ತುಮಕೂರು
ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಜ.18ರಿಂದ ನಗರದ ವಿವಿಧ ಬಡಾವಣೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಸಮಿತಿಯ ಗೌರವಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಅವರು ಹೇಳಿದರು. ಸಿದ್ಧಗಂಗಾ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳು ಮಾತನಾಡಿದ್ದಾರೆ.
ದೇಶ ಚೆನ್ನಾಗಿರಬೇಕು ಎಂದರೆ ಕುಟುಂಬ ಚೆನ್ನಾಗಿರಬೇಕು. ಇಂದು ಕುಟುಂಬ ವ್ಯವಸ್ಥೆ ಶಿಥಿಲವಾಗುತ್ತಿದೆ. ಕುಟುಂಬಗಳಲ್ಲೇ ಸಹಕಾರವಿಲ್ಲ, ಶಾಂತಿ, ನೆಮ್ಮದಿಯಿಲ್ಲ, ಇರುವ ನಾಲ್ಕು ಜನರೇ ನಾಲ್ಕು ಮುಖಗಳಾಗಿ ಕುಳಿತುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ದೇಶ ಸರಿಹೋಗಬೇಕು ಎಂದರೆ ಮೊದಲು ಕುಟುಂಬ ಸರಿಯಾಗಬೇಕು, ಕುಟುಂಬ ಸರಿಯಾದರೆ ಸಮಾಜ ಸರಿಯಾಗುತ್ತದೆ, ದೇಶವೂ ಸರಿಯಾಗುತ್ತದೆ. ಅದಕ್ಕಾಗಿಯೇ ಹಿಂದೂ ಸಮಾಜೋತ್ಸವ ಸಮಿತಿ, ಬಡಾವಣೆಗಳಲ್ಲಿ ಮಕ್ಕಳಿಂದ ಹಿರಿಯರವರೆಗೆ ಜಾಗೃತಿ ಉಂಟು ಮಾಡುವಂತಹ ಕಾರ್ಯಕ್ರಮ ಹಾಕಿಕೊಂಡಿದೆ ಎಂದರು.
ಸಮಿತಿ ಅಧ್ಯಕ್ಷ ಎಚ್.ಜಿ. ಚಂದ್ರಶೇಖರ್ ಮಾತನಾಡಿ, ಹಿಂದೂಗಳು ಒಗ್ಗೂಡಿದಾಗ ದೇಶಕ್ಕೆ ಭವಿಷ್ಯವಿದೆ. ಸಮಾಜದಲ್ಲಿ ಒಗ್ಗಟ್ಟು ಇದ್ದರೆ ದೇಶ ಸದೃಢವಾಗಿ, ಸುಭದ್ರವಾಗಿರುತ್ತದೆ. ಸಮಾಜ, ದೇಶ ನಿರ್ಮಾಣದ ಚಿಂತನೆ, ಹಿಂದೂ ಸಾಂಸ್ಕೃತಿಕ ಮೌಲ್ಯಗಳ ಜಾಗೃತಿಗಾಗಿ ಈ ತಿಂಗಳ 18ರಿಂದ ನಗರದ ಎಲ್ಲಾ ವಸತಿ ಬಡಾವಣೆಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಹಿಂದೂ ಸಮಾಜೋತ್ಸವಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಸಮಾಜದ ನಡುವೆ ಒಡಕು ಮೂಡಿಸುವ ಹುನ್ನಾರ, ಅಸಮಾನತೆ, ಅಧಾರ್ಮಿಕ ಮನೋಭಾವ ಹಾಗೂ ಅಪಸ್ವರಗಳನ್ನು ಹೋಗಲಾಡಿಸಿ ಸದೃಢ ಸಮಾಜ ನಿರ್ಮಿಸುವ ಅನಿವಾರ್ಯತೆ ಈಗ ಬಂದಿದೆ. ನೆಲ, ಜಲ, ಹಸಿರು ಮುಂತಾದ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಭೂಮಿಯ ಮೇಲೆ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ಕಲ್ಪಿಸಲು ಪರಿಸರ ಸಂರಕ್ಷಣೆ ಮಾಡಬೇಕಾಗಿದ್ದು, ಮುಂದಿನ ಜನಾಂಗದಲ್ಲಿ ಸಮಾಜಮುಖಿ ಮನೋಭಾವ ಮೂಡಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಹೇಳಿದರು.
ಸಮಿತಿ ಕಾರ್ಯದರ್ಶಿ ಜಿ.ಎಸ್. ಅನಂತರಾಮು ಮಾತನಾಡಿ, ಹಿಂದೂ ಸಮಾಜೋತ್ಸವದ ಪ್ರಯುಕ್ತ ಬಡಾವಣೆಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಸಂಸ್ಕೃತಿ, ಪರಂಪರೆ, ದೇಶದ ಇತಿಹಾಸವನ್ನು ಬಿಂಬಿಸುವ ನಿಟ್ಟಿನಲ್ಲಿ ಸಾಮೂಹಿಕ ಪೂಜಾ ಕಾರ್ಯಕ್ರಮ, ಶೋಭಾ ಯಾತ್ರೆ, ಸಾಂಸ್ಕೃತಿಕ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
ಸ್ವದೇಶಿ ಜೀವನ ಶೈಲಿಯ ಮೂಲಕ ಆಚಾರ, ವಿಚಾರ, ನಡೆನುಡಿಗಳಲ್ಲಿ ನಮ್ಮ ಸತ್ವವನ್ನು ಬಡಿದೆಬ್ಬಿಸುವ ಮೂಲಕ ದೇಶದ ಆರ್ಥಿಕತೆಗೆ ಇಂಬು ನೀಡುವ ಸ್ವದೇಶಿ ಜೀವನ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ. ದೇಶದ ಶ್ರದ್ಧಾ ಕೇಂದ್ರಗಳ ರಕ್ಷಣೆಗೆ ಪಣ ತೊಡಬೇಕಾಗಿದೆ. ಸ್ವಾಭಿಮಾನಿ ಮತ್ತು ಸಶಕ್ತ ರಾಷ್ಟ್ರ ನಿರ್ಮಾಣವು ಆದ್ಯ ಕರ್ತವ್ಯವಾಗಬೇಕಿದೆ. ಈ ಎಲ್ಲಾ ಉದ್ದೇಶಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಿಂದೂ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಜಾಗೃತಿ ಉಂಟು ಮಾಡಲು ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.








