ಭರವಸೆ ಈಡೇರಿಸದ ಮೋದಿ ಪ್ರಧಾನಿಯಾಗಲು ನಾಲಾಯಕ್: ಸಿದ್ದರಾಮಯ್ಯ

 ತುಮಕೂರು:

    ಪ್ರಧಾನಿಯಾದ ನೂರು ದಿನದೊಳಗೆ ವಿದೇಶದಲ್ಲಿನ ಕಪ್ಪು ಹಣ ತರಿಸಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಖಾತೆ ಹಣ ಹಾಕುತ್ತೇನೆ, ನಿರುದ್ಯೋಗಿ ಯುವಜನರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದ ಮೋದಿಯವರು ಪ್ರಧಾನಿಯಾಗಿ ಹತ್ತು ವರ್ಷ ಕಳೆದರೂ ಭರವಸೆ ಈಡೇರಿಸಿಲ್ಲ. 2ಕೋಟಿ ಉದ್ಯೋಗವಿರಲಿ 20 ಲಕ್ಷದಷ್ಟು ಉದ್ಯೋಗ ಸೃಷ್ಟಿಮಾಡಿಲ್ಲ. ಬದಲಾಗಿ ಯುವಕರು ಪಕೋಡ ಮಾಡಿ ಎಂದು ಕರೆ ಕೊಟ್ಟರು. ಇಂತಹವರು ಪ್ರಧಾನಿ ಆಗಲು ಲಾಯಕ್ಕಲ್ಲ, ನಾಲಾಯಕ್ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು.

    ಅವರು ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಯಲ್ಲಾಪುರದಲ್ಲಿ ಮಂಗಳವಾರ ಸಂಜೆ ತುಮಕೂರು ನಗರ, ಗ್ರಾಮಾಂತರ, ಕೊರಟಗೆರೆ, ಮಧುಗಿರಿ ಕ್ಷೇತ್ರ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಗುಡುಗಿದರು.

    ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸುತ್ತೇವೆಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಕಳೆದ ಹತ್ತು ವರ್ಷದಲ್ಲಿ ಇಳಿಸಿದ್ದಾದರೂ ಏನು? ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಅವರು 2014ರಲ್ಲಿ ಲೀಟರ್‍ಗೆ 40 ರೂ. ಇದ್ದ ಡೀಸಲ್ 90 ರೂ.ಗೆ ಏರಿಕೆಯಾಗಿದೆ. ಕ್ರಮವಾಗಿ ಪೆಟ್ರೋಲ್ 100 ರೂಪಾಯಿಗೆ ಜಿಗಿದಿದೆ. 414ರೂ. ಇದ್ದ ಅಡುಗೆ ಅನಿಲ 950 ರೂ.ಗಳಿಗೆ ಏರಿಕೆಯಾಗಿದೆ. ಕೃಷಿಕರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ಡಬಲ್ ಆಯಿತೇ? ಬರೀ ಸುಳ್ಳು ಹೇಳುತ್ತಲೇ ಜನತೆಯನ್ನು ವಂಚಿಸುತ್ತಿದ್ದಾರೆ. ಇಂತಹ ಸುಳ್ಳು ಹೇಳುತ್ತಿರುವ ಕರ್ನಾಟಕಕ್ಕೆ ತೆರಿಗೆ ಹಣ ಹಂಚಿಕೆ-ಬರ ಪರಿಹಾರದಲ್ಲಿ ವಂಚನೆ ಮಾಡುತ್ತಿರುವ ಪ್ರಧಾನಿ ವಿರುದ್ಧ ಕಾಂಗ್ರೆಸ್ ಚೊಂಬು ಜಾಹೀರಾತು ನೀಡಿದರೆ, ಮಾಜಿ ಪ್ರಧಾನಿ ದೇವೇಗೌಡರು ಈ ಜಾಹೀರಾತು ಪೋಸ್ಟರ್ ಹಿಡಿದು ಚೊಂಬನ್ನು ಮೋದಿ ಅಕ್ಷಯ ಪಾತ್ರೆ ಮಾಡಿದರು ಎಂದು ಸುಳ್ಳನ್ನು ಹೊಗಳುತ್ತಾರೆಂದರೆ ಇವರಿಗೆ ಮಾನ ಮಾರ್ಯದೆ ಇದೆಯೇ ಎಂದು ಪ್ರಶ್ನಿಸಿದರು. 

 ಮೋದಿ ವಿರುದ್ಧ ಹರಿಹಾಯುತ್ತಿದ್ದ ದೇವೇಗೌಡರು ಇಂದು ತಮ್ಮ ಕುಟುಂಬದ ಹಿತಕ್ಕೋಸ್ಕರ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ನಾಲ್ಕು ಟಿಕೆಟ್ ಪಡೆದು ಅದರಲ್ಲಿ ಮೂರನ್ನು ಮಗ, ಮೊಮ್ಮಗ, ಅಳಿಯನಿಗೆ ಕೊಡಿಸಿ ಮೋದಿ ಬಿಟ್ಟರೆ ಪ್ರಧಾನಿಯಾಗಲು ಯಾರಿದ್ದಾರೆ ಎಂದು ಕೇಳುತ್ತಾರೆ.

    140 ಕೋಟಿ ಭಾರತೀಯರಲ್ಲಿ ಬಹಳಷ್ಟು ಮಂದಿಗೆ ಪ್ರಧಾನಿಯಾಗುವ ಅರ್ಹತೆಯಿದೆ. ರಾಹುಲ್‍ಗಾಂಧಿ ಸೇರಿ ಅನೇಕ ಅರ್ಹರ ನಮ್ಮ ಪಕ್ಷದಲ್ಲೇ ಇದ್ದಾರೆ. ಕಳೆದ ಬಾರಿ ತುಮಕೂರಲ್ಲಿ ಸೋತು ಈಗ ಸೋಮಣ್ಣ ಪರ ಮತಯಾಚಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

     ನಮ್ಮ ಸರ್ಕಾರ ರಚನೆಯಾದ ಮೇಲೆ ಪರಮೇಶ್ವರ್ ಅಧ್ಯಕ್ಷತೆಯ ಪ್ರಣಾಳಿಕೆ ಸಮಿತಿಯಲ್ಲಿ ಘೋಷಿಸಿದಂತೆ 5 ಗ್ಯಾರಂಟಿಗಳು ಸೇರಿ 82 ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮದು ನುಡಿದಂತೆ ನಡೆದ ಸರ್ಕಾರ. ಗ್ಯಾರಂಟಿ ನಿಲ್ಲಿಸಲಾಗುತ್ತದೆಯೆಂಬ ಅಪಪ್ರಚಾರಕ್ಕೆ ಕಿವಿಗೊಡದೆ ಇದೇ 26ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ. ಈಮೂಲಕ ಗ್ರಾಮಾಂತರ ಮಾಜಿ ಶಾಸಕ ಗೌರಿಶಂಕರ್ ಸೇರಿ ಜಿಲ್ಲೆಯ ಕೈ ನಾಯಕರಿಗೆ ಅಭಿವೃದ್ಧಿ ಕಾರ್ಯಕೈಗೊಳ್ಳಲು ಬಲ ತುಂಬಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

    ಗ್ರಾಮಾಂತರ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಬಿಜೆಪಿಯವರು ಕಳೆದ ಬಾರಿಯಂತೆ ಮೋದಿ ಮುಖ ನೋಡಿ ಬಿಜೆಪಿಗೆ ಮತಹಾಕಿ ಎಂದು ಮತದಾರರ ಮುಂದೆ ಮತ್ತೆ ಬಂದಿದ್ದಾರೆ. ಕಳೆದ ಬಾರಿ ಮತಹಾಕಿ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದಕ್ಕೆ ಯಾವುದಾದರೂ ಒಂದು ಹಳ್ಳಿಯಲ್ಲಿ 50ಲಕ್ಷದಷ್ಟು ಪ್ರಗತಿ ಕಾಮಗಾರಿಯಾಗಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.

    ಸಿಎಂಗೆ ಗ್ರಾಮಾಂತರ ಕಾಂಗ್ರೆಸ್ ಮುಖಂಡರು ಕುರಿಮರಿ ನೀಡಿ ಬೃಹತ್ ಹಾರ ಹಾಕಿ ಸನ್ಮಾನಿಸಿದರು. ವೇದಿಕೆಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕೆಎಸ್‍ಆರ್‍ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಶಾಸಕರಾದ ಷಡಾಕ್ಷರಿ, ಎಚ್.ವಿ.ವೆಂಕಟೇಶ್, ಎಂಎಲ್ಸಿ ಆರ್.ರಾಜೇಂದ್ರ, ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್, ಕೆ.ಎಸ್.ಕಿರಣ್‍ಕುಮಾರ್, ಗಂಗಹನುಮಯ್ಯ, ಮಾಜಿ ಎಂಎಲ್ಸಿಗಳಾದ ಎಂ.ಸಿ.ವೇಣುಗೋಪಾಲ್, ಬೆಮೆಲ್ ಕಾಂತರಾಜ್, ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮುಖಂಡರಾದ ಇಕ್ಬಾಲ್ ಅಹಮದ್, ಮುರಳೀಧರ ಹಾಲಪ್ಪ, ಗೋವಿಂದರಾಜ್, ನಿಖೇತ್‍ರಾಜ್ ಮೌರ್ಯ, ರಾಮಕೃಷ್ಣ, ಷಣ್ಮುಖಪ್ಪ, ಎಚ್.ಸಿ.ಹನುಮಂತಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಗೀತಾರಾಜಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಠೆಮಠ್, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬ್ಲಾಕ್ ಕಾಂಗ್ರೆಸ್ ಮುಖಂಡರುಗಳಿದ್ದರು.  

 

Recent Articles

spot_img

Related Stories

Share via
Copy link
Powered by Social Snap