ಬರಗೂರು :
ಕಂದು ರೋಗವು ಮಾರಕ ರೋಗವಾಗಿದ್ದು, ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ ಇತ್ಯಾದಿ ಪ್ರಾಣಿಗಳಲ್ಲಿ ಕಂಡು ಬರುತ್ತದೆ. ಈಗ ಆಕಳು ಮತ್ತು ಎಮ್ಮೆಗಳ 4 ರಿಂದ 8 ತಿಂಗಳ ಹೆಣ್ಣು ಕರುಗಳಿಗೆ ಮಾತ್ರ ಉಚಿತವಾಗಿ ಕಂದು ರೋಗದ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿದ್ದು, ರೈತರು ಸಮೀಪದ ಪಶು ಆಸ್ಪತ್ರೆಗಳಲ್ಲಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ವೈದ್ಯಾಧಿಕಾರಿ ಡಾ.ನಂದೀಶ್ ತಿಳಿಸಿದರು.
ಶಿರಾ ತಾಲ್ಲೂಕು ಬರಗೂರು ಪಶು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಂದು ರೋಗ ಲಸಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬರಗೂರು ಪಶು ಆಸ್ಪತ್ರೆ ವ್ಯಾಪ್ತಿಯಲ್ಲಿ ಸುಮಾರು 22 ಪ್ರಾಣಿಗಳಿಗೆ ಲಸಿಕೆ ಹಾಕಲಾಗಿದೆ. ಈ ತಿಂಗಳು ಇನ್ನೂ 15 ದಿನಗಳವರೆಗೆ ಲಸಿಕೆ ಹಾಕಲಾಗುವುದು. ಪ್ರತಿವರ್ಷವೂ ಸಹ ಜನವರಿ, ಮೇ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ರಾಸುಗಳಿಗೆ ಲಸಿಕೆ ಹಾಕಲಾಗುತ್ತದೆ. ಪಶು ಸಂಗೋಪನಾ ಇಲಾಖಾ ವತಿಯಿಂದ ಸಾಮೂಹಿಕ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯಾದ್ಯಂತ ಹಸು ಮತ್ತು ಎಮ್ಮೆಗಳ 4ರಿಂದ 8ತಿಂಗಳ ಹೆಣ್ಣು ಕರುಗಳಿಗೆ ಮಾತ್ರ ಉಚಿತವಾಗಿ ಲಸಿಕೆ ಹಾಕಲಾಗುತ್ತಿದೆ. ಲಸಿಕೆ ಹಾಕಿಸುವುದರಿಂದ ಪ್ರಾಣಿಗಳಿಗೆ ಕಂದು ರೋಗವನ್ನು ತಡೆಗಟ್ಟುವ ಜೊತೆಗೆ ಮುಂದಿನ ದಿನಗಳಲ್ಲಿ ಹೆಚ್ಚು ಹಾಲು ನೀಡಲು ಅನುಕೂಲವಾಗುತ್ತದೆ. ಲಸಿಕೆ ಹಾಕಿಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಸಂಭವಿಸುವುದಿಲ್ಲ. ರೈತರು ಮುನ್ನೆಚ್ಚರಿಕಾ ಕ್ರಮವಾಗಿ ಇದರ ಪ್ರಯೋಜನ ಪಡೆದರೆ ಮುಂದೆ ಆಗಬಹುದಾದ ಅನಾಹುತಗಳನ್ನು ತಡೆಯಬಹುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ