ಮೋದಿ ಮತ್ತೆ ಪ್ರಧಾನಿ ಆಗುವ ನೈತಿಕ ಹಕ್ಕು ಹೊಂದಿಲ್ಲ : ಸಿದ್ದರಾಮಯ್ಯ

ಬೆಂಗಳೂರು :

     ರಾಜ್ಯದ ಜನತೆಗೆ ಹಲವು ಗ್ಯಾರಂಟಿಗಳನ್ನು ಕೊಟ್ಟರು ನಿರೀಕ್ಷೆಗೆ ತಕ್ಕಂತೆ ಕಾಂಗ್ರೆಸ್ ಪರ ಫಲಿತಾಂಶ ಬಂದಿಲ್ಲ, ಎಲ್ಲಿ ಹಿನ್ನಡೆಯಾಯಿತು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಮಂಗಳವಾರ ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಗೃಹ ಕಚೇರಿ ಕೃಷ್ಣಾ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಲೋಕಸಭಾ ಚುನಾವಣೆಯಲ್ಲಿ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. 15-20 ಸ್ಥಾನ ನಮ್ಮ ನಿರೀಕ್ಷೆಯಾಗಿತ್ತು. ಆದರೆ, 2019ರಲ್ಲಿ ಕೇವಲ ಒಂದು ಸ್ಥಾನದಲ್ಲಿ ಗೆದ್ದಿದ್ದೆವು. ಈಗ 9ಕ್ಕೆ ಏರಿದ್ದೇವೆ. ಈ ಬಾರಿ ನಾವು ಶೇ.45.34, ಬಿಜೆಪಿ ಶೇ.46.04ರಷ್ಟು ಮತ ಪಡೆದಿದೆ ಎಂದು ತಿಳಿಸಿದರು.

  2019ರಲ್ಲಿ ಬಿಜೆಪಿ ಶೇ.51.38ರಷ್ಟು ಮತ ಗಳಿಸಿತ್ತು. ನಮಗೆ ಶೇ31.88ರಷ್ಟು ಮಾತ್ರ ಮತಗಳು ಬಂದಿದ್ದವು. 2019ಕ್ಕೆ ಹೋಲಿಸಿದರೆ ನಮ್ಮ ಮತ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದರು.

   ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಿದರು. ಈ.ಡಿ, ಐಟಿ, ಸಿಬಿಐ ಹೆಸರಲ್ಲಿ ಹೆದರಿಸಿದರು, ಬೆದರಿಸಿದರು. ಆದರೂ ದೇಶದ ಜನ ಬಿಜೆಪಿಗೆ ಬಹುಮತ ಕೊಡಲಿಲ್ಲ. ಈ ಸೋಲಿನ ಕಾರಣದಿಂದ ಮೋದಿ ಮತ್ತೆ ಪ್ರಧಾನಿ ಆಗುವ ನೈತಿಕ ಹಕ್ಕು ಹೊಂದಿಲ್ಲ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

    ಬಿಜೆಪಿ ಮತ ಪ್ರಮಾಣ ಶೇ.5ರಷ್ಟು ಕುಸಿದಿದೆ. ಜೆಡಿಎಸ್ ಜೊತೆ ಹೊಂದಾಣಿಕೆ ಬಳಿಕವೂ ಅವರ ಮತ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜೆಡಿಎಸ್ ಕೂಡ 2019ಕ್ಕಿಂತ ಕಡಿಮೆ ಪ್ರಮಾಣದ ಮತ ಪಡೆದಿದೆ. ಆದರೂ ನಾವು ನಿರೀಕ್ಷಿತ ಪ್ರಮಾಣದಲ್ಲಿ ಸೀಟು ಗೆದ್ದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

   ರಾಷ್ಟ್ರಮಟ್ಟದಲ್ಲಿಯೂ ಕಾಂಗ್ರೆಸ್ ಮತ ಪ್ರಮಾಣ ಹೆಚ್ಚಾಗಿದೆ. ಕೇಂದ್ರದಲ್ಲಿ ಅಧಿಕಾರಿದಲ್ಲಿದ್ದ ಬಿಜೆಪಿ 2014 ಹಾಗೂ 2019ಕ್ಕಿಂತ ಕಡಿಮೆ ಸೀಟು ಗಳಿಸಿದೆ. ಮೋದಿ ಮುಖ ನೋಡಿಯೂ ಬಿಜೆಪಿಗೆ ಬಹುಮತ ಬಂದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಬಿಜೆಪಿ ಸರಳ ಬಹುಮತ ಪಡೆಯುವಲ್ಲೂ ಸೋತಿದೆ. ದೇಶದಲ್ಲಿ ಎಲ್ಲೂ ಮೋದಿ ಅಲೆ ಕಾಣಲಿಲ್ಲ. ಹೀಗಾಗಿ ಈ ಫಲಿತಾಂಶ ಮೋದಿ ಜನಪ್ರಿಯತೆ ನೆಲಕಚ್ಚಿದೆ ಎನ್ನುವುದು ಮೇಲು ನೋಟಕ್ಕೆ ಗೊತ್ತಾಗಿದೆ. ಸರ್ಕಾರ ಯಾರು ಮಾಡುತ್ತಾರೆ ಅನ್ನೋದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap