ಶಿರಾ :
ಸೋರುತ್ತಿರುವ ಶಾಲಾ ಕೊಠಡಿಗಳಿಂದ ತಮ್ಮನ್ನು ಮುಕ್ತಿಗೊಳಿಸಿ ಎಂದು ಶಾಲಾ ಮಕ್ಕಳು ಶಾಲೆಯಿಂದ ಹೊರ ಬಂದು ಶಾಲಾ ಆವರಣದಲ್ಲಿ ಪ್ರತಿಭಟನೆಗೆ ಕೂತ ಪ್ರಸಂಗ ಶುಕ್ರವಾರ ಶಿರಾ ನಗರದ ಸರ್ಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆಯಿತು.
ನಗರದ ಪ್ರವಾಸಿ ಮಂದಿರದ ವೃತ್ತದಲ್ಲಿರುವ ಸರ್ಕಾರಿ ಪ್ರೌಢಶಾಲಾ ಕೊಠಡಿಗಳು 70 ವರ್ಷಕ್ಕೂ ಹೆಚ್ಚು ಹಳೆಯವಾಗಿದ್ದು, ಮಳೆ ಬಂದರೆ ಸಾಕು ಸೋರುತ್ತಿದ್ದು ಮಕ್ಕಳು ಪಾಠ ಕೇಳಲು ಕೂಡಾ ಸಾಧ್ಯವಾಗುವುದಿಲ್ಲ. ಪೋಷಕರು ಸಂಬಂಧಪಟ್ಟವರನ್ನು ಕೇಳಿ ಸುಸ್ತಾಗಿದ್ದಾರೆ. ಶಾಲಾ ಶಿಕ್ಷಕರು, ಎಸ್‍ಡಿಎಂಸಿ ಆಡಳಿತ ಮಂಡಳಿಯವರು ಕೂಡಾ ಶಿಕ್ಷಣ ಇಲಾಖೆಗೆ ಕೊಠಡಿಗಳು ಬೇಕೆಂದು ಸಲ್ಲಿಸಿದ ಮನವಿಗಳೆಲ್ಲವೂ ವ್ಯರ್ಥವಾದವು.
ಗುರುವಾರ ರಾತ್ರಿ ನಗರದಲ್ಲಿ ಬಿದ್ದ ಮಳೆಯಿಂದ ಮಕ್ಕಳು ಶುಕ್ರವಾರ ಬೆಳಗ್ಗೆ ಶಾಲೆಗೆ ಬಂದು ಕೊಠಡಿಯಲ್ಲಿ ಕೂರಲು ಹೋದಾಗ ಕೊಠಡಿಗಳು ಮಳೆಯ ನೀರಿನಿಂದ ಜಲಾವೃತವಾಗಿದ್ದವು. ಕೂಡಲೆ ಶಾಲೆಯಿಂದ ಹೊರ ಬಂದ ಮಕ್ಕಳು ಆವರಣದಲ್ಲಿ ಕೂತು ನೂತನ ಕೊಠಡಿಗಳ ನಿರ್ಮಾಣ ಮಾಡಿಸುವಂತೆ ಒತ್ತಾಯಿಸಿದರು.
ಶಿಕ್ಷಕರ ಕೊಠಡಿ, ಪ್ರಾಂಶುಪಾಲರ ಕೊಠಡಿಗಳೂ ಸಹ ಸಂಪೂರ್ಣವಾಗಿ ದುರಸ್ಥಿಗೊಳ್ಳಬೇಕಿದ್ದು ನೂತನ ಕೊಠಡಿಗಳ ಅಗತ್ಯವೂ ಇದೆ. ಆದರೆ ಈ ಬಗ್ಗೆ ಗಮನಹರಿಸುವ ಜನ ಪ್ರತಿನಿಧಿಗಳೆ ಇಲ್ಲವಾಗಿದ್ದಾರೆ. ಮಳೆಯ ನೀರಿನಿಂದ ಸೋರುತ್ತಿರುವ ಕೊಠಡಿಗಳಿಂದ ಹೊರ ಬಂದ ಮಕ್ಕಳು ಆವರಣದಲ್ಲಿ ಪ್ರತಿಭಟನೆಗೆ ಕೂತಾಗ ಶಿಕ್ಷಕರು ಕೂಡಾ ಏನೂ ಮಾಡದಂತಾದರು. ಮಕ್ಕಳಿಗೆ ಸಮಾಧಾನ ಹೇಳುವುದನ್ನು ಬಿಟ್ಟರೆ ಶಿಕ್ಷಕರಿಗೆ ಬೇರೆ ದಾರಿಯೇ ಇರಲಿಲ್ಲ.
ಇದೇ ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳ ಬಗ್ಗೆ ಹಾಗೂ ಶಾಲೆಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಲೇಖನವು ಅ.5 ರಂದು ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟಗೊಂಡದ್ದನ್ನು ಇಲ್ಲಿ ಸ್ಮರಿಸಬಹುದು.
ಶಾಲಾ ಕೊಠಡಿಗಳು ಸಂಪೂರ್ಣವಾಗಿ ಬೀಳುವ ಹಂತದಲ್ಲಿದ್ದು, ಮಕ್ಕಳು ಕೂರಲು ಕೂಡಾ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರ ಗಮನ ಸೆಳೆಯಲಾಗಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುವಂತಾಗಿದೆ.
-ಸಿ.ನಾಗರಾಜು, ಉಪ ಪ್ರಾಂಶುಪಾಲರು
ಮಕ್ಕಳನ್ನು ಸಂತೈಸಿದ ಬಿಇಓ :
ಕೂಡಲೇ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಪ್ಪ ಅವರು ಮಕ್ಕಳನ್ನು ಸಂತೈಸಿ ಒಂದಿಷ್ಟು ಸುಸ್ಥಿತಿಯಲ್ಲಿದ್ದ ಕೊಠಡಿಯಲ್ಲಿ ಕೂರಿಸಲು ಅನುವು ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಹಳೆಯ ಕೊಠಡಿಗಳನ್ನು ತೆರವುಗೊಳಿಸಲು ಸರ್ಕಾರಕ್ಕೆ ಅನುಮತಿ ಕೋರಿ ಹಾಗೂ ನೂತನ ಶಾಲಾ ಕೊಠಡಿಗಳ ಮಂಜೂರಾತಿ ಕೋರಿ ಪತ್ರ ಬರೆಯಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ