ಮೈಸೂರು:
ಕನ್ನಡದ ವಾತಾವರಣವನ್ನು ವಿಸ್ತರಿಸಲು, ಗಟ್ಟಿಗೊಳಿಸಲು ನಾವೆಲ್ಲಾ ಹೆಚ್ಚೆಚ್ಚು ಶ್ರಮಿಸೋಣ. ಕರ್ನಾಟಕ ಬಹುತ್ವದ ಬೀಡು. ಬಹುತ್ವದ ನಾಡು ಕಟ್ಟುವ ವಿಚಾರದಲ್ಲಿ ರಾಜಿಯೇ ಇಲ್ಲ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಜಂಟಿಯಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ “ಕರ್ನಾಟಕ ಸಾಂಸ್ಕೃತಿಕ ಮುನ್ನೋಟ: ಚಿಂತನಾ ಸಮಾವೇಶ” ವನ್ನು ಉದ್ಘಾಟಿಸಿ ಮಾತನಾಡಿದರು.
ದೇವರಾಜ ಅರಸರು 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು. ನಾಮಕರಣಗೊಂಡು 50 ವರ್ಷದ ಸುವರ್ಣ ಸಂಭ್ರಮವನ್ನು ಬಿಜೆಪಿ ಸರ್ಕಾರ ಮಾಡಬೇಕಿತ್ತು. ಅವರು ಮಾಡಲಿಲ್ಲ. ಹೀಗಾಗಿ ನಾನು ಸುವರ್ಣ ಸಂಭ್ರಮವನ್ನು ಬಜೆಟ್ ನಲ್ಲೇ ಘೋಷಿಸಿ ಇದನ್ನು ಕನ್ನಡ ಜನೋತ್ಸವವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಕರ್ನಾಟಕ ಮತ್ತು ಕನ್ನಡ ಏಳು ಕೋಟಿ ಜನರ ಉಸಿರಾಗಲಿ. ಇಲ್ಲಿ ಬದುಕನ್ನು ಕಟ್ಟಿಕೊಂಡಿರುವ ಇತರೆ ಭಾಷಿಕರು ಕನ್ನಡ ಮಾತಾಡುವಂತಾದರೆ ಒಳ್ಳೆಯದು. ನಾವು ಯಾವ ಭಾಷೆಗೂ ದ್ವೇಷಿಗಳಲ್ಲ. ಸಾಧ್ಯವಿರುವಷ್ಟು ಭಾಷೆಗಳನ್ನೆಲ್ಲಾ ಕಲಿತರೆ ಒಳ್ಳೆಯದೆ. ಆದರೆ ಕರ್ನಾಟಕದಲ್ಲಿ ಕನ್ನಡದ ವಾತಾವರಣ ನಿರ್ಮಿಸಿ ಕನ್ನಡವನ್ನು ಪೂರ್ತಿಯಾಗಿ ಬಳಸಬೇಕು. ಇದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಎಂದರು.
ತಮಿಳುನಾಡಿನಲ್ಲಿ ತಮಿಳಿನಲ್ಲಿ, ಕೇರಳದಲ್ಲಿ ಮಲಯಾಳಂನಲ್ಲಿ, ಆಂಧ್ರದಲ್ಲಿ ತೆಲುಗಿನಲ್ಲಿ, ಮಹಾರಾಷ್ಟ್ರದಲ್ಲಿ ಮರಾಠಿಯಲ್ಲೇ ವ್ಯವಹರಿಸುತ್ತಾರೆ. ಆದರೆ ನಮ್ಮಲ್ಲಿ ಕನ್ನಡ ಬಿಟ್ಟು ಅವರವರ ಭಾಷೆಯಲ್ಲೇ ಹೆಚ್ಚು ವ್ಯವಹರಿಸಲು ಉತ್ಸುಕರಾಗಿ ಉದಾರಿ ಅನ್ನಿಸಿಕೊಂಡಿದ್ದೇವೆ. ಇದು ಅಷ್ಟು ಸರಿಯಲ್ಲ. ಕನ್ನಡದ ವಾತಾವರಣವನ್ನು ಗಟ್ಟಿಗೊಳಿಸಬೇಕು ಎಂದು ಸಿಎಂ ಕರೆ ನೀಡಿದರು.
ಕರ್ನಾಟಕ ಬಹುತ್ವದ ಬೀಡು:
ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಕನ್ನಡ ನಾಡು ಬಹುತ್ವದ ಬೀಡು. ಇಲ್ಲಿ ಮನುಷ್ಯ ಪ್ರೀತಿಯ ಬಹುತ್ವ ಆಚರಿಸಲ್ಪಡುತ್ತದೆ. ಆದರೆ ವಿದ್ಯಾವಂತರೇ ಬಹುತ್ವ, ಜಾತ್ಯತೀತತೆ ಕೈಬಿಟ್ಟು ತಾರತಮ್ಯ , ಕಂದಾಚಾರವನ್ನು ಆಚರಿಸುತ್ತಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.
ಬಸವಣ್ಣನವರನ್ನು ನಾವು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದ್ದು ಬಸವಣ್ಣನವರ ವೈಚಾರಿಕ ನಿಲುವುಗಳನ್ನು ನಾವು ಪಾಲಿಸಬೇಕು ಎನ್ನುವ ಉದ್ದೇಶದಿಂದ. ಸರ್ಕಾರಕ್ಕೆ ಕಿರೀಟ ಸಿಗುತ್ತದೆ ಎನ್ನುವ ಕಾರಣಕ್ಕೆ ಘೋಷಣೆ ಮಾಡಿದ್ದಲ್ಲ. ಬಸವಣ್ಣನ ಆಶಯಗಳು, ವಿಚಾರಗಳು, ವೈಚಾರಿಕತೆ ಯುವ ಪೀಳಿಗೆಗೆ ಹೆಚ್ಚೆಚ್ಚು ಗೊತ್ತಾಗಬೇಕು.
ಈ ಮಣ್ಣಿನ ಕನ್ನಡ-ಕರ್ನಾಟಕ-ಬಹುತ್ವ-ವೈಚಾರಿಕತೆ ಎಲ್ಲವೂ ಸೇರಿ ಆಗಿರುವ ಕನ್ನಡತನ ರೂಪುಗೊಂಡಿದೆ. ಈ ಕನ್ನಡತನವನ್ನು, ಇದು ರೂಪುಗೊಂಡ ಚರಿತ್ರೆಯನ್ನು ನಾವು ಈ ತಲೆಮಾರಿಗೆ ದಾಟಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಈ ಚಿಂತನಾ ಸಮಾವೇಶವನ್ನು ಆಯೋಜಿಸಲಾಗಿದೆ. ನಿಮ್ಮಂಥಾ ವಿಚಾರವಾದಿಗಳು ಒಟ್ಟಾಗಿ ಸೂಕ್ತವಾದ ಸಾಂಸ್ಕೃತಿಕ ಮುನ್ನೋಟವನ್ನು ನೀಡುತ್ತೀರಿ ಎನ್ನುವ ವಿಶ್ವಾಸವಿದೆ ಎಂದರು.
“ಸುವರ್ಣ ಸಂಭ್ರಮ ಕರ್ನಾಟಕ-50: ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ದ ಅಂಗವಾಗಿ ಚಿಂತನಾ ಸಮಾವೇಶ ಆಯೋಜಿಸಲಾಗಿತ್ತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪ, ಕನಕದಾಸ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಾ.ತ.ಚಿಕ್ಕಣ್ಣ, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್, ಮುಕ್ತ ವಿವಿ ಕುಲಪತಿಗಳಾದ ಪ್ರೊ.ಶರಣಪ್ಪ ವಿ.ಹಲ್ಸೆ, ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಧರಣೀದೇವಿ ಮಾಲಗತ್ತಿ, ವಿಧಾನ ಪರಿಷತ್ ಸದಸದಯರಾದ ಡಾ.ತಿಮ್ಮಯ್ಯ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಅರ್ಧ ಶತಮಾನದಿಂದ ಕನ್ನಡದ ವಿವೇಕವನ್ನು ವಿಸ್ತರಿಸುತ್ತಿರುವ ಹಿರಿಯ ಸಾಹಿತಿಗಳು, ಬರಹಗಾರರು, ಲೇಖಕರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ನಾನಾ ಚಳವಳಿಗಳ ಕಾರ್ಯಕರ್ತರು, ಮುಖಂಡರುಗಳು ಚಿಂತನಾ ಸಮಾವೇಶದಲ್ಲಿ ಭಾಗವಹಿಸಿದ್ದರು .ರೈತ-ದಲಿತ-ಕಾರ್ಮಿಕ-ಮಹಿಳಾ ಮತ್ತು ಕೋಮುಸೌಹಾರ್ಧ ಹಾಗೂ ಸಂವಿಧಾನ ಉಳಿಸಿ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಲವು ಮಹನೀಯರುಗಳು ಚಿಂತನಾ ಸಮಾವೇಶದಲ್ಲಿ ಉಪಸ್ಥಿತರಿದ್ದು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿದರು.