ಸಿದ್ಧಗಂಗಾ ಕ್ಷೇತ್ರದಲ್ಲಿ ವಿಜೃಂಭಣೆಯ ಬೆಳ್ಳಿ ಪಲ್ಲಕ್ಕಿ ಉತ್ಸವ

 ತುಮಕೂರು: 

      ತಣ್ಣನೆಯ ತಂಗಾಳಿ ನಡುವೆ ಬಾನಂಗಳದಲ್ಲಿ ಚಿತ್ತಾರ ಮೂಡಿಸುತ್ತಾ ಭಕ್ತ ಸಮೂಹದ ಹರ್ಷ ಚಿತ್ತದ ನಡುವೆ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಸಿದ್ಧಗಂಗಾ ಕ್ಷೇತ್ರದಲ್ಲಿ ಸಿದ್ಧಲಿಂಗೇಶ್ವರ ಸ್ವಾಮಿಯವರ ಬೆಳ್ಳಿ ಪಾಲಕಿ ಉತ್ಸವ ಶನಿವಾರ ರಾತ್ರಿ ವೈಭವಯುತವಾಗಿ ಜರುಗಿತು.

      ರಾಜ್ಯವಷ್ಟೇ ಅಲ್ಲದೆ ಅಂತರರಾಜ್ಯ ಮಟ್ಟದಲ್ಲಿಯೂ ಕೀರ್ತಿ ಗಳಿಸಿರುವ ಸಿದ್ಧಗಂಗಾ ಮಠದ 15 ದಿನಗಳ ಜಾತ್ರಾ ಮಹೋತ್ಸವದಲ್ಲಿ ಶೂನ್ಯ ಸಿಂಹಾಸನರೋಹಣೋತ್ಸವ, ಮುತ್ತಿನ ಪಾಲಕಿ ಉತ್ಸವ, ರಥೋತ್ಸವ, ಬೆಳ್ಳಿ ಪಾಲಕಿ ಉತ್ಸವ ಹಾಗೂ ತೆಪೆÇ್ಪೀತ್ಸವ. ಪಂಚ ಬ್ರಹ್ಮೋತ್ಸವಗಳೂ ಸೇರಿದಂತೆ ವಿವಿಧ ಉತ್ಸವಗಳು ಈ ಜಾತ್ರೆಯಲ್ಲಿ ವಿಶೇಷವಾಗಿ ನಡೆಯುತ್ತವೆ.

      ಸಿದ್ಧಲಿಂಗೇಶ್ವರಸ್ವಾಮಿಯ ರಥೋತ್ಸವ ಬೆಳಿಗ್ಗೆ ಆದರೆ ಬೆಳ್ಳಿ ಪಾಲಕಿ ಉತ್ಸವ ಮಧ್ಯರಾತ್ರಿ ನಡೆಯುತ್ತದೆ. ಶನಿವಾರ ರಾತ್ರಿ 11.45 ಕ್ಕೆ ಆರಂಭಗೊಂಡ ಸಿದ್ಧಲಿಂಗೇಶ್ವರಸ್ವಾಮಿಯ ಬೆಳ್ಳಿ ಪಾಲಕಿ ಉತ್ಸವವು ಮಧ್ಯರಾತ್ರಿ 1.45ರವರೆಗೆ ಅತ್ಯಂತ ವೈಭವಯುತವಾಗಿ ನಡೆಯಿತು.

      ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮಿಗಳು ಸೇರಿದಂತೆ ನಾಡಿನ ವಿವಿಧ ಮಠಗಳ ಮಠಾಧೀಶರರ ಸಮ್ಮುಖದಲ್ಲಿ ಲಕ್ಷಾಂತರ ಭಕ್ತರ ನಡುವೆ ಬೆಳ್ಳಿ ಪಾಲಕಿ ಉತ್ಸವ ವಿಶೇಷವಾಗಿ ಜರುಗಿತು. ಅಲಂಕೃತ ಬೆಳ್ಳಿ ಪಾಲಕಿಯಲ್ಲಿ ಕ್ಷೇತ್ರನಾಥ ಸಿದ್ಧಲಿಂಗೇಶ್ವರ ಸ್ವಾಮಿಯವರನ್ನು ಕೂರಿಸಿ ಮಂಗಳವಾದ್ಯ, ನಂದಿಧ್ವಜ, ಛತ್ರಿ, ಛಾಮರ, ಕೊಂಬು, ಕಹಳೆ, ವೀರಗಾಸೆ ಸೇರಿದಂತೆ ವಿವಿಧ ಮಂಗಳವಾದ್ಯಗಳು ಮೊಳಗುತ್ತಲೇ ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗಾ ಸ್ವಾಮಿಗಳು ಬೆಳ್ಳಿಪಾಲಕಿ ಉತ್ಸವಕ್ಕೆ ಚಾಲನೆ ನೀಡಿದರು.

      ಆಕರ್ಷಕ ಸಿಡಿಮದ್ದು ಪ್ರದರ್ಶನ:

      ಸಿದ್ಧಗಂಗಾ ಮಠದ ಆವರಣದಲ್ಲಿ ನಡೆಯುವ ಈ ಬೆಳ್ಳಿ ಪಾಲಕಿ ಉತ್ಸವವನ್ನು ವೀಕ್ಷಿಸಲು ಜಿಲ್ಲೆಯಿಂದಷ್ಟೇ ಅಲ್ಲದೇ ರಾಜ್ಯದ ವಿವಿಧ ಭಾಗಗಳಿಂದಲೂ ಅಸಂಖ್ಯಾತ ಭಕ್ತರು ಮಠದಲ್ಲಿ ಸೇರಿದ್ದರು. ಬೆಳ್ಳಿ ಪಾಲಕಿ ಉತ್ಸವ ಆರಂಭವಾದಾಗ ಮಠದ ಆವರಣದಲ್ಲಿ ಬಣ್ಣ ಬಣ್ಣದ ಬೆಳಕಿನ ಚಿತ್ತಾರ ಮೂಡಿಸುವ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಎಲ್ಲರ ಮನಸ್ಸನ್ನು ತಣಿಸಿತು.

      ಈ ವಿಶೇಷ ಸಿಡಿಮದ್ದಿನ ಪ್ರದರ್ಶನವನ್ನು ವೀಕ್ಷಿಸಲು ಭಕ್ತರು ಮಠದ ಸುತ್ತಲೂ ನೆರೆದಿದ್ದರು. ಬೆಳ್ಳಿ ಪಾಲಕಿ ಉತ್ಸವಕ್ಕೆ ಕಳೆದ ರಾತ್ರಿ ಮಠಕ್ಕೆ ಆಗಮಿಸಿದ್ದ ಭಕ್ತರ ಸಂಖ್ಯೆ ಅಧಿಕವಾಗಿದ್ದ ಹಿನ್ನಲೆಯಲ್ಲಿ ವಸ್ತು ಪ್ರದರ್ಶನ ಸೇರಿದಂತೆ ಮಠದ ಸುತ್ತಲೂ ಇರುವ ಪ್ರದರ್ಶನಗಳನ್ನು ವೀಕ್ಷಿಸಲು ಮಧ್ಯರಾತ್ರಿಯವರೆಗೂ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು.

  ಬಿಗಿ ಪೊಲೀಸ್ ಬಂದೋಬಸ್ತ್ :

      ಮಧ್ಯರಾತ್ರಿಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಿದ್ದರೂ ಯಾವುದೇ ರೀತಿ ತೊಂದರೆಯಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Recent Articles

spot_img

Related Stories

Share via
Copy link
Powered by Social Snap