ಬೆಂಗಳೂರು:
ಜ 6 ಕೆಪಿಸಿಸಿ ಆಯೋಜಿಸಿರುವ ಮೇಕೆದಾಟು ಪಾದಯಾತ್ರೆ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಲಾರಂಭಿಸಿದೆ. ಸೆಕ್ಷನ್ 144 ಹಾಕಿದರೂ ನಾವು ನಾಲ್ವರು (ಡಿಕೆಶಿ, ರಾಮಲಿಂಗ ರೆಡ್ಡಿ, ಧೃವನಾರಾಯಣ) ಪಾದಯಾತ್ರೆ ಮಾಡುತ್ತೇವೆ ಎಂದು ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೋವಿಡ್ ನಿರ್ಬಂಧ ವಿಧಿಸಿರುವುದಕ್ಕೆ ಅಪಸ್ವರ ಎತ್ತಿದ್ದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರು, ಮೇಕೆದಾಟು ಪಾದಯಾತ್ರೆಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಯಾರೇ ಆದರೂ ರಿಸ್ಕ್ ತೆಗೆದುಕೊಳ್ಲಲು ಹೋಗಬಾರದು ಎಂದು ಹೇಳಿದ್ದಾರೆ.
ಜನವರಿ ಒಂಬತ್ತರಿಂದ ಆರಂಭವಾಗುವ ಪಾದಯಾತ್ರೆ ಜನವರಿ ಹತ್ತೊಂಬತ್ತರಂದು ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ.
ಇದು ರಾಜಕೀಯ ಪಾದಯಾತ್ರೆಯಲ್ಲ, ನೀರಿಗಾಗಿ ನಮ್ಮ ಹೋರಾಟ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರೂ, ರಾಜಕೀಯದ ವಾಸನೆ ಜೋರಾಗಿಯೇ ಬಡಿಯುತ್ತಿದೆ.
ಕೆಲವೊಂದು ಸಂಘಟನೆಗಳು ಕೆಪಿಸಿಸಿಯ ಪಾದಯಾತ್ರೆಗೆ ಬೆಂಬಲವನ್ನು ಸೂಚಿಸಿದೆ. ಸರಕಾರದ ಮಾರ್ಗಸೂಚಿಯ ಪ್ರಕಾರವೇ ನಾವು ಪಾದಯಾತ್ರೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೂ, ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾಗುವ ಸಾಧ್ಯತೆಯೇ ಹೆಚ್ಚು.
“ಇದು ಕೊರೊನಾ ಕರ್ಫ್ಯೂವಲ್ಲ, ಇದು ಬಿಜೆಪಿ ಕರ್ಫ್ಯೂ. ನಮ್ಮ ಪಾದಯಾತ್ರೆಯನ್ನು ತಡೆಯಲು ಹೊಸ ಮಾರ್ಗಸೂಚಿಯನ್ನು ಸರಕಾರ ಪ್ರಕಟಿಸಿದೆ.
ಈ ನಡುವೆ ನಗರದಲ್ಲಿ ಮಾತನಾಡುತ್ತಿದ್ದ ಸಚಿವ ಈಶ್ವರಪ್ಪ, “ಕೋವಿಡ್ ಅನ್ನು ಅನುಭವಿಸಿದ ಅನೇಕ ವ್ಯಕ್ತಿಗಳಲ್ಲಿ ನಾನು ಮತ್ತು ಸಿದ್ದರಾಮಯ್ಯ ಕೂಡಾ, ನಾವಿಬ್ಬರೂ ಆಸ್ಪತ್ರೆಗೂ ದಾಖಲಾಗಿದ್ದೆವು.
ಮೇಕೆದಾಟು ವಿಚಾರದಲ್ಲಿ ಹೋರಾಟ ಮಾಡಲು ಹೊರಟಿದ್ದಾರೆ. ವಿರೋಧ ಪಕ್ಷದವರು ಹೋರಾಟ ಮಾಡಲಿ, ಅದಕ್ಕೆ ನನ್ನ ತಕರಾರು ಏನೂ ಇಲ್ಲ.
ನಾವು ಕೂಡಾ ಅನೇಕ ಹೋರಾಟಗಳನ್ನು ಮಾಡಿಯೇ ಅಧಿಕಾರಕ್ಕೆ ಬಂದಿರುವುದು, ಆದರೆ ಅವರು ರಿಸ್ಕ್ ತೆಗೆದುಕೊಳ್ಳಬಾರದು”ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
ಸಿದ್ದರಾಮಯ್ಯನವರೂ ನಮ್ಮ ರಾಜ್ಯದ ಆಸ್ತಿ
“ಯಡಿಯೂರಪ್ಪನವರನ್ನು ನಾನು ಹೇಗೆ ನಮ್ಮ ನಾಯಕರು ಎಂದು ಹೇಳುತ್ತೇವೆಯೋ, ಅದೇ ರೀತಿ ಸಿದ್ದರಾಮಯ್ಯನವರೂ ನಮ್ಮ ರಾಜ್ಯದ ಆಸ್ತಿ. ದೇವೇಗೌಡ್ರು ಕೂಡಾ ನಮ್ಮ ರಾಜ್ಯದ ಆಸ್ತಿ. ನಾಳೆ ಕೋವಿಡ್ ನಿಂದ ಏನಾದರೂ ಹೆಚ್ಚುಕಮ್ಮಿಯಾದರೆ, ಅದಕ್ಕೆ ಯಾರು ಹೊಣೆ? ಕೋವಿಡಿಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅನ್ನೋದು ಗೊತ್ತಿರುತ್ತಾ? ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡ ಎಂದು ವೈರಸಿಗೆ ಗೊತ್ತಿಲ್ಲ”ಎಂದು ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ
“ಈ ನಾಯಕರೆಲ್ಲಾ ಸಮಾಜಕ್ಕೆ ಆಸ್ತಿ, ಹಾಗಾಗಿ ಅವರಿಗೆ ನನ್ನ ಪ್ರಾರ್ಥನೆ ಇಷ್ಟೇ.. ಚುನಾವಣೆಗೆ ಇನ್ನೂ ಒಂದೂವರೆ ವರ್ಷವಿದೆ. ಏನೇ ಸರ್ಕಸ್ ನೀವು ಮಾಡಿದರೂ, ಚುನಾವಣೆಯಲ್ಲಿ ನೀವು ಗೆಲ್ಲಲ್ಲ.
ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ವಿರೋಧ ಪಕ್ಷದಲ್ಲಿದ್ದೀರಾ, ಹೋರಾಟ ಪ್ರತಿಭಟನೆ ಮಾಡಿ. ಆದರೆ, ಲೈಫ್ ಅನ್ನು ಯಾಕೆ ರಿಸ್ಕ್ ನಲ್ಲಿ ತಗೋತೀರಿ”ಎಂದು ಸಚಿವ ಕೆ.ಎಸ್.ಈಶ್ವರಪ್ಪನವರು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ