ಶಿರಾ ತಾಲ್ಲೂಕಿನ 90ಕ್ಕೂ ಹೆಚ್ಚು ಬ್ಯಾರೇಜ್‍ಗಳು ಮಳೆಯಿಂದ ಭರ್ತಿ

 ಶಿರಾ : 

      ತಾಲ್ಲೂಕಿನಲ್ಲಿ ಈ ಹಿಂದೆ ನಾನು ಶಾಸಕ, ಸಚಿವನಾಗಿದ್ದ ಸಂದರ್ಭದಲ್ಲಿ ತಾಲ್ಲೂಕಿನಾದ್ಯಂತ 121 ಕ್ಕೂ ಹೆಚ್ಚು ಚೆಕ್ ಡ್ಯಾಂ ಕಂ ಬ್ಯಾರೇಜ್‍ಗಳ ನಿರ್ಮಾಣ ಮಾಡಿಸಲಾಗಿತ್ತು. ಕಳೆದ ಎರಡು ದಿನಗಳಿಂದ ತಾಲ್ಲೂಕಿನಲ್ಲಿ ಬಿದ್ದ ಮಳೆಯಿಂದಾಗಿ 90ಕ್ಕೂ ಹೆಚ್ಚು ಬ್ಯಾರೇಜ್‍ಗಳು ಭರ್ತಿಯಾಗಿದ್ದು, ನನ್ನ ಶ್ರಮ ನಿಜಕ್ಕೂ ಸಾರ್ಥಕವಾಯಿತು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

      ಮಂಗಳವಾರ ತುಂಬಿ ಹರಿದ ಕಳ್ಳಂಬೆಳ್ಳ ಕೆರೆ ಹಾಗೂ ಶಿರಾ ಕೆರೆಗಳ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು, ಸಣ್ಣ-ಪುಟ್ಟ ಕೆರೆ, ಕಟ್ಟೆಗಳು, ಬ್ಯಾರೇಜ್‍ಗಳು ಕೂಡ ಭರ್ತಿಯಾಗಿದ್ದು ಅಂತರ್ಜಲ ವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ. ಈ ಹಿಂದೆ ಕಳ್ಳಂಬೆಳ್ಳ ಕೆರೆಗೆ ಹೇಮಾವತಿಯ ನೀರು ಹರಿದು ಬರುವ ಹಳ್ಳದಲ್ಲಿ ಬಸರಿಹಳ್ಳಿ, ಉಮಾಪತಿಹಳ್ಳಿ, ಅಮಲಗೊಂದಿ, ಮಲ್ಲಶೆಟ್ಟಿಹಳ್ಳಿ, ಹುಂಜಿನಾಳು ಸೇರಿದಂತೆ ಅನೇಕ ಭಾಗಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿದ ಪರಿಣಾಮ ಇಂದು ಈ ಎಲ್ಲಾ ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿರುವುದು ಸಂತಸದ ಸಂಗತಿ ಎಂದರು.

     ತುಂಬಿ ಹರಿಯುವ ಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿಸಿದಾಗ ಅನೇಕ ಮಂದಿ ನನ್ನನ್ನು ಕುಟುಕಿದ್ದಾರೆ. ಚೆಕ್ ಡ್ಯಾಂ ನೆಪದಲ್ಲಿ ಜಯಚಂದ್ರ ಸರ್ಕಾರದ ಹಣವನ್ನು ಪೋಲು ಮಾಡಿದ್ದಾರೆಂದು ಟೀಕಿಸಿದಾಗ ನಾನು ಮೌನವಾಗಿದ್ದೆ. ಮುಂಜಾಗ್ರತಾ ಕ್ರಮವಾಗಿ ಅಂತರ್ಜಲ ವೃದ್ಧಿಗಾಗಿ ಅಂದು ನಾನು ಕೈಗೊಂಡಿದ್ದ ತೀರ್ಮಾನ ಸರಿ ಎಂಬುದು ನನ್ನ ಭಾವನೆಯಾಗಿತ್ತು. ಈಗ ನನ್ನ ಶ್ರಮ ನಿಜಕ್ಕೂ ಸಾರ್ಥಕವಾಗಿದ್ದು, ಚೆಕ್ ಡ್ಯಾಂಗಳಿರುವ ವ್ಯಾಪ್ತಿಯ ಕೊಳವೆ ಬಾವಿಗಳ ಅಂತರ್ಜಲ ವೃದ್ಧಿಯಾಗಿ ಮುಂದೆ ಬೇಸಿಗೆಯ ದಿನಗಳಲ್ಲೂ ನೀರು ಲಭ್ಯವಾಗಲಿದೆ ಎಂದು ಜಯಚಂದ್ರ ತಿಳಿಸಿದರು.

ಭೂತದ ಬಾಯಲ್ಲಿ ಭಗವದ್ಗೀತೆ:

     ತಾಲ್ಲೂಕಿನ ಮದಲೂರು ಕೆರೆಗೆ ಯಾವುದೇ ಕಾರಣಕ್ಕೂ ಹೇಮಾವತಿಯ ನೀರು ಹರಿಸಲು ಸಾಧ್ಯವಿಲ್ಲ. ಆ ಕೆರೆಗೆ ನೀರಿನ ಅಲೋಕೇಷನ್ ಇಲ್ಲ. ಕೆರೆಗೆ ನೀರು ಹರಿಸಿದರೆ ಆ ಅಧಿಕಾರಿಗಳನ್ನು ಜೈಲಿಗೆ ಅಟ್ಟುತ್ತೇನೆ ಎಂದು ಹೇಳುತ್ತಿದ್ದ ಮಂತ್ರಿ ಮಹಾಶಯರೊಬ್ಬರು ಕಳೆದ ಎರಡು ದಿನಗಳ ಹಿಂದೆ ಮದಲೂರು ಕೆರೆಗೆ ಅಲೋಕೇಶನ್ ಇದೆ. ಕುಡಿಯುವ ನೀರನ್ನು ಯಾವ ಕೆರೆಗೆ ಬೇಕಾದರೂ ಹರಿಸಬಹುದೆಂದು ಹೇಳಿಕೆ ನೀಡಿದ್ದು, ಅವರಿಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಓದಿದಂತಾಗಿದೆ ಎಂದು ಜಿಲ್ಲಾ ಸಚಿವ ಮಾಧುಸ್ವಾಮಿ ಅವರನ್ನು ಪರೋಕ್ಷವಾಗಿ ಜಯಚಂದ್ರ ಕುಟುಕಿದರು.

     ನಿಜವಾಗಿಯೂ ಜಿಲ್ಲಾ ಮಂತ್ರಿಗಳಿಗೆ ತಾಕತ್ತು ಇದ್ದರೆ ನಮ್ಮ ತುಮಕೂರು ಜಿಲ್ಲೆಗೆ ಹರಿಯಬೇಕಾಗಿರುವ 25 ಟಿ.ಎಂ.ಸಿ. ನೀರನ್ನು ಹಾಸನದವರಿಂದ ಬಿಡಿಸಿಕೊಂಡು ಬರಲಿ ಎಂದು ಮಾಧುಸ್ವಾಮಿಯವರಿಗೆ ಸವಾಲು ಹಾಕಿದ ಜಯಚಂದ್ರ ಅವರು, ಮದಲೂರು ಕೆರೆಯತ್ತ ಕಳ್ಳಂಬೆಳ್ಳದಿಂದ ನೀರು ಸಾಗಿರುವುದು ನಮಗೆ ಸಂತಸ ತಂದಿದೆ. ಈ ಹಿಂದೆ 60 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರದ ಅನುದಾನದಿಂದ 34 ಕಿ.ಮೀ. ಚಾನಲ್‍ನ್ನು ಮದಲೂರು ಕೆರೆಗೆ ನಿರ್ಮಿಸಿದ್ದು ಕೂಡ ನನಗೆ ಸಾರ್ಥಕ ಕೆಲಸ ಅನ್ನಿಸಿದೆ. ಈ ಹಿಂದೆ ನಾನು ಸಚಿವನಾಗಿದ್ದಾಗ 13 ದಿನಗಳವರೆಗೆ ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸಲಾಗಿತ್ತು. ಈಗಲೂ ಮದಲೂರು ಕೆರೆ ತುಂಬಿದರೆ ನಿಜಕ್ಕೂ ಈ ಭಾಗದ ರೈತರು ಹಾಗೂ ಜನತೆಯ ಆರ್ಥಿಕ ಸಂಕಷ್ಟ ನಿವಾರಣೆಯಾಗಲಿದೆ ಎಂದರು.

     ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹನುಮಂತಯ್ಯ, ನಗರಸಭೆಯ ಮಾಜಿ ಅಧ್ಯಕ್ಷ ಅಮಾನುಲ್ಲಾಖಾನ್, ಬಾಲೇನಹಳ್ಳಿ ಪ್ರಕಾಶ್, ಆಲೇನಹಳ್ಳಿ ಶಶಿಧರ್, ಕೆ.ಎಲ್.ದಿವಾಕರ್ ಗೌಡ, ನಟರಾಜ್, ತಿಪ್ಪೇಸ್ವಾಮಿ, ರಾಜೇಶ್, ಅಜೆಯ್ ಕುಮಾರ್ ಗಾಳಿ ಮುಂತಾದವರು ಇದ್ದರು.

ಭೂತದ ಬಾಯಲ್ಲಿ ಭಗವದ್ಗೀತೆ :

     ತಾಲ್ಲೂಕಿನ ಮದಲೂರು ಕೆರೆಗೆ ಯಾವುದೇ ಕಾರಣಕ್ಕೂ ಹೇಮಾವತಿಯ ನೀರು ಹರಿಸಲು ಸಾದ್ಯವಿಲ್ಲ. ಆ ಕೆರೆಗೆ ನೀರಿನ ಅಲೋಕೇಷನ್ ಇಲ್ಲ. ಕೆರೆಗೆ ನೀರು ಹರಿಸಿದರೆ ಆ ಅಧಿಕಾರಿಗಳನ್ನು ಜೈಲಿಗೆ ಅಟ್ಟುತ್ತೇನೆ ಎಂದು ಹೇಳುತ್ತಿದ್ದ ಮಂತ್ರಿ ಮಹಾಶಯರೊಬ್ಬರು ಕಳೆದ ಎರಡು ದಿನಗಳ ಹಿಂದೆ ಮದಲೂರು ಕೆರೆಗೆ ಅಲೋಕೇಶನ್ ಇದೆ. ಕುಡಿಯುವ ನೀರನ್ನು ಯಾವ ಕೆರೆಗೆ ಬೇಕಾದರೂ ಹರಿಸಬಹುದೆಂದು ಹೇಳಿಕೆ ನೀಡಿದ್ದು ಅವರಿಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಓದಿದಂತಾಗಿದೆ ಎಂದು ಜಿಲ್ಲಾ ಸಚಿವ ಮಾಧುಸ್ವಾಮಿ ಅವರನ್ನು ಪರೋಕ್ಷವಾಗಿ ಜಯಚಂದ್ರ ಕುಟುಕಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ