ಶಿರಾ:
ನಗರದ ಅಸ್ಸಾರ್ ಮೊಹಲ್ಲಾದಲ್ಲಿರುವ ಮನೆಯ ಗೋಡೌನ್‍ವೊಂಡಕ್ಕೆ ರಾತೋರಾತ್ರಿ ಜೆ.ಸಿ.ಬಿ. ಯಂತ್ರಗಳೊಂದಿಗೆ ನುಗ್ಗಿದ ದುಷ್ಕರ್ಮಿಗಳು ಮನೆಯ ಗೋಡೆ ಹಾಗೂ ಗೋಡೌನ್ ಗೋಡೆಗಳನ್ನು ದ್ವಂಸಗೊಳಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ನಗರದ ಅಸ್ಸಾರ್ ಮೊಹಲ್ಲಾದಲ್ಲಿ ವಾಸವಿರುವ ನಗರಸಭೆಯ ಮಾಜಿ ಅಧ್ಯಕ್ಷ ಚಾಂದ್‍ಪಾಷಾ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಮನೆಯ ಗೋಡೌನ್ ಒಡೆಯಲು ಸುಮಾರು 40ಕ್ಕೂ ಹೆಚ್ಚು ಮಂದಿ ಅಪರಿಚಿತರು 2 ಜೆ.ಸಿ.ಬಿ. ಯಂತ್ರಗಳೊಂದಿಗೆ ಬಂದು ಗೋಡೆಯನ್ನು ಒಡೆಯಲು ಆರಂಭಿಸಿದ್ದಾರೆ.
ಮದ್ಯರಾತ್ರಿ 2 ಗಂಟೆಯ ಸಮಯದಲ್ಲಿ ಜೆ.ಸಿ.ಬಿ. ಯಂತ್ರಗಳ ಸದ್ದು ಮತ್ತು ಜನರ ಗಲಾಟೆಯ ಶಬ್ದ ಕೇಳಿ ಹೊರ ಬಂದ ಮನೆಯ ಮಾಲೀಕರು ಮತ್ತು ನೆರೆ ಹೊರೆಯವರಿಗೆ ಇಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗುವಷ್ಟರಲ್ಲಿ ಅರ್ಧ ಗೋಡೌನ್ ಗೋಡೆಯನ್ನೇ ದುಷ್ಕರ್ಮಿಗಳು ಒಡೆದು ಉರುಳಿಸಿದ್ದರು.
ಮಾಲೀಕರು ಮತ್ತು ಅಪರಿಚತರ ನಡುವೆ ಮಾತಿನ ಚಕಮಿಕಿ ನಡೆಯುವಷ್ಟರಲ್ಲಿ ಗೋಡೆಯನ್ನು ಒಡೆಯಲು ಬಂದ ಎಲ್ಲರೂ ಪರಾರಿಯಾಗಿದ್ದಾರೆ. ಸದರಿ ಗೋಡೌನ್‍ನಲ್ಲಿದ್ದ ಬೀಡಿಯ ಎಲೆಗಳು, ತಂಬಾಕು ಸೇರಿದಂತೆ 30,000 ರೂ ನಗದು ಹಣವನ್ನೂ ದುಷ್ಕರ್ಮಿಗಳು ದೋಚಿದ್ದು ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎನ್ನಲಾಗಿದೆ.
ಕಾಂಪೌಂಡ್‍ಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಚಾಂದ್‍ಪಾಷಾ ಮತ್ತು ಪ್ರತಿವಾದಿಗಳ ನಡುವೆ ವ್ಯಾಜ್ಯ ನಡೆಯುತ್ತಿತ್ತು ಎನ್ನಲಾಗಿದೆ. ವ್ಯಾಜ್ಯ ನಡೆಯುತ್ತಿದ್ದ ಪ್ರತಿವಾದಿಗಳು ಇಂತಹ ದುಷ್ಕøತ್ಯ ನಡೆಸಿದ್ದಾರೆಂದು ಚಾಂದ್‍ಪಾಷಾ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದು ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಠಾಣೆಗೆ ದೂರು ನೀಡಿದ್ದಾರೆ.
ನಗರ ಠಾಣೆಯ ಸಿ.ಪಿ.ಐ. ಹನುಮಂತರಾಯಪ್ಪ, ನಗರಸಭೆಯ ಮಾಜಿ ಸದಸ್ಯರಾದ ಅಹಮದಿ, ಮುಖಂಡರಾದ ಜಾಫರ್, ಮೊಹಮದ್ ಖುರೇಶಿ ಸೇರಿದಂತೆ ಅನೇಕ ಪ್ರಮುಖರು ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ