ನವದೆಹಲಿ :
ಸಿಎಂ ಸಿದ್ದರಾಮಯ್ಯ ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ರಾಜ್ಯಗಳ ನಡುವೆ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಬೆಳವಣಿಗೆಗೆ ಪೂರಕವಾಗಿರುವ ವಿಧಾನವನ್ನು ಅನುಸರಿಸಲು 16ನೇ ಹಣಕಾಸು ಆಯೋಗಕಕ್ಕೆ ಪ್ರತಿಪಾದಿಸುವಂತೆ ವಿನಂತಿಸಿದರು.
15ನೇ ಹಣಕಾಸು ಆಯೋಗ ತನ್ನ ಶಿಫಾರಸಿನಲ್ಲಿ ಕರ್ನಾಟಕದ ತೆರಿಗೆ ಪಾಲನ್ನು ಶೇ.4.713 ರಿಂದ ಶೇ.3.647 ಕ್ಕೆ ಇಳಿಕೆ ಮಾಡಿದ್ದರಿಂದ ರಾಜ್ಯದ ತೆರಿಗೆ ಪಾಲು 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.23ರಷ್ಟು ಕಡಿಮೆಯಾಗಿರುವುದರ ಬಗ್ಗೆ ಸಿಎಂ ಕೇಂದ್ರ ಹಣಕಾಸು ಸಚಿವರಿಗೆ ವಿವರಿಸಿದರು. ಜೊತೆಗೆ, 15ನೇ ಹಣಕಾಸು ಆಯೋಗ ರಾಜ್ಯಕ್ಕೆ ಶಿಫಾರಸು ಮಾಡಿದ್ದ ರೂ.11,495 ಕೋಟಿಗಳ ವಿಶೇಷ ಅನುದಾನ ಸಿಗದ ಕಾರಣ, ಒಟ್ಟಾರೆಯಾಗಿ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಒಟ್ಟು ರೂ.80,000 ಕೋಟಿಗಳು ರಾಜ್ಯಕ್ಕೆ ನಷ್ಟವಾಗಿರುವುದನ್ನು ತಿಳಿಸಿದ್ದಾರೆ.
15ನೇ ಹಣಕಾಸು ಆಯೋಗ ರಾಜ್ಯಗಳ ನಡುವೆ ತೆರಿಗೆ ಹಂಚಿಕೆಯ ಸೂತ್ರವನ್ನು ಲೆಕ್ಕಮಾಡಲು ಆದಾಯ-ದೂರ ಮಾನದಂಡದ ಮೇಲೆ ಅತಿಯಾಗಿ ಅವಲಂಬಿಸಿದ ಕಾರಣ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಹೆಚ್ಚಿನ ನಷ್ಟವಾಯಿತು. 15 ನೇ ಹಣಕಾಸು ಆಯೋಗ ಆದಾಯ-ದೂರ ಮಾನದಂಡಕ್ಕೆ ಶೇ.45 ರಷ್ಟು ಅಂಕವನ್ನು ನೀಡಿತ್ತು. ರಾಜ್ಯಕ್ಕೆ ಇದರಿಂದ ಉಂಟಾದ ನಷ್ಟವನ್ನು ತಪ್ಪಿಸುವ ಸಲುವಾಗಿ ಆದಾಯ-ದೂರ ಮಾನದಂಡದ ಅಂಕವನ್ನು ಶೇ.20 ರಷ್ಟು ಕಡಿಮೆ ಮಾಡಿ, ದೇಶದ ಆರ್ಥಿಕ ಪ್ರಗತಿಗೆ ರಾಜ್ಯಗಳು ನೀಡುವ ಕೊಡುಗೆಯನ್ನು ಪರಿಗಣಿಸಬೇಕು ಹಾಗೂ ಇದಕ್ಕೆ ಶೇ.20 ರಷ್ಟು ಅಂಕವನ್ನು ನೀಡಬೇಕೆಂದು ಮನವಿ ಮಾಡಿದರು.
ಹಣಕಾಸು ಆಯೋಗವು ಶಿಫಾರಸ್ಸು ಮಾಡುವ ರಾಜಸ್ವ ಕೊರತೆ ಅನುದಾನಗಳನ್ನು ನಿಲ್ಲಿಸಲು ನಾವು ವಿನಂತಿಸಿದ್ದೇವೆ. ಏಕೆಂದರೆ ಅವು ವಿತ್ತೀಯ ಹೊಣೆಗಾರಿಕೆ ಅಧಿನಿಯಮದ (FRBM) ಚೌಕಟ್ಟಿನಲ್ಲಿ ಪ್ರಸ್ತಾಪಿಸಲಾದ ಆರ್ಥಿಕ ಶಿಸ್ತಿನ ತತ್ವಗಳಿಗೆ ವಿರುದ್ಧವಾಗಿವೆ. 15ನೇ ಹಣಕಾಸು ಆಯೋಗವು, ಒಟ್ಟು ಕೇಂದ್ರ ಸ್ವೀಕೃತಿಗಳ ಶೇ.1.92 ರಷ್ಟನ್ನು ರಾಜಸ್ವ ಕೊರತೆ ಅನುದಾನಗಳೆಂದು ಶಿಫಾರಸು ಮಾಡಿತ್ತು. ಆದ್ದರಿಂದ ಕೇಂದ್ರ ಸರ್ಕಾರದ ಒಟ್ಟು ಸ್ವೀಕೃತಿಗಳ ಶೇ.1.92 ರಷ್ಟು ಮೊತ್ತವನ್ನು ತೆರಿಗೆ ಹಂಚಿಕೆಯ ಸೂತ್ರದ ಆಧಾರದ ಮೇಲೆ ಎಲ್ಲಾ ರಾಜ್ಯಗಳಿಗೂ ಹಂಚಿಕೆ ಮಾಡಬೇಕೆಂದು ನಾವು ಪ್ರಸ್ತಾಪಿಸಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.
ಬೆಂಗಳೂರು, ಕಲ್ಯಾಣ ಕರ್ನಾಟಕ ಮತ್ತು ಮಲೆನಾಡು ಪ್ರದೇಶದ ಅಭಿವೃದ್ಧಿ ಸವಾಲುಗಳನ್ನು ಸಹ ಹಣಕಾಸು ಸಚಿವರ ಮುಂದೆ ಪ್ರಸ್ತಾಪಿಸಿದರು. ರಾಜ್ಯಗಳ ಬೆಳವಣಿಗೆಯನ್ನು ಉತ್ತೇಜಿಸಲು ನ್ಯಾಯಯುತ ಮತ್ತು ಬೆಳವಣಿಗೆಗೆ ಪೂರಕವಾಗುವ ತೆರಿಗೆ ಹಂಚಿಕೆಯ ಅವಶ್ಯಕತೆಯನ್ನು ಮನವರಿಕೆ ಮಾಡಿದ್ದಾರೆ. ಕರ್ನಾಟಕದ ಪ್ರಸ್ತಾವನೆಗಳು ವಿಶೇಷ ಪ್ರಕರಣವೆಂದು ಪರಿಗಣಿಸದೆ, ಇದು ಒಟ್ಟಾರೆ ರಾಷ್ಟ್ರೀಯ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಪ್ರಸ್ತಾವನೆಗಳಾಗಿವೆ ಎಂದು ಹೇಳಿದ್ದಾರೆ.
16ನೇ ಹಣಕಾಸು ಆಯೋಗಕ್ಕೆ ಕೇಂದ್ರ ಸರ್ಕಾರ ಸಲ್ಲಿಸುವ ಜ್ಞಾಪಕ ಪತ್ರದಲ್ಲಿ ರಾಜ್ಯ ಸರ್ಕಾರದ ಈ ಪ್ರಸ್ತಾವನೆಗಳನ್ನು ಸೇರಿಸುವಂತೆ ಹಣಕಾಸು ಸಚಿವರಿಗೆ ಮನವಿ ಮಾಡುವ ಮೂಲಕ, ಎಲ್ಲಾ ರಾಜ್ಯಗಳು ದೇಶದ ಅಭಿವೃದ್ಧಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಬೆಳವಣಿಗೆ ಆಧಾರಿತ ತೆರಿಗೆ ಹಂಚಿಕೆ ಅವಶ್ಯಕ ಎಂದು ಒತ್ತಿ ಹೇಳಿದ್ದಾರೆ.








