ತುಮಕೂರು :
ತ್ರಿವಿಧ ದಾಸೋಹಿ ಸಿದ್ಧಗಂಗೆಯ ಲಿಂಗೈಕ್ಯ ಕರ್ನಾಟಕ ರತ್ನ ಡಾ.ಶ್ರೀ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ನಾಳೆ ನಡೆಯಲಿದೆ.
ನಾಡಿನ ಅಗ್ರ ಸಂತರೆನಿಸಿದ್ದ ಪೂಜ್ಯ ಶ್ರೀಗಳು 2019 ಜ.21ರಂದು ಇಹಲೋಕ ತ್ಯಜಿಸಿ ಲಿಂಗೈಕ್ಯರಾಗಿದ್ದು, ದ್ವಿತೀಯ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಮಠದಲ್ಲಿರುವ ಶ್ರೀಗಳ ಗದ್ದುಗೆಗೆ ಗುರುವಾರ ಮುಂಜಾನೆ ಬೆಳಿಗ್ಗೆ 4ರಿಂದಲೇ ವಿಶೇಷ ಪೂಜೆ, ರುದ್ರಾಭಿಷೇಕ ನೆರವೇರಲಿದೆ. ವಿಶೇಷವಾಗಿ ಪುಣ್ಯಸ್ಮರಣೆಗೆ ನಾಡಿನ ವಿವಿಧೆಡೆಯಿಂದ 30 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಎಲ್ಲಾ ಭಕ್ತರಿಗೆ ಮಠದ ನಾಲ್ಕು ಕಡೆ ಗುರುವಂದನೆ ಮಾದರಿಯಲ್ಲೇ ವಿಶೇಷ ದಾಸೋಹದ ವ್ಯವಸ್ಥೆ ಮಾಡಲಾಗಿದೆ.
ಸಿಎಂರಿಂದ ಗದ್ದುಗೆ ದರ್ಶನ:
ವೇದಿಕೆ ಕಾರ್ಯಕ್ರಮವನ್ನು ಮಠದ ಸಿದ್ಧಲಿಂಗೇಶ್ವರ ವೇದ ಸಂಸ್ಕøತಿ ಪಾಠಶಾಲಾ ಮುಂಭಾಗದ ವೇದಿಕೆಯಲ್ಲಿ ಗುರುವಾರ ಬೆಳಿಗ್ಗೆ 11ಕ್ಕೆ ಆಯೋಜಿಸಲಾಗಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ ಸಾನಿಧ್ಯವಹಿಸುವರು. ಸಚಿವರು, ರಾಜಕೀಯ ನಾಯಕರು, ಗಣ್ಯರು, ನಾಡಿನ ವಿವಿಧೆಡೆಯ ಮಠಾಧೀಶರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದು, ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿಗಳು ಶ್ರೀಗಳ ಗದ್ದುಗೆ ದರ್ಶನ ಮಾಡಲಿದ್ದಾರೆ.
ವೀರಾಪುರ ಅಭಿವೃದ್ಧಿಯ 3ಡಿ ಬಿಡುಗಡೆ:
ಕಾರ್ಯಕ್ರಮದಲ್ಲಿ ಶಿವಕುಮಾರಸ್ವಾಮೀಜಿ ಅವರ ಹುಟ್ಟೂರು ಮಾಗಡಿ ತಾಲೂಕು ವೀರಾಪುರ ಸಮಗ್ರ ಅಭಿವೃದ್ಧಿ, ಪುತ್ಥಳಿಗೆ ಸ್ಥಾಪನೆಗೆ ಸಂಬಂಧಿಸಿದಂತಹ 3-ಡಿ ಚಿತ್ರಾವಳಿಯನ್ನು ಸಿಎಂ ಬಿಡುಗಡೆಗೊಳಿಸಲಿದ್ದಾರೆ ಎಂದು ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ಪ್ರಜಾಪ್ರಗತಿಗೆ ಮಾಹಿತಿ ನೀಡಿದರು.
ಪೂಜ್ಯ ಡಾ.ಶ್ರೀ.ಶಿವಕುಮಾರಸ್ವಾಮಿಗಳು ಹಾಕಿಕೊಟ್ಟ ತ್ರಿವಿಧ ದಾಸೋಹದ ಮಾರ್ಗದಲ್ಲಿ ಶ್ರೀ ಮಠ ಮುನ್ನೆಡೆಯುತ್ತಿದೆ. ನಾಳೆ ದ್ವಿತೀಯ ವರ್ಷದ ಪುಣ್ಯಸ್ಮರಣೆಗೆ ನಾಡಿನ ವಿವಿಧೆಡೆಯಿಂದ ಸಹಸ್ರಾರು ಮಂದಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು.
-ಶ್ರೀ.ಸಿದ್ಧಲಿಂಗಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷರು.
ಬೂಂದಿ, ಮಾಲ್ದಿ, ಚಿತ್ರಾನ್ನ, ಕೀರಿನ ದಾಸೋಹ
ಸಿದ್ಧಗಂಗೆಯ ಲಿಂಗೈಕ್ಯ ಶ್ರೀಗಳ ಪುಣ್ಯಸ್ಮರಣೆಗೆ ಬರುವ ಭಕ್ತರಿಗಾಗಿ ನಾಲ್ಕು ಕಡೆ ಸಾವಿರಾರು ಮಂದಿ ಕೂರಲು ಅನುಕೂಲ ಕಲ್ಪಿಸಿ, ವಿಶೇಷ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ. ಹಿಂದೆ ಶ್ರೀಗಳ ಗುರುವಂದನೆಸಂದರ್ಭದಲ್ಲಿ ಬಡಿಸುತ್ತಿದ್ದ ಮಾದರಿಯಲ್ಲೇ ಸಿಹಿಬೂಂದಿ, ಕಾರಬೂಂದಿ,ಚಿತ್ರಾನ್ನ, ಪಾಯಸ, ಅನ್ನಸಾಂಬಾರ್, ಮಜ್ಜಿಗೆ, ಹೆಸರುಬೇಳೆ, ಪಲ್ಯ, ಉಪ್ಪಿನಕಾಯಿ ಬಡಿಸುತ್ತಿದ್ದು, ರಾತ್ರಿ ಇದರ ಜೊತೆಗೆ ಮಾಲ್ಡಿ ಪುಡಿಯನ್ನು ವಿಶೇಷವಾಗಿ ಭಕ್ತರಿಗೆ ದಾಸೋಹದಲ್ಲಿ ನೀಡಲಾಗುತ್ತದೆ. ಈಸಂಬಂಧ ಕಳೆದ ಎರಡು ದಿನಗಳಿಂದ ಸಿದ್ಧತೆಗಳು ಭರ್ಜರಿಯಾಗಿ ಸಾಗಿವೆ.
ಸಿಎಂ ಘೋಷಣೆ ಬಗ್ಗೆ ಭಕ್ತರಲ್ಲಿ ನಿರೀಕ್ಷೆ
ತ್ರಿವಿಧ ದಾಸೋಹಿಗಳಾಗಿದ್ದ ಶ್ರೀಗಳು ಮಠಕ್ಕೆ ಬರುವ ಭಕ್ತರೆಲ್ಲರಿಗೂ ದಾಸೋಹ ನೀಡುತ್ತಿದ್ದ ಕಾರಣಕ್ಕೆ ಇಡೀ ವಿಶ್ವದಾದ್ಯಂತ ಮನೆ ಮಾತಾಗಿದ್ದರು. ಅವರು ಅಗಲಿದ ದಿನವೂ ಇಡೀ ನಾಡಿಗೆ ನಾಡೇ ದಾಸೋಹ ವಿತರಿಸಿ ಸಂತ ಚೇತನಾತ್ಮಕ್ಕೆ ವಿಶೇಷ ನಮನ ಸಲ್ಲಿಸಿದ್ದರು. ಇದೇ ಕಾರಣಕ್ಕೆ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆಯ ದಿನವಾದ ಜನವರಿ 21ಅನ್ನು ದಾಸೋಹ ದಿನವಾಗಿ ಸರಕಾರ ಘೋಷಿಸಬೇಕೆಂಬ ಬೇಡಿಕೆ ಭಕ್ತರ ವಲಯ ಹಾಗೂ ಪಕ್ಷಾತೀತವಾಗಿ ರಾಜಕೀಯ ನಾಯಕರಲ್ಲಿ ಪ್ರಬಲವಾಗಿ ಕೇಳಿಬಂದಿದ್ದು, ಮುಖ್ಯಮಂತ್ರಿಗಳು ಈ ಸಂಬಂಧ ಮಠಕ್ಕೆ ಆಗಮಿಸಿದ ಸಂದರ್ಭದಲ್ಲಿ ಘೋಷಣೆ ಮಾಡುವರೇ ಎಂಬ ನಿರೀಕ್ಷೆ ಭಕ್ತರಲ್ಲಿ ಮನೆ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ