ತುಮಕೂರು:
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ಧರಾಮಯ್ಯ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ವಿರೋಧಿಸಿ ನಗರದ ಜೈನ ಸಮುದಾಯ ಭವನದಲ್ಲಿ ಶನಿವಾರ ಸಂಜೆ ಖಂಡನಾ ಸಭೆ ಜರುಗಿತು.
ಸಭೆಯಲ್ಲಿ ಭಾಗವಹಿಸಿದ್ದ ಎಂಎಲ್ಸಿ ರಾಜೇಂದ್ರ, ಹಿಂದುಳಿದ., ದಲಿತ, ಅಲ್ಪಸಂಖ್ಯಾತ ಹಾಗೂ ವಿವಿಧ ಸಮುದಾಯಗಳ ಮುಖಂಡರು, ಹೋರಾಟಗಾರರು ರಾಜ್ಯಪಾಲರ ನಡೆಯನ್ನು ಖಂಡಿಸಿದರಲ್ಲದೆ ಮುಖ್ಯಮಂತ್ರಿಗಳ ವಿರುದ್ಧ ನಡೆಯುತ್ತಿರುವ ಪಿತೂರಿಯನ್ನು ಖಂಡಿಸಿ ಪ್ರಬಲ ಹೋರಾಟ ರೂಪಿಸಲು ತೀರ್ಮಾನ ಕೈಗೊಂಡರು.
ಈ ವೇಳೆ ಮಾತನಾಡಿದ ಎಂಎಲ್ಸಿ ರಾಜೇಂದ್ರ ಅವರು ಬಡವರ ಬಂಧು, ಜಾತ್ಯಾತೀತ ನಿಲುವಿನ ನೇತಾರ, ಸಮಸಮಾಜ ನಿರ್ಮಾಣಕ್ಕೆ ಸಾರ್ವಜನಿಕ ರಂಗದಲ್ಲಿ ಕಳೆದ ಐದು ದಶಕದಿಂದ ಶ್ರಮಿಸುತ್ತಿರುವ ಜನಕಲ್ಯಾಣಕ್ಕಾಗಿ ಹಲವು ಭಾಗ್ಯ, ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ವ್ಯಕ್ತಿಯಲ್ಲ ಕರ್ನಾಟಕದ ಶಕ್ತಿಯಾಗಿದ್ದಾರೆ. ಶೋಷಿತರ ಗಟ್ಟಿಧ್ವನಿಯಾದ ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿರುವುದನ್ನು ಸಹಿಸದೆ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ವ್ಯವಸ್ಥಿತ ಪಿತೂರಿ ಮಾಡಲಾಗುತ್ತಿದೆ.
ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರು, ಲೋಕಾಯುಕ್ತ, ಸಿಬಿಐ, ಎಸ್‌ಐಟಿಯಂತ ತನಿಖಾ ಸಂಸ್ಥೆಗಳ ಬೇಡಿಕೆಯೇ ಇಲ್ಲದೆ ದುರುದ್ದೇಶದ ಖಾಸಗಿ ದೂರನ್ನು ನೆಪಮಾಡಿಕೊಂಡು ದಕ್ಷ, ಜನಪರ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದರ ವಿರುದ್ಧ ಜಾತ್ಯಾತೀತವಾಗಿ ಎಲ್ಲರೂ ಹೋರಾಡಬೇಕಿದೆ ಎಂದು ಕರೆಕೊಟ್ಟರು.
ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳಲು ಮನವಿ:
ಬಿಜೆಪಿಯಿಂದ ರಾಜಭವನ ದುರುಪಯೋಗಕ್ಕೆ ತಾರ್ಕಿಕ ಅಂತ್ಯ ಕಾಣ ಸುವವರೆಗೆ ನಿರಂತರ ಹೋರಾಟವನ್ನು ನಡೆಸಲು ಸಭೆ ತೀರ್ಮಾನಿಸಿದ್ದು, ಕಾಂಗ್ರೆಸ್ ಪಕ್ಷದಿಂದ ಆ.19 ಸೋಮವಾರ ನಡೆಯಲಿರುವ ಹೋರಾಟದಲ್ಲೂ ಸ್ವಯಂಪ್ರೇರಿತವಾಗಿ ಭಾಗವಹಿಸಬೇಕೆಂದು ಮುಖಂಡರಲ್ಲಿ ಮನವಿ ಮಾಡಲಾಯಿತು.
ಬಡವರ ಪರ ಕಾರ್ಯಕ್ರಮ ನೀಡಿದಕ್ಕೆ ಸಿಎಂ ವಿರುದ್ಧ ಪಿತೂರಿಯೇ…?
ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಲ್ಲಿ ಹಿಂದುಳಿದ ಕುರಿಗಾಹಿ ಕುಟುಂಬದಲ್ಲಿ ಜನಿಸಿ ಕಷ್ಟಪಟ್ಟು ಓದಿ, ವಕೀಲರಾಗಿ ರೈತಪರ ಸಮಾಜವಾದಿ ಚಳವಳಿಯಲ್ಲಿ ತೊಡಗಿ ಬುದ್ಧ. ಬಸವ, ಗಾಂಧೀಜಿ, ಅಂಬೇಡ್ಕರ್, ಲೋಹಿಯಾ ವಿಚಾರಧಾರೆಗಳಿಂದ ಪ್ರಭಾವಿತರಾಗಿ ರಾಜಕೀಯ ಅಧಿಕಾರವಿದ್ದಾಗಲೂ, ಇಲ್ಲದಿದ್ದಾಗಲೂ ಸದಾ ಜನಪರ ಚಿಂತನೆಯನ್ನೇ ಮಾಡುತ್ತಾ ಬಂದಿರುವ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರೆಂಬ ಒಂದೇ ಕಾರಣಕ್ಕೆ ರಾಜಕೀಯ ಷಡ್ಯಂತ್ರ ಮಾಡಿ ಅವರನ್ನು ಪದಚ್ಯುತಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ.
1983ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ತಮ್ಮ ಪ್ರತಿಭೆ ಸಾಮಾರ್ಥ್ಯದಿಂದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಂದಲೇ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಸಿದ್ದರಾಮಯ್ಯ ಮುಂದೆ ರೇಷ್ಮೆ, ಪಶುಸಂಗೋಪನೆ ಸೇರಿ ವಿವಿಧ ಇಲಾಖೆ ಸಚಿವರಾಗಿ ಗಮನಾರ್ಹ ಕೆಲಸಮಾಡಿದವರು. 1996, 2004ರಲ್ಲಿ 2 ಬಾರಿ ಉಪಮುಖ್ಯಮಂತ್ರಿಯಾಗಿ, ಎರಡು ಬಾರಿ ವಿಪಕ್ಷ ನಾಯಕರಾಗಿ ಬಿಜೆಪಿ ಸರ್ಕಾರದ ಕೋಟ್ಯಾಂತರ ಲೂಟಿ ಹಗರಣಗಳನ್ನೇ ನಾಡಿನ ಜನತೆ ಮುಂದೆ ತೆರೆದಿಟ್ಟು, ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ ಅಕ್ರಮ ಗಣ ಕುಳಗಳಿಗೆ ಜೈಲಿನ ಹಾದಿ ತೋರಿಸಿದಕ್ಕೆ ಪ್ರತಿಕಾರವಾಗಿ ಮುಖ್ಯಮಂತ್ರಿಗಳ ಪತ್ನಿ ನಿಯಮಬದ್ಧವಾಗಿ ಪಡೆದ ನಿವೇಶನವನ್ನೇ ಅಸ್ತ್ರವಾಗಿಸಿಕೊಂಡು ಆಧಾರರಹಿತ ದೂರುಗಳನ್ನು ನೀಡಲಾಗಿದೆ.
ಮುಖ್ಯಮಂತ್ರಿಗಳ ಪೂರ್ವಾಪರವನ್ನು ಅರಿಯಲು ಮುಂದಾಗದ ರಾಜ್ಯಪಾಲರು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಬೇಕೆಂಬ ಬಿಜೆಪಿ ಕೇಂದ್ರ ಮತ್ತು ರಾಜ್ಯ ನಾಯಕರ ನಿರ್ದೇಶನದಂತೆ ಮುಡಾ ಪ್ರಕರಣ ಕುರಿತಂತೆ ಮುಖ್ಯಕಾರ್ಯದರ್ಶಿಗಳ ಸ್ಪಷ್ಟೀಕರಣವನ್ನು ಸರಿಯಾಗಿ ಪರಾಮರ್ಶಿಸದೆ ಷೋಕಾಸ್ ನೋಟಿಸ್ ನೀಡಿ ಇದೀಗ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ಆದೇಶಿಸಿರುವುದು ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಘನತೆಗೆ ಶೋಭೆ ತರವಂತಹುದಲ್ಲ.
ವರ್ಷದ ಹಿಂದೆಯೇ ಅನುಮತಿ ಕೋರಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಅವಧಿಯಲ್ಲಿ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ವಿರುದ್ಧದ ಮೊಟ್ಟೆ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದರೂ ಅದನ್ನು ಕೈ ಬಿಟ್ಟು ಇತ್ತೀಚೆಗೆ ದಾಖಲಾದ ಸಿಎಂ ಮೇಲಿನ ದುರುದ್ದೇಶಪೂರ್ವಕ ಅರ್ಜಿಯನ್ನು ಪರಿಗಣ ಸಿದ್ದಾದರೂ ಏಕೆ ಎಂದು ಮುಖಂಡರಾದ ಎಸ್.ನಾಗಣ್ಣ, ಕೊಟ್ಟ ಶಂಕರ್, ಕೆ.ದೊರೈರಾಜ್, ಕೆಂಚಮಾgಯ್ಯ, ಟಿ.ಆರ್.ಸುರೇಶ್, ನರಸೀಯಪ್ಪ, ಬಾಲಕೃಷ್ಣಪ್ಪ ಇತರರು ಪ್ರಶ್ನಿಸಿದರು.
ಹಿಂದುಳಿದ ವರ್ಗಗಳ ನೇತಾರರನ್ನು ಸಹಿಸದ ಶಕ್ತಿಗಳ ವಿರುದ್ಧ ನಮ್ಮ ಹೋರಾಟ
ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು, ಮುಖ್ಯಮಂತ್ರಿಗಳನ್ನೇ ಗುರಿಯಾಗಿಸಿಕೊಂಡು ರಾಜಭವನಗಳನ್ನು ದುರುಪಯೋಗಪಡಿಸಿಕೊಂಡು ಕೇಂದ್ರ ಬಿಜೆಪಿ ಸರ್ಕಾರ ನಡೆಸುತ್ತಿರುವ ಪಿತೂರಿಯನ್ನು ಒಕ್ಕೊರಲಿನಿಂದ ಪ್ರಬಲವಾಗಿ ವಿರೋಧಿಸುವ ಕಾಲ ಬಂದಿದೆ. ಪ್ರಜಾಪ್ರಭುತ್ವ ಉಳಿಸಲು ಪ್ರತಿಯೊಬ್ಬ ಕನ್ನಡಿಗರು ಕೈ ಜೋಡಿಸಬೇಕಿದೆ. ನಮ್ಮ ಹೋರಾಟ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಿತವಲ್ಲ.
ಹಿಂದುಳಿದ ವರ್ಗಗಳ ಬಡವರ ಆಶಾಕಿರಣರಾಗಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಂತೆ ಹಿಂದುಳಿದ ವರ್ಗದ ನೇತಾರರು ಉನ್ನತಸ್ಥಾನಕ್ಕೇರಿದಾಗಲೆಲ್ಲ ಸಹಿಸದೆೆ ಪಟ್ಟಭದ್ರ ಕೋಮುವಾದಿ ಶಕ್ತಿಗಳು ಮಾಡುತ್ತಿರುವ ಪಿತೂರಿಗಳ ವಿರುದ್ಧ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಹಿಂದುಳಿದ ವರ್ಗಗಳ ಒಕ್ಕೂಟದ ಗೌರವಾಧ್ಯಕ್ಷ ಟಿ.ಎನ್.ಮಧುಕರ್, ಉಪಾಧ್ಯಕ್ಷ ಪಿ.ಮೂರ್ತಿ, ರೂಪೇಶ್ ಕೃಷ್ಣಯ್ಯ, ನರಸೀಯಪ್ಪ ಸೇರಿ ಹಲವು ಮುಖಂಡರು ಸ್ಪಷ್ಟಪಡಿಸಿದರು. ಸಭೆಯಲ್ಲಿ ಡಾ.ಮುರಳೀಧರ್, ಡಾ.ಅರುಂಧತಿ, ರೇವಣಸಿದ್ದಯ್ಯ, ಹೆಬ್ಬೂರು ಗಿರೀಶ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಅನಿಲ್‌ಕುಮಾರ್, ಜ್ವಾಲಮಾಲಾ ರಾಜಣ್ಣ, ಧರ್ಮರಾಜ್, ಸುನೀತಾ ನಟರಾಜ್, ಎನ್.ಮಹೇಶ್, ನಗರಸಭೆ ಮಾಜಿ ಉಪಾಧ್ಯಕ್ಷ ವಾಲೆ ಚಂದ್ರಯ್ಯ, ನರಸಿಂಹಯ್ಯ ಇತರರು ಪಾಲ್ಗೊಂಡರು,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
