ಮೈಸೂರು:
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಚಹರೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಪತ್ತೆಯಾಗಿದ್ದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ತಿಳಿಸಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರೋಪಿ ಮಾಸ್ಕ್, ಟೋಪಿ ಹಾಕಿಕೊಂಡು ಬಂದು ರಾಮೇಶ್ವರ ಕೆಫೆಯೊಳಗೆ ಬಂದು ತಿಂಡಿ ತಿಂದಿದ್ದಾನೆ. ಬಸ್ನಿಂದ ಇಳಿದು ಹೋಟೆಲ್ಗೆ ಹೋಗಿದ್ದಾನೆ. ಬಸ್ನಿಂದ ಇಳಿದು ಹೋಗಿರುವ ದೃಶ್ಯಾವಳಿಗಳು ಪತ್ತೆಯಾಗಿವೆ. ಆರೋಪಿ ಕಪ್ಪು ಬಣ್ಣದ ಮಾಸ್ಕ್ ಹಾಕಿಕೊಂಡು ಬಂದಿದ್ದನು.
ಟೋಪಿ ಹಾಕಿಕೊಂಡು ಬಂದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೋಟೆಲ್ನಲ್ಲಿ ತಿಂಡಿಯ ಟೋಕನ್ ತೆಗೆದುಕೊಂಡಿದ್ದಾನೆ. ನಂತರ ಹೋಟೆಲ್ನಲ್ಲಿ ಕುಳಿತು ಟೈಮರ್ ಫಿಕ್ಸ್ ಮಾಡಿದ್ದಾನೆ. ಟೈಮರ್ ಫಿಕ್ಸ್ ಮಾಡಿ ಇಟ್ಟು ಹೋಟೆಲ್ನಿಂದ ಹೊರಹೋಗಿದ್ದಾನೆ. ಬಳಿಕ ಬ್ಲಾಸ್ಟ್ ಆಗಿದೆ ಎಂದರು.
ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಇದು ಓರ್ವ ವ್ಯಕ್ತಿಯ ಕೃತ್ಯವಾ ಅಥವಾ ಸಂಘಟನೆಯ ಕೃತ್ಯವೇ ಎಂದು ಇನ್ನೂ ಗೊತ್ತಾಗಿಲ್ಲ. ಭಯೋತ್ಪಾದಕ ಕೃತ್ಯನಾ ಎಂಬುದು ಕೂಡ ಸ್ಪಷ್ಟವಾಗಿಲ್ಲ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿಸಿದರು.
ಮಂಗಳೂರು ಕುಕ್ಕರ್ ಬ್ಲಾಸ್ಟ್ ಗೂ ಇದಕ್ಕೂ ಸಾಮ್ಯತೆ ಇಲ್ಲ: ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ಗೂ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬ್ಲಾಸ್ಟ್ಗೂ ಸಾಮ್ಯತೆ ಇಲ್ಲ. ಮಂಗಳೂರಿನಲ್ಲಿ ಕುಕ್ಕರನಲ್ಲಿ ಆದ ಬ್ಲಾಸ್ಟ್, ಬೆಂಗಳೂರಿನಲ್ಲಿ ಯಾವ ಕುಕ್ಕರ್ನಲ್ಲೂ ಬ್ಲಾಸ್ಟ್ ಆಗಿಲ್ಲ ಎಂದು ಹೇಳಿದರು.