ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ತನಿಖೆ ನಡೆಸಿ,ಶಿಕ್ಷೆ ಕೊಡಿಸುತ್ತೇವೆ : ಸಿದ್ದರಾಮಯ್ಯ

ಬೆಂಗಳೂರು:

    ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣ ಕುರಿತು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಟೀಕಾ ಪ್ರಹಾರ ನಡೆಸುತ್ತಿರುವಂತೆಯೇ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ತನಿಖೆ ನಡೆಸಿ, ತಪ್ಪು ಮಾಡಿದವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

    ಶುಕ್ರವಾರ ವಿಧಾನಸಭೆಯ ಕಲಾಪದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಬಿಜೆಪಿಯಲ್ಲಿ ಬಗೆದಷ್ಟು ಲೆಕ್ಕ ಹಾಕದಷ್ಟು ಹಗರಣಗಳಿವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 42. 16 ಕೋಟಿ ರೂ. ಎಪಿಎಂಸಿ ಹಗರಣವಾಗಿದೆ. ಕೋಟಾ ಶ್ರೀನಿವಾಸ ಪೂಜಾರಿ ಮಂತ್ರಿಯಾಗಿದ್ದಾಗ ಭೋವಿ ನಿಗಮದಲ್ಲಿ 87 ಕೋಟಿ ರೂ. ಹಗರಣವಾಗಿದೆ. ದೇವರಾಜು ಅರಸು ಟ್ರಕ್ ಟರ್ಮಿನಲ್ ನಲ್ಲಿ 47. 10 ಕೋಟಿ ಹಗರಣವಾಗಿತ್ತು. ಅದಕ್ಕೆ ಅಧ್ಯಕ್ಷರಾಗಿದ್ದ ವೀರಯ್ಯ ಬಂಧನವಾಗಿದ್ದರೂ ನಾಚಿಕೆ ಆಗಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

   ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಹಗರಣದಲ್ಲಿ ಬಡ ಜನರ ಸಾವಿರಾರು ಕೋಟಿ ರೂ. ಹಣವನ್ನು ದೋಚಿದವರನ್ನು ಇಡಿ, ಐಟಿ ಹಾಗೂ ಸಿಬಿಐ ಬಂಧಿಸುವ ಕೆಲಸ ಮಾಡಿಲ್ಲ. ಜಯನಗರ, ಬಸವನಗುಡಿಯ ಬೀದಿ ಬದಿಯ ಕೆಲ ಕಳ್ಳರು ವಿಧಾನಸೌಧ, ಸಂಸತ್ ಗೂ ಆಯ್ಕೆಯಾಗಿ ಹೋಗಿದ್ದಾರೆ ಎಂದು ಅವರು ಮಂಡನೆ ಮಾಡಿದ ದಾಖಲೆಯಲ್ಲಿ ವಿವರಿಸಿದರು.

   ವಿಪಕ್ಷ ನಾಯಕ ಆರ್. ಅಶೋಕ್ ಮೇಲಿನ ಭೂ ಹಗರಣ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ಕೃಷಿ ಸಚಿವರಾಗಿದ್ದ ಬಿ. ಸಿ. ಪಾಟೀಲ್ ಕೃಷಿ ಇಲಾಖೆ ನೌಕರರೇ ಲಂಚ ಕೇಳುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ಬೇರೆ ನಿಗಮಗಳಲ್ಲಿ 437 ಕೋಟಿ ರೂ. ಹಗರಣವಾಗಿದೆ. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಸಚಿವರಾಗಿದ್ದಾಗ ಕಿಯೋನಿಕ್ಸ್ ನಲ್ಲಿ 500 ಕೋಟಿ ರೂ. ಹಗರಣ ನಡೆದಿದೆ ಎಂದು ಸಿದ್ದರಾಮಯ್ಯ ಹೇಳಿದರು.

   ಬಿಜೆಪಿಯವರು ಭ್ರಷ್ಟಾಚಾರದ ಪಿತಾಮಹರಾಗಿದ್ದಾರೆ. ನಮ್ಮ ಹಗರಣಗಳು ಬಿಚ್ಚಬಾರದು ಎಂದು ಸದನದಲ್ಲಿ ಗಲಾಟೆ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲೇ ಇಷ್ಟು ಕೆಟ್ಟದಾಗಿ ಪ್ರತಿಪಕ್ಷಗಳು ನಡೆದುಕೊಂಡಿಲ್ಲ. ಕೇಂದ್ರ ಹಾಗೂ ಆರ್ ಎಸ್ ಎಸ್ ಸೂಚನೆಯಿಂದ ಈ ರೀತಿ ಮಾಡುತ್ತಿದ್ದಾರೆ. ಕೇವಲ ಪ್ರಚಾರಕ್ಕಾಗಿ ಈ ರೀತಿ ಗಲಾಟೆ ಮಾಡುತ್ತಿದ್ದಾರೆ. ಇವರು ಉತ್ತರ ಕೇಳಬಾರದು ಎಂಬ ದುರುದ್ದೇಶದಿಂದ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಕಿಡಿಕಾರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap