ತುಮಕೂರು : ನಗರದಲ್ಲಿ ಜೈನ ಸಮುದಾಯದ ವತಿಯಿಂದ ಮೌನ ಪ್ರತಿಭಟನೆ

ತುಮಕೂರು

      ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಹಿರೆಕೋಡಿ ಗ್ರಾಮದಲ್ಲಿ ಜೈನ ದಿಗಂಬರ ಮುನಿ ಕಾಮಕುಮಾರನಂದಿ ಮುನಿಗಳನ್ನು ಅಪಹರಿಸಿ ಅತಿ ಅಮಾನುಷವಾಗಿ ಕೊಲೆ ಮಾಡಲಾಗಿದ್ದು ಜೈನ ಸಮುದಾಯವನ್ನು ಭೀತಿಗೊಳಿಸಿದ್ದು, ರಾಜ್ಯದಲ್ಲಿ ಜೈನ ದಿಗಂಬರ ಮುನಿಗಳ ಸಂಚಾರದ ವೇಳೆ ಅವರಿಗೆ ಸೂಕ್ತ ಭದ್ರತೆಯನ್ನು ಹಾಗೂ ಧರ್ಮ ರಕ್ಷಣೆಗೆ ಪೂರಕವಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರದ ಸಿಂಹನಗದ್ದೆ ದಿಗಂಬರ ಜೈನ ಮಠದ ಶ್ರೀ ಲಕ್ಷ್ಮಿ ಸೇನ ಭಟ್ಟಾರಕ ಸ್ವಾಮೀಜಿ ಒತ್ತಾಯಿಸಿದ್ದಾರೆ.

      ತುಮಕೂರು ನಗರದಲ್ಲಿ ಜೈನ ಸಮುದಾಯದ ವತಿಯಿಂದ ನಡೆದ ಮೌನ ಪ್ರತಿಭಟನೆಯ ನೇತೃತ್ವ ವಹಿಸಿ ನಂತರ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಬಳಿ ಶೀಘ್ರದಲ್ಲೇ ಜೈನ ಮಠಗಳ ಭಟ್ಟಾರಕರ ಸ್ವಾಮೀಜಿಗಳ ನಿಯೋಗ ತೆರಳಿ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

     ಜೈನ ಧರ್ಮೀಯರ ಪರಮ ಆರಾಧ್ಯ ದೈವ ಪರಮ ಗುರುಗಳು ಹಾಗೂ ನಮ್ಮ ಶ್ರದ್ದೆಯನ್ನೇ ಚೂರು ಚೂರು ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಈ ನಡುವೆ ಘಟನೆಗೆ ಸಂಬಂಧಪಟ್ಟಂತೆ ಊಹಾಪೋಹಗಳನ್ನು ಹರಿ ಬಿಡಲಾಗುತ್ತಿದೆ. ಮುನಿಗಳ ಹತ್ಯೆಯನ್ನು ವಿಭಿನ್ನ ಸ್ವರೂಪದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ ಆದರೆ ಇನ್ನೂ ತನಿಖೆಯೇ ಪೂರ್ಣಗೊಂಡಿಲ್ಲ.

     ಅಧಿಕಾರಿಗಳು ಇದನ್ನು ಪರಿಗಣಿಸುತ್ತಿರುವ ರೀತಿಯ ಬೇಸರ ಮೂಡಿಸಿದೆ ಎಂದು ತಿಳಿಸಿದರು.
ವಿಧಾನಸಭೆ ಅಧಿವೇಶನದಲ್ಲಿಯೂ ಕೂಡ ಕೊಲೆಯ ಸ್ವರೂಪವನ್ನು ಹೇಳಲಾಗುತ್ತಿದೆ ಆದರೆ ಇನ್ನೂ ತನಿಖೆಯೇ ಪೂರ್ಣಗೊಂಡಿಲ್ಲ. ಇದು ಕೇವಲ ಆರೋಪಿಯ ಹೇಳಿಕೆಯಾಗಿದೆ ಅಷ್ಟೇ. ಅದು ಸತ್ಯವೂ ಆಗಿರಬಹುದು ಅಥವಾ ಸತ್ಯವೂ ಆಗಿರಬಹುದು ಎಂದು ಹೇಳಿದರು.

     ಮುನಿ ಹತ್ಯ ದೋಷ ಮಹಾ ಪಾಪವಾಗಿರುತ್ತದೆ, ಯಾವ ರೀತಿ ದಯೆಯೆ ಧರ್ಮದ ಮೂಲ ಎಂದು ಲೋಕದ ಎಲ್ಲಾ ಜೀವಿಗಳಲ್ಲಿಯೂ ಸಮತಾ ಭಾವನೆಯನ್ನು ಹೊಂದಿ, ಭಗವಾನ್ ಶ್ರೀ ಮಹಾವೀರ ಸ್ವಾಮಿ ಮೂಲ ಸಂದೇಶವಾಗಿರುವ ಬದುಕು ಬದುಕಲು ಬಿಡು ಎಂಬ ತತ್ವ ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿರುವ ಜೈನ ಧರ್ಮದ ಅನುಯಾಯಿಗಳಿಗೆ ಈ ಘಟನೆಯು ಭಾರಿ ಆಘಾತವನ್ನು ಉಂಟು ಮಾಡಿದೆ ಎಂದು ಹೇಳಿದರು.

    ಆರೋಪಿಗಳಿಗೆ ಸೂಕ್ತ ಕಠಿಣ ಶಿಕ್ಷೆಯನ್ನು ನೀಡುವ ಮೂಲಕ ಅಲ್ಲದೆ ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದ ಜೈನ ಧರ್ಮದ ಸಾಧು ಸಂತರ ಬಳಿ ಇಂತಹ ಅಹಿತಕರ ಘಟನೆಗಳು ಮತ್ತು ಹಿಂಸಾತ್ಮಕ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

   ತುಮಕೂರು ನಗರದ ಮಹಾವೀರ ಭವನದ ಬಳಿಯಿಂದ ಹೊರಟ ನೂರಾರು ಮಂದಿ ಜೈನ ಸಮುದಾಯದವರು, ಜೈನ ಮುನಿಯ ಹತ್ಯೆಯನ್ನು ಖಂಡಿಸಿ ಮೌನ ಪ್ರತಿಭಟನೆ ನಡೆಸಿದರು.
ಎಂಜಿ ರಸ್ತೆ ಮೂಲಕ ಸಾಗಿದ ಪ್ರತಿಭಟನಾಕಾರರು ಗುಂಚಿ ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ತಲುಪಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಕೆಲಕಾಲ ಧರಣಿ ನಡೆಸಿದರು.

     ಪ್ರತಿಭಟನಾಕಾರರು ಆರೋಪಿಗಳ ಹತ್ಯೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವವನ್ನು ಶ್ರೀ ಲಕ್ಷ್ಮಿ ಭಟ್ಟಾರಕ ಸ್ವಾಮೀಜಿ ವಹಿಸಿದ್ದರು. ದಿಗಂಬರ ಜೈನ ಶ್ರೀ ಪಾಶ್ವನಾಥ ಸ್ವಾಮಿ ಜಿನ ಮಂದಿರದ ಸಂಘದ ಅಧ್ಯಕ್ಷ ನಾಗರಾಜ್, ಮುಖಂಡರಾದ ಸುರೇಶ್ ವಿನಯ್ ಸೇರಿದಂತೆ ಅನೇಕರು ಹಾಜರಿದ್ದರು. ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಪೂರ್ತಿ ಚಿದಾನಂದ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap