ಬೆಂಗಳೂರು:

ಬಿಜೆಪಿಯವರು ಲಜ್ಜೆಗೆಟ್ಟವರು. ಇವರಿಂದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕ ತನಿಖೆ ಅಸಾಧ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು, ಆತ್ಮಹತ್ಯೆ ಪ್ರಕರಣದಲ್ಲಿ 1ನೇ ಆರೋಪಿ ಆಗಿರುವ ಸಚಿವ ಈಶ್ವರಪ್ಪರಿಗೆ ಮಾನ ಮರ್ಯಾದೆ ಇದ್ದಿದ್ದರೆ ರಾಜೀನಾಮೆ ಕೊಡಬೇಕಿತ್ತು. ಅಧಿಕಾರದಲ್ಲಿದ್ದರೆ ನ್ಯಾಯ ಸಿಗಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಅಲ್ಲದೇ, ಹೈಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. 7 ತಂಡಗಳು ಪ್ರತಿ ಜಿಲ್ಲೆಗೆ ಹೋಗಿ ಪ್ರತಿಭಟನೆ ನಡೆಸಲಿದೆ. ನಂತರ ಬ್ಲಾಕ್ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ವಿವರಿಸಿದ ಅವರು, ಕರ್ನಾಟಕ ಇತಿಹಾಸದಲ್ಲಿ ಶೇ.40ರಷ್ಟು ಕಮಿಷನ್ ತೆಗೆದುಕೊಂಡಂತಹ ಸರ್ಕಾರವನ್ನು ಕಂಡಿರಲಿಲ್ಲ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖಾ ವರದಿ ಬರುವವರೆಗೂ ರಾಜೀನಾಮೆ ಪಡೆಯುವುದಿಲ್ಲ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಾಥಮಿಕ ವರದಿ ಬರಬೇಕಾದ ಅಗತ್ಯವಿಲ್ಲ. ಎಫ್‌ಐಆರ್ ದಾಖಲಾಗಿದೆ. ತನಿಖೆ ಆರಂಭವಾಗಿದೆ. ಈಶ್ವರಪ್ಪ ಮೊದಲ ಆರೋಪಿ ಆಗಿದ್ದಾರೆ. ಇನ್ನು ಮೃತ ಸಂತೋಷ್, ಆತನ ಪತ್ನಿ ಅವರ ಹೇಳಿಕೆ ಇದೆ. ಈ ವಿಚಾರದಲ್ಲಿ ಸಚಿವರ ರಕ್ಷಣೆ ಮಾಡಬಾರದು. ಭ್ರಷ್ಟಾಚಾರ ರಾಜ್ಯವನ್ನಾಗಿ ಮಾಡಬಾರದು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








