಾರ, ರಂಭಾಪುರಿ, ಉಜ್ಜಯಿನಿ, ಕಾಶಿ, ಶ್ರೀಶೈಲ ಪೀಠದ ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿ ಕಂಡು ಬರುವ ಮೂಲಕ ಒಗ್ಗಟ್ಟು ಪ್ರದರ್ಶಿಸುವಂತೆ ಕರೆ ನೀಡಿದರು. ಕಳೆದ 15 ವರ್ಷದ ನಂತರ ಪಂಚಪೀಠಾಧೀಶರು ಒಂದಾಗಿ ಸಮಾವೇಶದಲ್ಲಿ ಭಾಗಿಯಾಗಿ ಉಪಜಾತಿಗಳನ್ನ ಬಳಸುವ ಬದಲು ಅಖಂಡವಾಗಿ ವೀರಶೈವ ಲಿಂಗಾಯತವೆಂದು ಬಳಕೆ ಮಾಡುವಂತೆ ದೇಶದ ಎಲ್ಲಾ ವೀರಶೈವ ಲಿಂಗಾಯತ ಸಮಾಜದ ಜನರಿಗೆ ಕರೆನೀಡಿದರು

   ಇದೇ ವೇಳೆ ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡೀತಾರಾಧ್ಯ ಶಿವಾಚಾರ್ಯ ಜಗದ್ಗುರು ಮಾತನಾಡಿ, ಇಸ್ಲಾಂ ಧರ್ಮದಲ್ಲಿ 786 ಇದ್ದ ಹಾಗೇ ನಮ್ಮ ಸಮುದಾಯಕ್ಕೆ 856 (8- ಅಷ್ಟಾವರ್ಣ. 5- ಪಂಚಾಚಾರ್ಯ. 6- ಶಟಸ್ಥಳ) ಕೋಡ್ ಇದೆ. ಇಡೀ ವೀರಶೈವ ಸಮಗ್ರ ಸಮುದಾಯವನ್ನು ಒಂದುಗೂಡಿಸುವ ಕೆಲಸವಾಗುತ್ತಿದೆ. ಸರ್ಕಾರಿ ಸೌಲಭ್ಯ ಹಾಗೂ ಮೀಸಲಾತಿಯನ್ನು ಪಡೆದುಕೊಳ್ಳಲು ಉಪಜಾತಿ ಬರೆಸಿ. ಆದರೆ ಜಾತಿ ಮಾತ್ರ ವೀರಶೈವ ಲಿಂಗಾಯತ ಎಂದು ಬರೆಸಿ. ಅದೇ ರೀತಿ ಕೇಂದ್ರ ಸರ್ಕಾರ ಜಾತಿ ಸಮೀಕ್ಷೆಯಲ್ಲಿ ಜಾತಿ ಬದಲು ಸಂಪ್ರದಾಯ. ಉಪಜಾತಿ ಕಾಲಂ ಮಾಡಲು ಮನವಿ ಮಾಡಿದ್ದಾರೆ ಎಂದು ತಿಳಿಸಿದರು. 

   ಬಳಿಕ ರಂಭಾಪುರಿ ಶ್ರೀಗಳು ಮಾತನಾಡಿ, ಬಿಎಸ್ ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. ಆದರೆ ಒಮ್ಮೆ ಕೂಡ ಪೂರ್ಣ ಅವಧಿ ಅಧಿಕಾರ ಮಾಡಲು ಬಿಡಲಿಲ್ಲ, ಇದರಿಂದ ಇಡೀ ಸಮಾಜಕ್ಕೆ ಆಘಾತ ಉಂಟಾಯಿತು. ಜೊತೆಗೆ ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು. ಅವರನ್ನು ನೆಮ್ಮದಿಯಿಂದ ಇರಲು ಬಿಡಲಿಲ್ಲ, ಕಿರುಕುಳಕೊಟ್ಟರು. ಅವರು ಬಹಳ ನೋವು ಅನುಭವಿಸಿದರು. ಆದ್ದರಿಂದ ಅವರು ಎಲ್ಲೇ ಹೋದರೂ ಹೆಚ್ಚು ಮಾತನಾಡುವುದಿಲ್ಲ. ಇನ್ನು ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ, ಕ್ರಿಯಾಶೀಲರಾಗಿ ಸಂಘಟನೆ ಮಾಡ್ತಿದ್ದಾರೆ. ಅವರ ಮುಂದಿನ ದಿನ ರಾಜಕೀಯ ಜೀವನದಲ್ಲಿ ಉಜ್ವಲವಾಗಲಿದೆ ಎಂದು ಹೇಳಿದರು.

   ಕೇದಾರ ಪೀಠದ ಭೀಮಾಶಂಕರಲಿಂಗ ಸ್ವಾಮೀಜಿ ಮಾತನಾಡಿ, ಜಾತಿಗಣತಿ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಸಮಾಜದ ಅಧ್ಯಯನ ಆಗಬೇಕಾಗಿದೆ. ಜಾತಿಗಣತಿ ಮಾಡುವ ಯಾವುದೇ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಇದೇ ಕಾರಣಕ್ಕೆ ವೀರಶೈವ ಲಿಂಗಾಯತರು ಒಂದು ಸಮಿತಿ ಮಾಡಿ, ಜಾತಿಗಣತಿ ಯಾವ ಜಾತಿ ಎಂದು ಸರಿಯಾಗಿ ಭರ್ತಿ ಮಾಡಬೇಕು. ಸರ್ಕಾರದ ಸೌಲಭ್ಯಕ್ಕಾಗಿ ಬೇರೆ ಬೇರೆ ಜಾತಿ ಬರೆಸುವುದು ಸರಿಯಲ್ಲ. ಕೇದಾರಕ್ಕೆ ಪ್ರಧಾನಿಗಳು ಬಂದಾಗ ಈ ವಿಚಾರ ಅವರ ಗಮನಕ್ಕೆ ತಂದಿದ್ದೇವೆ. ಲಿಂಗಾಯತ ಮತ್ತು ವೀರಶೈವ ಒಂದೇ ಎಂಬುದನ್ನ ಸ್ಪಷ್ಟಪಡಿಸಲಾಗಿದೆ. ಪಂಚಪೀಠಗಳು ಹಿಂದೇ ಕೂಡಾ ಒಂದೇ ಇದ್ದವು, ಮುಂದೇ ಕೂಡಾ ಒಂದೇ ಆಗಿರುತ್ತವೆ ಎಂದು ಘೋಷಣೆ ಮಾಡಿದರು.

   ಉಜ್ಜಯನಿ ಪೀಠದ ಜಗದ್ಗುರುಗಳು ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಕಥೆ ಹೇಳುವ ಮೂಲಕ ಗುರು ವಿರಕ್ತರು ಒಂದಾಗಬೇಕು. ಹಾಗೆಯೇ ವೀರಶೈವ ಲಿಂಗಾಯತರು ಎಲ್ಲಾರೂ ಒಟ್ಟಾಗಿ ಇರಬೇಕಿದೆ. ಸಮಾಜದ ಎಲ್ಲಾ ರಾಜಕೀಯ ಮುಖಂಡರು ಸಮಾಜದ ಒಳಿತಿಗಾಗಿ ಒಂದಾಗಬೇಕಿದೆ. ಸಮಾಜದ ಕೆಲಸಕ್ಕೆ ಪಂಚಾಚಾರ್ಯರು ಕರೆ ಕೊಟ್ಟ ತಕ್ಷಣ ಮುಂದಾಗಬೇಕು. ಮಹಾರಾಷ್ಟ್ರದಲ್ಲಿ ಒಂದೂವರೆ ಕೋಟಿ ಜನರು ವೀರಶೈವ ಲಿಂಗಾಯತರಿದ್ದಾರೆ. ಕರ್ನಾಟಕದಲ್ಲಿ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತರು ಇದ್ದಾರೆ. ಕೇಂದ್ರ ಸರ್ಕಾರ ತರುವ ಜಾತಿಗಣತಿಯಲ್ಲಿ ಮೂರು ಕಾಲಂಗಳನ್ನು ಮಾಡಬೇಕು. ಆಗ ಮಾತ್ರ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಸ್ಪಷ್ಟವಾಗಲಿದೆ ಎಂದರು

Recent Articles

spot_img

Related Stories

Share via
Copy link