ಶಿರಾ :
ತಾಲ್ಲೂಕಿನ ವಿವಿಧ ಹೋಬಳಿಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿ ಕಳ್ಳಂಬೆಳ್ಳ ಕೆರೆ ಕೋಡಿ ಬಿದ್ದ ಪರಿಣಾಮ, ಬಾಕಿ ಇದ್ದ 0.4 ಟಿಎಂಸಿ ನೀರಿನ ಜೊತೆಗೆ ಮಳೆ ನೀರನ್ನು ಮದಲೂರು ಹಾಗೂ ಮಾರ್ಗ ಮಧ್ಯದಲ್ಲಿ ಬರುವ 11 ಕೆರೆಗಳಿಗೆ ತುಂಬಿಸುವ ಬಗ್ಗೆ ಸಚಿವ ಮಾಧುಸ್ವಾಮಿ ಅವರು ಹೇಳಿದ್ದರೂ ಕೂಡಾ ಮದಲೂರು ಕೆರೆಗೆ ನೀರು ಹರಿಸಲು ಆತುರ ಪಡುತ್ತಿರುವ ಜನಪ್ರತಿನಿಧಿಗಳು ಈ ಕೆರೆಯ ಮದ್ಯಭಾಗದ ಕೆರೆಗಳನ್ನು ಕಡೆಗಣಿಸಿದ್ದಾರೆ ಎಂದು ಕಳ್ಳಂಬೆಳ್ಳ ಹೋಬಳಿ ವ್ಯಾಪ್ತಿಯ ವಿವಿಧ ಕೆರೆಗಳ ಅಚ್ಚುಕಟ್ಟಿನ ರೈತರು ಆರೋಪಿಸಿದ್ದಾರೆ.
ತಾಲ್ಲೂಕು-ಜಿಲ್ಲಾಡಳಿತದ ಇಬ್ಬಗೆಯ ನೀತಿ :
ನೀರು ಕಾಲುವೆಯಲ್ಲಿ ಹರಿಯುವಾಗ ಮದಲೂರು ಕೆರೆಗೆ ನೀರು ಹೋಗಲು ತಡವಾಗುತ್ತದೆ ಎಂದು ಇತರ ಕೆರೆಗಳಿಗೆ ಹೋಗುತ್ತಿದ್ದ ನೀರನ್ನು ಪೊಲೀಸ್ ಬಲಪ್ರಯೋಗ ಮಾಡಿ ನಾಲೆಯ ಇಂಜಿನಿಯರ್‍ಗಳು ಇತರ ಕೆರೆಗಳಿಗೆ ನೀರು ಹಾಯಿಸದೇ ಇರುವ ಕಾರಣದಿಂದ ರೈತರು ತಾಲ್ಲೂಕು ಅಡಳಿತ ಮತ್ತು ಜಿಲ್ಲಾಡಳಿತದ ಇಬ್ಬಗೆಯ ನೀತಿಯನ್ನು ಖಂಡಿಸಿದ್ದಾರೆ.
ಸುತ್ತ-ಮುತ್ತಲ ಗ್ರಾಮಗಳ ರೈತರ ಆರೋಪ :
ಮದಲೂರು ಕೆರೆಗೆ ನೀರನ್ನು ಹರಿಸುವ ಸಲುವಾಗಿ ಸುತ್ತಮುತ್ತ ಇರುವ 11 ಕೆರೆಗಳಿಗೂ ಕೂಡಾ ನೀರು ಹರಿಸುವ ಉದ್ದೇಶದಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಕೇಂದ್ರ ಸರ್ಕಾರದ 60 ಕೋಟಿ ರೂ.ಗಳ ಅನುದಾನ ಖರ್ಚು ಮಾಡಿ ಕಾಲುವೆ ನಿರ್ಮಾಣ ಮಾಡಿಸಿದ್ದರು. ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿಯೂ ಹೋರಾಡಿ 11 ಕೆರೆಗಳಿಗೆ 0.4 ಟಿಎಂಸಿ ನೀರು ಮೀಸಲಿರಿಸಲು ಅನುಕೂಲ ಕೂಡಾ ಆಯ್ತು. ಜಿಲ್ಲಾ ಸಚಿವರೇ ನೇರವಾಗಿ 11 ಕೆರೆಗಳಿಗೆ ನೀರು ಹರಿಸುವ ಉದ್ದೇಶವನ್ನು ತಿಳಿಸಿದ್ದರಾದರೂ ಇದೀಗ ಮದಲೂರು ಕೆರೆಗೆ ಮಾತ್ರ ನೀರನ್ನು ಹರಿಸಿಕೊಳ್ಳಲಾಗುತ್ತಿದೆ ಎಂದು ಬೂಪಸಂದ್ರ, ಚಿಕ್ಕಗೂಳ, ದೊಡ್ಡಗೂಳ ಭಾಗದ ರೈತರು ಆರೋಪಿಸಿದ್ದಾರೆ.
ಶಾಸಕರು ಹೇಳಿದಂತೆ ನೀರು ಹರಿಯಲಿಲ್ಲ :
ಶಾಸಕ ರಾಜೇಶ್‍ಗೌಡ ಅವರು ಕಳೆದ ಕೆಲ ದಿನಗಳ ಹಿಂದೆ ಮದಲೂರು ಕೆರೆಗೂ ಮುನ್ನ ಇರುವ ನಾಲಾ ವ್ಯಾಪ್ತಿಯ ಕೆರೆಗಳ ಬಳಿಗೆ ಬಂದು 11 ಕೆರೆಗಳನ್ನು ತುಂಬಿಸಲಾಗುವುದು ಎಂದು ಹೇಳಿದ್ದರು. ಕೆಲ ಕೆರೆಗಳಿಗೆ ನೀರು ಹರಿಸಲು ತಯಾರಿ ನಡೆಯಿತಾದರೂ ಕೆಲವೇ ದಿನಗಳಲ್ಲಿ ಈ ಕೆರೆಗಳಿಗೆ ಹರಿಯುತ್ತಿದ್ದ ನೀರನ್ನು ಅಡ್ಡಗಟ್ಟಿ ಮದಲೂರಿನತ್ತ ಕೊಂಡೊಯ್ಯಲಾಗುತ್ತಿದೆ ಎಂದು ರೈತರು ಆರೋಪಿಸಿದ್ದು, ಈ ಕೂಡಲೇ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮೊದಲಿಗೆ ಮದಲೂರು ಕೆರೆ ವ್ಯಾಪ್ತಿಗೆ ಒಳಪಡುವ 11 ಕೆರೆಗಳಿಗೆ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ