ನನಗೂ ಕೂಡ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು : ಸಿಎಂ ಸಿದ್ದರಾಮಯ್ಯ

ಮೈಸೂರು: 

    ”ನನಗೂ ಕೂಡ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು. ಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಹುಡುಗಿಯೇ ಒಪ್ಪಲಿಲ್ಲ, ಅವರ ಮನೆಯವರೂ ಒಪ್ಪಲಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು.

    ಗುರುವಾರ ನಗರದಲ್ಲಿ ಜನಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೇದಿಕೆಯ ವೆಬ್​​ಸೈಟ್ ಉದ್ಘಾಟಿಸಿ ಅವರು ಮಾತನಾಡಿದರು.

    ”ನಾನು ಕಾನೂನು ಓದುವಾಗ ಒಬ್ಬ ಹುಡುಗಿ ಜೊತೆ ಸ್ನೇಹ ಮಾಡಿಕೊಂಡಿದ್ದೆ. ಇದಕ್ಕೆ ಬೇರೆ ಅರ್ಥ ಬೇಡ, ಸ್ನೇಹವಿತ್ತು. ಆಕೆಯನ್ನು ಮದುವೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೆ. ಆದರೆ, ಹುಡುಗಿ ಹಾಗೂ ಮನೆಯವರು ಒಪ್ಪದ ಕಾರಣ ಮದುವೆ ಆಗಲಿಲ್ಲ. ಕೊನೆಗೆ ನಮ್ಮ ಜಾತಿಯವರನ್ನೇ ಮದುವೆಯಾಗಬೇಕಾದ ಪರಿಸ್ಥಿತಿ ಬಂತು” ಎಂದರು.

    ”ಅಂತರ್ಜಾತಿ ವಿವಾಹವಾದ ಎಲ್ಲ ಸಹೋದರ-ಸಹೋದರಿಯರಿಗೆ ಧನ್ಯವಾದಗಳು. ಅಂತರ್ಜಾತಿ ಮದುವೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡಲಾಗುವುದು. ನಮ್ಮ ಸರ್ಕಾರವೂ ಕೂಡ ಸಹಾಯ, ಸಹಕಾರ ನೀಡುತ್ತದೆ. ನಮ್ಮ ಸಮಾಜದಲ್ಲಿನ ಜಾತಿ ವ್ಯವಸ್ಥೆ ಹೋಗಬೇಕಾದರೆ ಅಂತರ್ಜಾತಿ ವಿವಾಹ ಅಗತ್ಯ. ಜಾತಿ ವ್ಯವಸ್ಥೆಯು ಬಹಳ ಗಟ್ಟಿಯಾಗಿದೆ. ಇದರಿಂದ ಸಮಾಜ ಚಲನರಹಿತವಾಗಿದೆ. ಆರ್ಥಿಕ ಹಾಗೂ ಸಾಮಾಜಿಕ ಚಟುವಟಿಕೆ ಇಲ್ಲದಾಗ ಅಂತಹ ಸಮಾಜದಲ್ಲಿ ಚಲನೆ ಇರುವುದಿಲ್ಲ. ಅನೇಕರು ಸಮ ಸಮಾಜ ಮಾಡಲು ಪ್ರಯತ್ನ ಮಾಡಿದ್ದರೂ ಕೂಡ, ಸಂಪೂರ್ಣ ಯಶಸ್ವಿಯಾಗಿಲ್ಲ” ಎಂದು ಹೇಳಿದರು.

    ”ಅಂತರ್ಜಾತಿ ವಿವಾಹಗಳಿಂದ ಮಾತ್ರ ಜಾತಿ ನಾಶ ಸಾಧ್ಯ. ಈ ವಿವಾಹಗಳ ಜತೆಗೆ ಮಹಿಳೆಯರು ಹಾಗೂ ಎಲ್ಲಾ ವರ್ಗದ ದುರ್ಬಲರಿಗೆ ಆರ್ಥಿಕ ಶಕ್ತಿ ಸಿಕ್ಕಾಗ ಸಮಾಜದಲ್ಲಿ ಚಲನೆ ಉಂಟಾಗುತ್ತದೆ. ಪರಸ್ಪರ ಪ್ರೀತಿಸಿ ಮದುವೆ ಆಗುವುದು ಬೇರೆ. ಆದರೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲತೆ ಇದ್ದರೆ ಯಾವ ಜಾತಿಯವರು ಬೇಕಾದರೂ ಮದುವೆ ಆಗಬಹುದು. ರಾಜಕೀಯ ಸ್ವಾತಂತ್ರ್ಯ ಯಶಸ್ಸು ಗಳಿಸಬೇಕಾದರೆ ಅಬಲರಾಗಿದ್ದವರು, ತಳ ಸಮುದಾಯದವರಿಗೆ ಈ ನಿಟ್ಟಿನಲ್ಲಿ ಶಕ್ತಿ ಬರಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಹೀಗಾಗಿ ನಮ್ಮ ಸರ್ಕಾರದಿಂದ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ” ಎಂದರು.

    ”ಸಮಾಜದಲ್ಲಿ ಎಲ್ಲರೂ ಕೂಡ ಅಂತರ್ಜಾತಿ ವಿವಾಹವಾಗುವುದಿಲ್ಲ. ವಿದ್ಯಾವಂತರು, ಸಬಲರಾದವರು ಮಾತ್ರ ಅಂತರ್ಜಾತಿ ಮದುವೆಯಾಗಲು ಸಾಧ್ಯವಾಗಿದೆ. ಮನುಷ್ಯ ಇತರರನ್ನು ಪ್ರೀತಿಸಬೇಕೇ ಹೊರತು ದ್ವೇಷಿಸಬಾರದು. ಬಸವಣ್ಣ ಮತ್ತು ಕುವೆಂಪು ಅವರ ಆಶಯದಂತೆ ಸಮ ಸಮಾಜ ನಿರ್ಮಾಣ ಆಗಬೇಕಾದರೆ ಅಂತರ್ಜಾತಿ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು” ಎಂದು ತಿಳಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap