ಶತಕದ ರಹಸ್ಯ ಬಿಚ್ಚಿಟ್ಟ ಶುಭಮನ್‌ ಗಿಲ್…..!

ನವದೆಹಲಿ :

    2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ದುಬೈನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು 6 ವಿಕೆಟ್‌ಗಳಿಂದ ಮಣಿಸಿದೆ. ಈ ಮಹತ್ವದ ಗೆಲುವಿನಲ್ಲಿ ಶುಭ್​ಮನ್ ಗಿಲ್ ದೊಡ್ಡ ಪಾತ್ರವಹಿಸಿದ್ದಾರೆ. ಅವರ ಅಜೇಯ 101 ರನ್‌ಗಳ ಇನ್ನಿಂಗ್ಸ್‌ನಿಂದಾಗಿ ಟೀಮ್ ಇಂಡಿಯಾ ಗೆಲುವು ಸಾಧಿಸುವುದು ಸುಲಭವಾಯಿತು. 

   ಒಂದು ಹಂತದಲ್ಲಿ ಟೀಮ್ ಇಂಡಿಯಾ ಒತ್ತಡಕ್ಕೆ ಒಳಗಾದಾಗ ನೆಲಕಚ್ಚಿ ನಿಂತು ಗಿಲ್ ಮಾಡಿದ ಬ್ಯಾಟಿಂಗ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿತು. ಒಂದು ಹಂತದಲ್ಲಿ ಪ್ರಮುಖ ವಿಕೆಟ್​​ಗಳನ್ನು ಕಳೆದುಕೊಂಡು ತಂಡವು ಸಂಕಷ್ಟಕ್ಕೆ ಸಿಲುಕಿದ್ದಾಗ ಗಿಲ್‌ಗೆ ಡ್ರಸಿಂಗ್ ರೂಮ್​ನಿಂದ ಒಂದು ಸಂದೇಶ ಬಂದಿತ್ತಂತೆ. ಆ ಬಳಿಕ ಅವರು ವಿಕೆಟ್ ಉಳಿಸಿಕೊಂಡು ಆಟವಾಡಿ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಶತಕ ಗಳಿಸಿದ್ದಲ್ಲದೆ, ಕೊನೆಯವರೆಗೂ ಆಟವಾಡಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.

   ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ ಕೇವಲ 35 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಂತರ ಚೇತರಿಸಿಕೊಂಡು, 229 ರನ್‌ಗಳ ಗುರಿಯನ್ನು ಟೀಮ್ ಇಂಡಿಯಾಕ್ಕೆ ನಿಗದಿಪಡಿಸಿತು. ಇದನ್ನು ಬೆನ್ನಟ್ಟಿದ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಮೊದಲ 10 ಓವರ್‌ಗಳಲ್ಲಿ 69 ರನ್ ಗಳಿಸಿದರು. ಅಲ್ಲಿಯವರೆಗೂ ಟೀಮ್ ಇಂಡಿಯಾ ನಿರಾಯಾಸವಾಗಿ ಪಂದ್ಯ ಗೆಲ್ಲಲಿದೆ ಎಂದೇ ಕ್ರಿಕೆಟ್ ಅಭಿಮಾನಿಗಳು ಭಾವಿಸಿದ್ದರು. 

   ಆದರೆ, ಬರುತ್ತಾ ಬರುತ್ತಾ ನಿಧಾನಗತಿಯ ವಿಕೆಟ್‌ನಿಂದಾಗಿ ರನ್ ಗಳಿಸುವುದು ಕಷ್ಟಕರವಾಗಿತ್ತು. ಈ ಹಂತದಲ್ಲಿ ಟೀಮ್ ಇಂಡಿಯಾ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳಲಾರಂಭಿಸಿತು. ತಂಡದ ಮೊತ್ತ 144 ರನ್‌ ಆಗುವಾಗ ರೋಹಿತ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಪೆವಿಲಿಯನ್‌ಗೆ ಮರಳಿದ್ದರು. ಇದರಿಂದಾಗಿ ಟೀಮ್ ಇಂಡಿಯಾ ಒತ್ತಡಕ್ಕೆ ಸಿಲುಕಿತು. ಆದಾಗ್ಯೂ, ಗಿಲ್ ಇನ್ನೂ ಕ್ರೀಸ್‌ನಲ್ಲಿದ್ದರು. 

   ಭಾರತ ಇನ್ನೂ 95 ರನ್ ಗಳಿಸಬೇಕಾಗಿತ್ತು. ಈ ಹಂತದಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಕೊನೆಯವರೆಗೂ ಬ್ಯಾಟಿಂಗ್ ಮಾಡಲು ಪ್ರಯತ್ನಿಸಬೇಕು ಎಂದು ಗಿಲ್​ಗೆ ಸಂದೇಶ ಕಳುಹಿಸಿದರು. ಈ ಸಲಹೆಯನ್ನು ಪಾಲಿಸಿದ್ದರಿಂದಾಗಿ ಶತಕ ಗಳಿಸುವುದು ಮತ್ತು ತಂಡವನ್ನು ಗೆಲುವಿನತ್ತ ಕೊಂಡೊಯ್ಯುವುದು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. 

   ಬಾಂಗ್ಲಾದೇಶ 49.4 ಓವರ್​​ಗಳಲ್ಲಿ 228 ರನ್​ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 46.3 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಭಾರತ ಪರ ಮೊಹಮ್ಮದ್ ಶಮಿ 5 ವಿಕೆಟ್ ಕಬಳಿಸಿದರು.

Recent Articles

spot_img

Related Stories

Share via
Copy link