ಹುಬ್ಬಳ್ಳಿ:
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದಲ್ಲಿ ರಾಜ್ಯದ ಮುಖ್ಯಸ್ಥರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊರಬೇಕಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಬುಧವಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತಿದ್ದಾರೆ. ಆದರೆ, ಹಗರಣದಲ್ಲಿ ಅವರ ಪಾತ್ರವಿಲ್ಲ ಎಂದು ಹೇಳಿದರು.
ಅವ್ಯವಹಾರ ಕೇಳಿ ಬಂದ ಕೂಡಲೆ ಮುಖ್ಯಮಂತ್ರಿಗಳು ತನಿಖೆಗೆ ವಿಶೇಷ ತಂಡ ರಚಿಸಿ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡುವಂತೆ ಸೂಚಿಸಿ ಕ್ರಮ ಕೈಗೊಂಡಿದ್ದಾರೆಂದು ಹೇಳಿದರು. ಇನ್ನು ಮುಡಾ ಹಗರಣದ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ಅವರಿಗೆ ಯಾರು ಸೈಟ್ ಕೊಟ್ಟಿದ್ದಾರೆ? ಕಮಿಟಿಯಲ್ಲಿ ಜಿಟಿ.ದೇವೇಗೌಡ, ರಾಮದಾಸ್, ತನ್ವೀರ್ ಸೇಠ್ ಸೇರಿದಂತೆ ಅನೇಕರಿದ್ದರು. ಆದರೆ, ಅವರೆಲ್ಲರೂ ಕಾಂಗ್ರೆಸ್ ವನರಲ್ಲ. ವರದಿ ಬರಲಿ. ಅಕಸ್ಮಾತ್ ಮುಖ್ಯಮಂತ್ರಿಗಳು ತಪ್ಪಿತಸ್ಥರಿದ್ದರೆ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಬಂಡವಾಳ ಹೂಡಿಕೆದಾರರು ರಾಜ್ಯ ಬಿಟ್ಟು ಹೋಗುತ್ತಿದ್ದಾರೆಂಬ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಖಂಡಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ಪರಿಸ್ಥಿತಿ ಉತ್ತಮವಾಗಿದೆ. ಗೃಹ ಇಲಾಖೆ ಮಿಷನ್ ಮೋಡ್‌ನಲ್ಲಿ ಕೆಲಸ ಮಾಡುತ್ತಿದೆ ಎಂದು ತಿರುಗೇಟು ನೀಡಿದರು.