ಸಿದ್ದರಾಮಯ್ಯ ಭ್ರಷ್ಟರಲ್ಲ : ಪ್ರತಾಪ್‌ ಸಿಂಹ

ಮೈಸೂರು: 

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದ ಕಾರಣ ಗೌರವ ಮತ್ತು ಕಾಳಜಿಯಿಂದ ಮುಡಾಕ್ಕೆ ತಮ್ಮ ಪತ್ನಿಯ ನಿವೇಶನಗಳನ್ನು ಒಪ್ಪಿಸಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

    ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್. ನಾನು ಈಗಲೂ ಅವರನ್ನು ಭ್ರಷ್ಟಎನ್ನುವುದಿಲ್ಲ. ರಾಜ್ಯದಲ್ಲಿ ಸಿಎಂ ಆದವರಿಗೆ ಹೋಲಿಸಿದ್ರೆ ಸಿದ್ದರಾಮಯ್ಯ ಅಷ್ಟೇನೂ ಆಸ್ತಿವಂತರಲ್ಲ. ಯಕಶ್ಚಿತ್ 14 ಸೈಟುಗಳಿಗೆ ತಮ್ಮ ವರ್ಚಸ್ಸು ಕುಗ್ಗುವಂತೆ ಮಾಡಿಕೊಳ್ಳುವುದು ಬೇಡ ಎಂದು ಸಲಹೆ ನೀಡಿದ್ದಾರೆ.

   ಮುಡಾ ಸೈಟ್‌ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಸೈಟು ಹಿಂತಿರುಗಿಸಿ, ಒಂದೊಳ್ಳೆ ಮೇಲ್ಪಂಕ್ತಿ ಹಾಕಲಿ. ನೊಣ ತಿಂದು ಜಾತಿ ಕೆಡಿಸಿಕೊಂಡಂತೆ ಸಿದ್ದರಾಮಯ್ಯ ಅವರಿಗೆ ಕಪ್ಪು ಚುಕ್ಕೆ ಬಾರದಿರಲಿ ಎಂದರು. ಕೂಡಲೇ ಮುಡಾಕ್ಕೆ ಸೈಟ್ ಸೆರೆಂಡರ್ ಮಾಡಿ ಘನತೆ ಉಳಿಸಿಕೊಳ್ಳಲಿ. ಸಂತೋಷ್ ಹೆಗ್ಡೆ, ಎನ್.ಕುಮಾರ್ ಅವರಂಥ ದಕ್ಷ ನ್ಯಾಯಮೂರ್ತಿಗಳಿಂದ ಮುಡಾ ಹಗರಣ ತನಿಖೆ ಮಾಡಿಸಲಿ. ಅವರ ಗಮನಕ್ಕೆ ಬಾರದೆ ಅವರ ಬಾಮೈದ ತಪ್ಪು ಮಾಡಿರಬಹುದು. ಅವರು ಸೈಟು ಹಿಂತಿರುಗಿಸಿ, ಒಂದೊಳ್ಳೆ ಮೇಲ್ಪಂಕ್ತಿ ಹಾಕಲಿ. ಸಿದ್ದರಾಮಯ್ಯ ಅವರ ಅತೀರ್ಮಾನದಿಂದ 4 ಸಾವಿರ ಕೋಟಿ ರೂ. ಮುಡಾ ಲಾಭ ಬರುತ್ತದೆ” ಎಂದು ಮನವಿ ಮಾಡಿದರು.

   ನಾನು ಸಂಸದನಾಗಿದ್ದೆ. ಜಿ ಕೆಟಗರಿ ಸೈಟ್‌ನಲ್ಲಿ ಕಾನೂನಾತ್ಮಕ ಸಿಆರ್‌ ಕೊಡಿ ಅಂತ ಕೇಳಿದ್ದೆ. ಜುಜುಬಿ ಶೇ.25 ರಷ್ಟು ದಂಡ ಉಳಿಸಲು ಹೋಗಿಲ್ಲ. ಕಾನೂನು ರೀತಿ ಇಲ್ಲ ಎಂದು ನಾನೇ ಮುಡಾ ಆಯುಕ್ತರಿಗೆ ಹೇಳಿ ರದ್ದು ಮಾಡಿಸಿದ್ದೆ. ನಾನು ಕಟ್ಟಬೇಕಿರೋದು ಸಾವಿರ, ಒಂದೆರಡು ಲಕ್ಷ ರೂ. ದಂಡ. ಅದಕ್ಕೂ ಕೋಟ್ಯಂತರ ರೂ. ಮುಡಾ ಹಗರಣಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು.

   ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಸಾಫ್ಟ್ ಕಾರ್ನರ್ ವ್ಯಕ್ತಪಡಿಸಿದ ಅವರು, ಇಬ್ಬರೂ ನಮ್ಮ ಹಳೆ ಮೈಸೂರು ಭಾಗದವರು. ಯಾರೇ ಸಿಎಂ ಆಗಲಿ ಅದು ಹೆಮ್ಮೆಯ ವಿಚಾರ. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಅವರ ಬೆಂಬಲಿಗರು ಹೇಳುತ್ತಿರುವುದನ್ನು ನಾನು ಉಲ್ಲೇಖಿಸಿದ್ದೇನೆ ಅಷ್ಟೇ ಎಂದಿದ್ದಾರೆ.