ಭತ್ತ ಕುಟ್ಟಿದರೆ ಅಕ್ಕಿ ಬರುತ್ತದೆ, ತೌಡು ಕುಟ್ಟಿದರೆ ಏನು ಫಲ? : ಸಿದ್ದರಾಮಯ್ಯ

ಬೆಂಗಳೂರು

     ಗೋಹತ್ಯೆ ನಿಷೇಧ ಕಾಯ್ದೆ ಇರುವುದರಿಂದ ವಯಸಾಗಿರುವ, ರೋಗ ಬಂದಿರುವ, ಉಳುಮೆ ಮಾಡಲು ಸಾಧ್ಯವಾಗದ ಜಾನುವಾರುಗಳನ್ನು ಯಾರು ಖರೀದಿಸದೆ ಇರುವುದು ರೈತರಿಗೆ ದೊಡ್ಡ ತಲೆ ನೋವಾಗಿದೆ. ಕೋಮುವಾದಿ ಉದ್ದೇಶದೊಂದಿಗೆ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮೊದಲು ತೆಗೆದುಹಾಕಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಆಗ್ರಹಿಸಿದರು.

     ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಶುಸಂಗೋಪನಾ ಇಲಾಖೆಯ ನಿರ್ದೇಶಕರು 2019ರಲ್ಲಿ 1 ಕೋಟಿ 29 ಲಕ್ಷ ಜಾನುವಾರುಗಳು ರಾಜ್ಯದಲ್ಲಿದ್ದಾವೆ ಎಂದು ಉತ್ತರ ನೀಡಿದ್ದರು, 2022ರಲ್ಲಿ 1 ಕೋಟಿ 14 ಲಕ್ಷ ಜಾನುವಾರಿವೆ ಎಂದು ಉತ್ತರ ನೀಡಿದ್ದಾರೆ. ಬರೀ ಮೂರೇ ವರ್ಷದಲ್ಲಿ 15 ಲಕ್ಷ ಜಾನುವಾರುಗಳು ಕಾಣೆಯಾಗಿವೆ ಎಂದರೆ ಇದನ್ನು ನಂಬಬಹುದಾ? ನಾವು ಗೋಹತ್ಯೆ ನಿಷೇಧ ಮಾಡಿ, ಗೋಶಾಲೆ ತೆರೆದು ಗೋಸಂಪತ್ತು ಅಭಿವೃದ್ಧಿ ಆಗಿದೆ ಎಂದಿದ್ದೀರಿ, ಎಲ್ಲಪ್ಪ ಅಭಿವೃದ್ಧಿ ಆಗಿರುವುದು ಕಡಿಮೆ ಆಗಿದೆಯಲ್ವಾ? ಎಂದು ಪ್ರಶ್ನಿಸಿದರು.

     123 ಸರ್ಕಾರಿ, 200 ಖಾಸಗಿ ಗೋಶಾಲೆಗಳಿವೆ. ಒಂದು ಹಸು ಸಾಕಲು ದಿನಕ್ಕೆ 17 ರೂ. ನಂತೆ ಸರ್ಕಾರ ನೀಡುತ್ತದೆ, ಕನಿಷ್ಠ ಒಂದು ಹಸುವಿಗೆ ನಿತ್ಯ 60 ರೂ. ಮೇವು ಬೇಕು. ಹೀಗಾದರೆ ಹಸುವಿಗೆ ಹೊಟ್ಟೆತುಂಬ ಮೇವು ನೀಡೋಕೆ ಸಾಧ್ಯವೇ? ಮೊದಲೆಲ್ಲ ರೈತರು ಉಪಯುಕ್ತವಿಲ್ಲದ ಜಾನುವಾರುಗಳನ್ನು ಸಂತೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು, ಈಗ ಅದನ್ನು ನಿಷೇಧ ಮಾಡಲಾಗಿದೆ. ಸರ್ಕಾರವಾದರೂ ಈ ಜಾನುವಾರುಗಳನ್ನು ಖರೀದಿ ಮಾಡುವುದಾದರೆ ಅಡ್ಡಿಲ್ಲ, ಅದನ್ನೂ ಮಾಡುತ್ತಿಲ್ಲ ಎಂದರು.

      ರಾಜ್ಯಪಾಲರು ಈ ತಿಂಗಳ 10ರಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಸುಮಾರು 82 ಪ್ಯಾರಗಳಿರುವ ಅವರ ಭಾಷಣ ನೋಡಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿನ ರಾಜಭವನಗಳು ವಿವಾದದ ಕೇಂದ್ರಗಳಾಗಿವೆ, ಆದರೆ ಕರ್ನಾಟಕದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಯಾವುದೇ ವಿವಾದದ ಸುಳಿಗೆ ಸಿಕ್ಕಿಹಾಕಿಕೊಳ್ಳದೆ ರಾಜಭವನದ ಗೌರವ, ಘನತೆಯನ್ನು ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮೊದಲಿಗೆ ರಾಜ್ಯಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ ಎಂದರು.

      ರಾಜ್ಯಪಾಲರ ಭಾಷಣವನ್ನು ರಾಜ್ಯಪಾಲರು ಸಿದ್ಧಪಡಿಸಿಕೊಳ್ಳುವುದಿಲ್ಲ, ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಅವರು ಓದುವುದು ಸಂಪ್ರದಾಯ. ನನ್ನ ರಾಜಕೀಯ ಜೀವನದ 40 ವರ್ಷಗಳಲ್ಲಿ ಇಷ್ಟೊಂದು ಕೆಟ್ಟ ಭಾಷಣವನ್ನು ನಾನು ಈ ಹಿಂದೆ ಕೇಳಿರಲಿಲ್ಲ. ಅವರ ಇಡೀ ಭಾಷಣದಲ್ಲಿ ಸರ್ಕಾರ ಸುಳ್ಳನ್ನು ಹೇಳಿಸಿದೆ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಸುಳ್ಳನ್ನೇ ಜಾಸ್ತಿ ಹೇಳುವುದು, ಆಗಾಗ ಸತ್ಯ ಹೇಳುತ್ತಾರೆ ಅಷ್ಟೆ. ವಸ್ತುಸ್ಥಿತಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವುದಿಲ್ಲ.

    ರಾಜ್ಯಪಾಲರ ಭಾಷಣದಲ್ಲಿ ಹಿನ್ನೋಟ ಇರಬೇಕು, ಕಳೆದ 4 ವರ್ಷಗಳ ಸಾಧನೆಗಳನ್ನು, ರಾಜ್ಯದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ರಾಜ್ಯಪಾಲದ ಭಾಷಣದಲ್ಲಿ ಹೇಳಿಸಬೇಕಿತ್ತು, ಇದರ ಜೊತೆಗೆ ಮುನ್ನೋಟವೂ ಇರಬೇಕಿತ್ತು. ರಾಜ್ಯಪಾಲರ ಭಾಷಣದಲ್ಲಿ ಹಿನ್ನೋಟ ಬರೀ ಸುಳ್ಳುಗಳಿಂದ ಕೂಡಿತ್ತು, ಮುನ್ನೋಟ ಇರಲೇ ಇಲ್ಲ. ಸರ್ಕಾರ ತೌಡು ಕುಟ್ಟುವ ಕೆಲಸ ಮಾಡಿದೆ, ಭತ್ತ ಕುಟ್ಟಿದರೆ ಅಕ್ಕಿ ಬರುತ್ತದೆ, ತೌಡು ಕುಟ್ಟಿದರೆ ಏನು ಫಲ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

    ಬಿಜೆಪಿ ಸರ್ಕಾರ ರೈತರಿಗೆ ನೀಡಿದ್ದ ಭರವಸೆಗಳು ಈಡೇರಿಲ್ಲ. ಈ ರೀತಿ ರೈತರಿಗೆ ಹಲವು ಭರವಸೆಗಳನ್ನು ನೀಡಿದ್ದರು, ಆದರೆ ಯಾವೊಂದು ಭರವಸೆಯನ್ನು ಈಡೇರಿಸಲಿಲ್ಲ. ಹೀಗಾದರೆ ರೈತರ ಆದಾಯ ದುಪ್ಪಟ್ಟು ಆಗುವುದು ಹೇಗೆ? ಇದನ್ನೇ ನಾನು ಸುಳ್ಳು ಭಾಷಣ ಎಂದು ದೂರಿರುವುದು. ಇದು ಸಂಸದೀಯ ಪದವೂ ಹೌದು. ರೈತರ ಸಾಲವನ್ನು ಒಂದು ರೂಪಾಯಿ ಕೂಡ ಮನ್ನಾ ಮಾಡುವ ಕೆಲಸ ಮಾಡಿಲ್ಲ. ಹಿಂದೆ ಸಾಲ ಮನ್ನಾ ಮಾಡಿದ್ದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ, ಅದರಲ್ಲಿ ದಾಖಲೆ ನೀಡದೆ ಉಳಿದುಕೊಂಡ ಕೆಲವು ರೈತರ ಸಾಲಮನ್ನಾವನ್ನು ಈ ಸರ್ಕಾರ ಪೂರ್ಣಗೊಳಿಸುವ ಕೆಲಸ ಮಾಡಿದೆ ಎಂದರು.

    ಬಿಜೆಪಿಯ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನಲ್ಲಿ ಮಾತ ನಾಡುವಾಗ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್, ಹಿಜಾಬ್ ಬಗ್ಗೆ ಮಾತನಾಡಿ ಎಂದಿದ್ದಾರೆ. ಮೊನ್ನೆ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಅವರು ಅಭಿವೃದ್ಧಿ ಬಗ್ಗೆ ಮಾತನಾಡದೆ, ಅಬ್ಬಕ್ಕ ವರ್ಸಸ್ ಟಿಪ್ಪು ನಡುವಿನ ಚುನಾವಣೆ ಎಂದಿದ್ದಾರೆ. ಇದು ಈ ದೇಶದ ಗೃಹ ಮಂತ್ರಿ ಆಡುವ ಮಾತಾ? ಮಹಾತ್ಮಾ ಗಾಂಧಿ ವರ್ಸಸ್ ಸಾವರ್ಕರ್ ನಡುವಿನ ಚುನಾವಣೆ ಎನ್ನುತ್ತಾರೆ. ಇವೆಲ್ಲ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದೆಯಾ? ಹತ್ತಿ ರಫ್ತನ್ನು ಕೂಡ ನಿಷೇಧ ಮಾಡಿದ್ದಾರೆ, ಇದರಿಂದ ಬೆಲೆ ಬಿದ್ದೋಗಿದೆ. ಇಂಥ ವಿಚಾರಗಳನ್ನು ಭಾಷಣದಲ್ಲಿ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ.

    ತೊಗರಿ ಬೆಳೆಗೆ, ಅಡಿಕೆಗೆ ಪರಿಹಾರವನ್ನು ಸರಿಯಾಗಿ ನೀಡಿಲ್ಲ. ಭೂತಾನ್ ನಿಂದ 17,000 ಮೆಟ್ರಿಕ್ ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಹಿಂದೆ ಅಡಿಕೆ ಬೆಲೆ 60,000 ವರೆಗೆ ಇತ್ತು, ಈಗ ಅಡಿಕೆ ಬೆಲೆ ಕುಸಿದು ಹೋಗಿರುವುದರಿಂದ ನಾವು ನಷ್ಟಕ್ಕೆ ಈಡಾಗಿದ್ದೇವೆ ಎಂದು ನನ್ನ ಬಳಿ ರೈತರು ನೋವು ಹೇಳಿಕೊಂಡಿದ್ದಾರೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link