ಬೆಂಗಳೂರು
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೂರನೇ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ಸರ್ಕಾರದ ಬಜೆಟ್ ಬಳಿಕ ಇದೀಗ ಇಂದು (ಮಾರ್ಚ್ 07) ಮಂಡನೆಯಾಗಲಿರೋ 2025ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗ್ಗೆ 9.30ಕ್ಕೆ ಸಚಿವ ಸಂಪುಟ ನಡೆಸಲಿದ್ದು, ಸಭೆಯಲ್ಲಿ ಬಜೆಟ್ಗೆ ಅನುಮೋದನೆ ಪಡೆದುಕೊಳ್ಳಲಿದ್ದಾರೆ.
ಬಳಿಕ ಬೆಳಗ್ಗೆ 10.20ರ ಸುಮಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ತಮ್ಮ ಅವಧಿಯ ದಾಖಲೆಯನ್ನೇ ಮುರಿದು 16ನೇ ಬಾರಿಗೆ ಬಜೆಟ್ ಮಂಡಿಸಲು ಮುಂದಾಗಿದ್ದು, ಮಂಡಿನೋವಿನ ಕಾರಣದಿಂದ ನಿಂತು ಬಜೆಟ್ ಮಂಡಿಸುವ ಬದಲು ಕುಳಿತು ಬಜೆಟ್ ಓದುವ ಸಾಧ್ಯತೆ ಇದೆ. ಇನ್ನು ಬಜೆಟ್ ಗಾತ್ರ 4 ಲಕ್ಷ ಕೋಟಿ ಮೀರುವ ಸಾಧ್ಯತೆ ಇದೆ.
ಗ್ಯಾರಂಟಿ ಯೋಜನೆಗಳಿಗೆ ಬರೋಬ್ಬರಿ 52 ಸಾವಿರ ಕೋಟಿ ಗೂ ಹೆಚ್ಚುಮೊತ್ತವನ್ನು ವ್ಯಯಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಈ ಬಾರಿ ಬಹಳ ನಿರೀಕ್ಷೆ ಗರಿಗೆದರಿದೆ. ಕಳೆದ ಆರ್ಥಿಕ ವರ್ಷದಲ್ಲಿ ಶೇ.61 ರಷ್ಟು ಮಾತ್ರ ಆರ್ಥಿಕ ಪ್ರಗತಿ ಹಾಗೂ ಇಲಾಖಾವಾರು ಪ್ರಗತಿ ಕಂಡಿರುವ ಸರ್ಕಾರ ಇನ್ನೂ ಸಾಧಿಸುವುದು ಬೆಟ್ಟದಷ್ಟಿದೆ. ಸಾಲು ಸಾಲು ಗ್ಯಾರಂಟಿಗಳ ಜೊತೆಗೆ ಆಯಾವ್ಯಯದ ಲೆಕ್ಕ ಮಂಡಿಸಲು ಸಿಎಂ ಸಿದ್ದರಾಮಯ್ಯ ಸಜ್ಜಾಗಿದ್ರೆ, ಇತ್ತ ರಾಜ್ಯ ಹಾಗೂ ರಾಜಧಾನಿಯ ಜನರು ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹೊತ್ತು ಕಾದುಕುಳಿತಿದ್ದಾರೆ.
ಗ್ಯಾರಂಟಿ ಯೋಜನೆ ಮುಂದುವರಿಸುವ ಜೊತೆಗೆ ಹೊಸ ವಿಶೇಷವಾದ ಯೋಜನೆ ಗಳನ್ನೂ ಕೂಡ ನೀಡಬೇಕು. ಗ್ಯಾರಂಟಿ ಜೊತೆಗೆ ರಾಜ್ಯದ ಆರ್ಥಿಕತೆಗೆ ಅಭಿವೃದ್ಧಿ ಗೆ ಸಾಮಾಜಿಕ ಏಳಿಗೆಗೆ ಕೊಡುಗೆ ನೀಡುವಂತ ಯೋಜನೆಗಳನ್ನು ಬಜೆಟ್ ನಲ್ಲಿ ಮಂಡಿಸಬೇಕಿದೆ. ರಾಜ್ಯದ ಆರ್ಥಿಕ ಸ್ಥಿತಿ ಗತಿ ಸರಿಯಿಲ್ಲದ ಹೊತ್ತಲ್ಲಿ ಸರ್ಕಾರ ಎಷ್ಟು ಮೊತ್ತದ ಹೊಸ ಸಾಲವನ್ನು ಮಾಡುತ್ತದೆಯೋ ಎಂಬ ಆತಂಕವೂ ಇದೆ. ಹೊಸ ಜಿಲ್ಲೆ, ಹೊಸ ತಾಲೂಕುಗಳ ಘೋಷಣೆಯಾದರೆ ಅವುಗಳ ಅಭಿವೃದ್ಧಿಗೂ ಹಣ ನೀಡಬೇಕಿದೆ. ಸಮಸ್ಯೆಗಳ ಕೂಪದಲ್ಲಿ ಮುಳುಗಿಹೋಗಿ ಒದ್ದಾಡುತ್ತಿರುವ ರಾಜ್ಯದ ಜನರಿಗೆ ಹೊಸ ಅಭಿವೃದ್ಧಿ ಯೋಜನೆಗಳ ಸಿಂಚನವನ್ನು ಸಿದ್ದರಾಮಯ್ಯ ಮಾಡುತ್ತಾರಾ ಎನ್ನುವ ಕುತೂಹಲ ಮೂಡಿಸಿದೆ.
ಇನ್ನು ರಾಜ್ಯ ರಾಜಧಾನಿಯನ್ನ ಬ್ರ್ಯಾಂಡ್ ಮಾಡುತ್ತೇವೆ ಎಂದು ಕಳೆದ ಬಜೆಟ್ ನಲ್ಲಿ ಸಾಲು ಸಾಲು ಘೋಷಣೆ ಮಾಡಿ ನೆರವೇರಿಸದ ಸರ್ಕಾರ, ಈ ಬಾರೀ ಬಜೆಟ್ ನಲ್ಲಿ ರಾಜಧಾನಿಗೆ ಏನೆಲ್ಲ ಗಿಫ್ಟ್ ಕೊಡಬಹುದು ಅನ್ನೋ ಕುತೂಹಲ ಹೆಚ್ಚಾಗಿದೆ. ಸದ್ಯ ನಾಳೆ 16ನೇ ಬಾರಿಗೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದು ಸಿದ್ದು ಲೆಕ್ಕಾಚಾರದ ಮೇಲೆ ನಿರೀಕ್ಷೆಗಳು ಗರಿಗೆದರಿವೆ
ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ರಾಜ್ಯಕ್ಕೆ ಸಾಕಷ್ಟು ಸಮಸ್ಯೆಗಳ ಮಹಾಪುರವೇ ಇದೆ.ಇತ್ತ ರಾಜಧಾನಿಯಲ್ಲೂ ಸಾಕಷ್ಟು ಸಮಸ್ಯೆಗಳು ತಾಂಡವವಾಡ್ತಿದ್ದು, ಸಿದ್ದರಾಮಯ್ಯ ಬಜೆಟ್ ನಲ್ಲಿ ಸಿಹಿ ಕೊಡ್ತಾರಾ ಅನ್ನೋ ಕುತೂಹಲ ಮನೆಮಾಡಿದೆ. ಮೂಲಭೂತ ಸೌಕರ್ಯಗಳು. ಕುಡಿಯುವ ನೀರು, ಟ್ರಾಫಿಕ್ ಸಮಸ್ಯೆ, ಸುಗಮ ಸಂಚಾರ ವ್ಯವಸ್ಥೆ, ಗುಂಡಿಗಳಿಲ್ಲದ ರಸ್ತೆಗಳು, ಮೆಟ್ರೋ ಕಾಮಗಾರಿ ಚುರುಕುಗೊಳಿಸುವುದು, ಬಿಎಂಟಿಸಿ ಬಸ್ ಸಂಚಾರ ಹೆಚ್ಚಳ, ಸಬ್ ಅರ್ಬನ್ ರೈಲು ವ್ಯವಸ್ಥೆ ಸೇರಿ ಹಲವು ನಿರೀಕ್ಷೆಗಳನ್ನ ಹೊತ್ತಿರೋ ಮಹಾನಗರಕ್ಕೆ ಗ್ಯಾರಂಟಿ ಸರ್ಕಾರ ಏನೆಲ್ಲ ಗಿಫ್ಟ್ ಕೊಡಬಹುದು ಅನ್ನೋ ಚರ್ಚೆ ಜೋರಾಗಿದೆ.








