ಗುಬ್ಬಿ:
ಶ್ರಾವಣ ಮಾಸದ ಕಡೇ ಸೋಮವಾರ ಇದೇ ತಿಂಗಳ 18 ರಂದು ಗುಬ್ಬಿಯ ಇತಿಹಾಸ ಪ್ರಸಿದ್ಧ ಶ್ರೀ ಸಿಡಿಲು ಬಸವೇಶ್ವರಸ್ವಾಮಿ ಪರೇವು ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ದೇವಾಲಯದ ಸೇವಾ ಟ್ರಸ್ಟ್ ತಿಳಿಸಿದೆ.
ಪ್ರತಿ ವರ್ಷ ನಡೆಯುವ ಈ ಪರೇವು ಜಾತ್ರೆಯಲ್ಲಿ ಅನ್ನ ದಾಸೋಹ ಕಾರ್ಯಕ್ರಮವೇ ವಿಶೇಷ ಎನಿಸಿದೆ. ಸಾವಿರಾರು ಭಕ್ತರು ಆಗಮಿಸುವ ಈ ಸಿಡಿಲು ಬಸವೇಶ್ವರಸ್ವಾಮಿಗೆ ಇಂದಿಗೂ ಹರಕೆ ಕಟ್ಟುವ ಪದ್ಧತಿ ನಡೆದು ಬಂದಿದೆ. ಬಹಳ ಸತ್ಯ ನಿಷ್ಠೆಯಲ್ಲಿ ನಡೆದುಕೊಳ್ಳುವ ಭಕ್ತರು ದಾಸೋಹ ಕಾರ್ಯಕ್ರಮಕ್ಕೆ ದವಸ ಧಾನ್ಯ ಹಾಗೂ ಆರ್ಥಿಕ ದೇಣಿಗೆ ನೀಡುತ್ತಾರೆ.
ಶ್ರಾವಣ ಮಾಸದ ಕಡೇ ಸೋಮವಾರ ಬೆಳಿಗ್ಗೆ ರುದ್ರಾಭಿಷೇಕ ಹಾಗೂ ತೊರೆಮಠದ ಶ್ರೀ ಆಟವಿ ಚನ್ನಬಸವೇಶ್ವರ ಸ್ವಾಮೀಜಿ ಅವರಿಗೆ ಪಾದಪೂಜೆ ಕಾರ್ಯಕ್ರಮ ನಡೆದು ಮಧ್ಯಾಹ್ನ 12 ಕ್ಕೆ ಮಹಾ ಮಂಗಳಾರತಿ ಅನ್ನ ದಾಸೋಹ ನಡೆಯಲಿದೆ. ಚುನಾಯಿತ ಎಲ್ಲಾ ಪ್ರತಿನಿಧಿಗಳು, ಎಲ್ಲಾ ಪಕ್ಷದ ಮುಖಂಡರು ಆಗಮಿಸಲಿದ್ದಾರೆ.
ಸಿಡಿಲು ಬಡಿದು ಎರಡು ಹೋಳು ಆಗಿರುವ ಬಸವಣ್ಣನಿಗೆ ನಿತ್ಯ ಪೂಜೆ ಹಾಗೂ ವರ್ಷಕ್ಕೊಮ್ಮೆ ಪೆರೇವು ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಇಂದಿಗೂ ಸಿಡಿಲು ಬಸವಣ್ಣನ ಬಗ್ಗೆ ಅಪಾರ ನಂಬಿಕೆ, ಭಕ್ತಿ ಹೊಂದಿದ್ದಾರೆ. ನೂರಾರು ವರ್ಷದ ಬಸವಣ್ಣ ಕಲ್ಲಿನ ವಿಗ್ರಹ ಎರಡು ಭಾಗವಾದರೂ ಇಂದಿಗೂ ಬೆಳವಣಿಗೆ ಇದೆ ಎನ್ನುತ್ತಾರೆ ಭಕ್ತರು. ಇಲ್ಲಿನ ವಿಶೇಷ ಅನ್ನ ದಾಸೋಹ ಕಾರ್ಯಕ್ರಮಕ್ಕೆ ದಾಸೋಹ ನಿಲಯ ನಿರ್ಮಾಣ ಕೈಗೊಂಡಿರುವ ಟ್ರಸ್ಟ್ ಭಕ್ತರಿಂದ ಧನ ಸಹಾಯಕ್ಕೆ ಮನವಿ ಮಾಡಿದೆ.








