ಕಲಬುರಗಿ:
ಹೈದರಾಬಾದ್ ನಿಜಾಮರ ಆಳ್ವಿಕೆಯಿಂದ ವಿಮೋಚನೆಗೊಂಡ ಸ್ಮರಣಾರ್ಥ ಆಚರಿಸಲಾಗುವ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ, ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಸರ್ದಾರ್ ವಲ್ಲಭ ಭಾಯಿ ಪಟೇಲರ ಸಂಕಲ್ಪಶಕ್ತಿ, ಜವಾಹರ್ ಲಾಲ್ ನೆಹರು ಅವರ ದೂರದೃಷ್ಟಿಯ ಫಲವಾಗಿ ಕಲ್ಯಾಣ ಕರ್ನಾಟಕ ನಿಜಾಮರ ಆಳ್ವಿಕೆಯಿಂದ ಮುಕ್ತವಾಗಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಹಾಗಾಗಿ ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಹೋರಾಡಿದ ಎಲ್ಲ ಮಹನೀಯರನ್ನು ಸ್ಮರಿಸುವುದಾಗಿ ಹೇಳಿದರು.
ಬಸವ ಕಲ್ಯಾಣದಲ್ಲಿ ಹೊತ್ತಿಕೊಂಡ ಶರಣರ ಚಳುವಳಿಯು ಇಡೀ ಉಪಖಂಡದ ಬೇರೆ ಬೇರೆ ಭಾಗಗಳಿಂದ ಸಮಾನತಾವಾದಿ ಆಶಯಗಳನ್ನು ಹೊಂದಿದ್ದ ಜನರನ್ನು ಒಟ್ಟುಗೂಡಿಸಿತು. ಜಾತಿ, ವರ್ಗ, ವರ್ಣ, ಲಿಂಗ ತಾರತಮ್ಯವಿಲ್ಲದ ಸಮ-ಸಮಾಜ ನಿರ್ಮಾಣದ ಆಶಯವನ್ನು ತಾತ್ಕಾಲಿಕವಾಗಿಯಾದರೂ ಈಡೇರಿಸಿತ್ತು. ಶರಣರ ವಚನ ಚಳುವಳಿಯು ಇವತ್ತಿಗೂ ಕೂಡ ಸಮಾನತಾವಾದಿ ಆಶಯಗಳನ್ನು ಹೊತ್ತ ಜನರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ನಾಲ್ಕು ಮಹತ್ವದ ಹೋರಾಟಗಳನ್ನು ಮಾಡಿದೆ. ಭಾರತದ ಸ್ವಾತಂತ್ರ್ಯ ಹೋರಾಟ, ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟ, ಕನ್ನಡ ಭಾಷಿಕರು ಒಗ್ಗೂಡುವ ಭಾಷಾವಾರು ಪ್ರಾಂತ್ಯ ರಚನೆಯ ಹೋರಾಟ ಮತ್ತು ಆರ್ಟಿಕಲ್ 371 ಜೆ ರಚನೆಗಾಗಿ ನಡೆದ ಚಳುವಳಿ. ಇವುಗಳನ್ನು ಹೊಸ ತಲೆಮಾರು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ನಿಜಾಮನ ಆಳ್ವಿಕೆಯಲ್ಲಿದ್ದ ಕಲಬುರಗಿ, ಬೀದರ್ ಹಾಗೂ ರಾಯಚೂರು, ಹಾಗೂ ಮದ್ರಾಸ್ ಪ್ರಾಂತ್ಯದಲ್ಲಿದ ಬಳ್ಳಾರಿ ಜಿಲ್ಲೆ ಒಳಗೊಂಡಂತೆ ಧರ್ಮಸಿಂಗ್ ವರದಿಯನ್ವಯ 1990 ರಲ್ಲಿ ಹೈದ್ರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗಿತ್ತು. ಆ ಮೂಲಕ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ರಾಜ್ಯ ಸರ್ಕಾರ ವಿಶೇಷ ನಿಧಿ ನೀಡಲಾಗಿತ್ತು. ಹಲವು ದಶಕಗಳ ತೀವ್ರ ಹೋರಾಟ ಹಾಗೂ ಈ ಭಾಗದ ಹಿರಿಯ ರಾಜಕಾರಣಿಗಳಾದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಎನ್.ಧರಂಸಿಂಗ್ ಅವರ ಅವಿರತ ಪ್ರಯತ್ನ ಹಾಗೂ ಅವರ ಜೊತೆಗೂಡಿದ ಅನೇಕ ಹೋರಾಟಗಾರರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದರು.
ಸಂವಿಧಾನದಲ್ಲಿ ಆರ್ಟಿಕಲ್ 371 (ಜೆ) ಪರಿಚ್ಛೇದ ಸೇರ್ಪಡೆಯೊಂದಿಗೆ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರೆತಂತಾಯಿತು. ಹೈದ್ರಾಬಾದ್ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಈ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಯಿತು. ಮುಂದೆ ಮಂಡಳಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಪುನರ್ ನಾಮಕರಣ ಮಾಡಲಾಯಿತು. ಅಲ್ಲಿಂದ ಈಚೆಗೆ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಯಿತು. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆಯುವ ಸರ್ಕಾರ” ಎಂಬುದನ್ನು ಸಾಬೀತುಪಡಿಸಿತು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸಕ್ತ 2024-25ನೇ ಸಾಲಿನ ಆಯವ್ಯಯದಲ್ಲಿ ದಾಖಲೆ ಪ್ರಮಾಣದಲ್ಲಿ 5,000 ಕೋಟಿ ರೂ. ಘೋಷಿಸಿ ಅನುದಾನ ಹಂಚಿಕೆ ಮಾಡಲಾಗಿದೆ. ಮಂಡಳಿಯು 5,000 ಕೋಟಿ ರೂ. ಮೊತ್ತಕ್ಕೆ ಸಲ್ಲಿಸಿದ ಕ್ರಿಯಾ ಯೋಜನೆಗೆ ನಮ್ಮ ಸರ್ಕಾರ ಈಗಾಗಲೆ ಅನುಮೋದನೆ ನೀಡಿದ್ದು, ಪ್ರದೇಶದಲ್ಲಿ ಅಭಿವೃದ್ಧಿಯ ಹೊಸ ಕ್ರಾಂತಿ ನಿರೀಕ್ಷಿಸಲಾಗಿದೆ.
ಡಾ.ಡಿ.ಎಂ. ನಂಜುಂಡಪ್ಪ ವರದಿಯನ್ನು 2002ರಲ್ಲಿ ಸಲ್ಲಿಸಲಾಗಿದ್ದು, ಆ ನಂತರದಲ್ಲಿ ತಾಲ್ಲೂಕುಗಳ ಸಾಮಾಜಿಕ ಆರ್ಥಿಕ ಹಾಗೂ ಇನ್ನಿತರೆ ಆಯಾಮಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಆಗಿರುವ ಬದಲಾವಣೆಗಳು ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಲು ಪ್ರಸಕ್ತ ಸಾಲಿನಲ್ಲಿ ಪ್ರೊ. ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಮೂಲಕ ಪ್ರಸ್ತುತ ರಾಜ್ಯದಲ್ಲಿನ ಆರ್ಥಿಕ ಮತ್ತು ಪ್ರಾದೇಶಿಕ ಅಸಮಾನತೆಯ ಆಧಾರದ ಮೇಲೆ ಜಿಲ್ಲೆ ಮತ್ತು ತಾಲ್ಲೂಕುಗಳನ್ನು ವರ್ಗೀಕರಿಸಿ ಹೊಸ ಅಭಿವೃದ್ಧಿ ಸೂಚ್ಯಂಕಗಳನ್ನು ತಯಾರಿಸಲಾಗುವುದು ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಮಂಡಳಿಯು ಈ ವರ್ಷ ಸಹ 1250 ಕೋಟಿ ರೂ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟು “ಅಕ್ಷರ ಆವಿಷ್ಕಾರ” ಕಾರ್ಯಕ್ರಮವು ಇನ್ನಷ್ಟು ಶಕ್ತಿ ತಂದಿದೆ. ಕೆ.ಕೆ.ಆರ್.ಡಿ.ಬಿ.ಯು 2023-24 ಮತ್ತು 2024-25 ಎರಡೂ ವರ್ಷಗಳನ್ನು ಶೈಕ್ಷಣಿಕ ವರ್ಷಗಳೆಂದು ಘೋಷಣೆ ಮಾಡಿದೆ. ಈ ವರ್ಷ 1008 ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಎಂಬ ಹೊಸ ಮಾದರಿಯನ್ನು ಪ್ರಾರಂಭಿಸಲಾಗಿದೆ. ನಮ್ಮ ನಿರೀಕ್ಷೆ ಮೀರಿ 36,445 ಮಕ್ಕಳು ಪ್ರವೇಶ ಪಡೆದು ದಾಖಲೆ ಬರೆದಿದ್ದಾರೆ. ಇದಕ್ಕಾಗಿ ಹೊಸದಾಗಿ 1353 ಅತಿಥಿ ಶಿಕ್ಷಕರನ್ನು ಹಾಗೂ 892 ಸಹಾಯಕಿಯರನ್ನು ನೇಮಕ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಈ ಭಾಗದ 872 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷಾ ಕಲಿಕೆಯನ್ನೂ ಪ್ರಾರಂಭಿಸಿದ್ದೇವೆ. 306 ಪ್ರೌಢಶಾಲೆಗಳಲ್ಲಿ ಈ ವರ್ಷ 9 ನೇ ತರಗತಿಯ ಮಕ್ಕಳ ಕೌಶಲ್ಯ ವೃದ್ಧಿಗಾಗಿ ಕಂಪ್ಯೂಟರ್ ಕಲಿಕೆಯನ್ನು ಪ್ರಾರಂಭಿಸಿದ್ದೇವೆ. ಶಿಕ್ಷಣದ ಗುಣಮಟ್ಟ ಸುಧಾರಿಸಿ ಇಲ್ಲಿನ ಮಕ್ಕಳೂ ಕೂಡ ತಾವು ಇತರರಂತೆಯೇ ತಲೆ ಎತ್ತಿ ನಿಲ್ಲಲು ಅನುಕೂಲವಾಗುವಂತೆ ಮಾಡಲು ಈ ವರ್ಷ “ಕಲಿಕಾಸರೆ” ಎಂಬ ಹೆಸರಿನಲ್ಲಿ ವಿಶೇಷ ಅಭ್ಯಾಸ ಪುಸ್ತಕವನ್ನು ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
10 ವರ್ಷಗಳ ಹಿಂದೆ ನಡೆದಿದ್ದ ಸಚಿವ ಸಂಪುಟ ಸಭೆಯ ನಂತರ ಇಂದು ಸಂಜೆ ಕಲಬುರಗಿಯಲ್ಲಿ ಅತ್ಯಂತ ಮಹಾತ್ವಾಕಾಂಕ್ಷೆಯ ಸಚಿವ ಸಂಪುಟ ಸಭೆಯನ್ನು ನಡೆಸುತ್ತಿದ್ದೇವೆ. ಸದರಿ ಸಭೆಯಲ್ಲಿ ಈ ಭಾಗದ ಶಿಕ್ಷಣ, ಆರೋಗ್ಯ, ಸಾರಿಗೆ, ನೀರಾವರಿ, ಪ್ರವಾಸೋದ್ಯಮ ಅಭಿವೃದ್ಧಿ, ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.