ಶಿರಾ ಸರ್ಕಾರಿ ಆಸ್ಪತ್ರೆ ಸಮಸ್ಯೆ ನಿವೇದಿಸಿ ಕಣ್ಣೀರಿಟ್ಟ ತಾ.ಪಂ.ಸದಸ್ಯೆ

 ಶಿರಾ : 

      ನಗರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಕೆಲ ಪ್ರಾಮಾಣಿಕ ವೈದ್ಯರಿಂದ ಆಸ್ಪತ್ರೆ ಸದ್ಯದ ಪರಿಸ್ಥಿಯಲ್ಲಿ ಒಂದಿಷ್ಟು ಸುಧಾರಿಸಿದೆಯಾದರೂ, ಕೆಲವೆ ಕೆಲವು ಬೆರಳೆಣಿಕೆಯ ವೈದ್ಯರ ನಿರ್ಲಕ್ಷ್ಯ ದೋರಣೆಗಳಿಂದಾಗಿ ಜನ ಸಾಮಾನ್ಯರು ಸದರಿ ಆಸ್ಪತ್ರೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ.

       ಶಿರಾ ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾ.ಪಂ. ಸದಸ್ಯೆಯೊಬ್ಬರು ಸರ್ಕಾರಿ ಆಸ್ಪತ್ರೆಯ ದುಸ್ಥಿತಿಯನ್ನು ಹಾಗೂ ವೈದ್ಯರ ಅತ್ಯಂತ ನಿರ್ಲಕ್ಷ್ಯದ ವರ್ತನೆಯ ಘಟನೆಗಳನ್ನು ಸಭೆಗೆ ತಂದು ಶಾಸಕರು, ಸಂಸದರ ಸಮ್ಮುಖದಲ್ಲಿಯೇ ಕಣ್ಣೀರಿಟ್ಟ ಅಪರೂಪದ ಪ್ರಸಂಗವೊಂದು ಮಂಗಳವಾರ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು.

      ತಾ.ಪಂ. ಸದಸ್ಯರ ಸಾಮಾನ್ಯ ಸಭೆಯು ಆರಂಭಗೊಳ್ಳುವ ಮುನ್ನವೆ ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ, ಸಂಸದ ಎ.ನಾರಾಯಣಸ್ವಾಮಿ ಹಾಗೂ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹಾಜರಾಗಿದ್ದರು.

      ಈ ಮೂವರಿಗೂ ಮೊದಲ ತಾಲ್ಲೂಕು ಪಂಚಾಯ್ತಿ ಸಭೆಯಾದ್ದರಿಂದ ತುಂಬಾ ಹುರುಪಿನಿಂದಲೆ ಶಾಸಕ, ಸಂಸದರು ಸಭೆಯನ್ನು ನಡೆಸಲು ಮುಂದಾದಾಗ ಅಚ್ಚರಿಯ ಪ್ರಸಂಗವೊಂದು ನಡೆಯಿತು. ತಾಲ್ಲೂಕು ಪಂಚಾಯ್ತಿಯ ಓರ್ವ ಜನಪ್ರತಿನಿಧಿ ಅದರಲ್ಲೂ ಮಹಿಳಾ ಪ್ರತಿನಿಧಿಯೊಬ್ಬರು ಶಿರಾ ಸರ್ಕಾರಿ ಆಸ್ಪತ್ರೆಯ ಕೆಲ ವೈದ್ಯರ ನಿರ್ಲಕ್ಷ್ಯ ದೋರಣೆಯಿಂದಾದ ಪ್ರಸಂಗವನ್ನು ಹೇಳಿಕೊಂಡು ಕಣ್ಣೀರಿಟ್ಟೇಬಿಟ್ಟರು.
ಸಭೆಯು ಆರಂಭಗೊಳ್ಳುತ್ತಿದ್ದಂತೆಯೇ ಆರೋಗ್ಯ ಇಲಾಖೆಯ ಪ್ರಗತಿ ವರದಿಯನ್ನು ವೈದ್ಯರು ಸಭೆಯ ಗಮನಕ್ಕೆ ತಂದರು. ಸಭೆಯ ನಡುವೆಯೇ ಆರೋಗ್ಯ ಇಲಾಖೆಯ ಬಗ್ಗೆ ಹೊನ್ನಗೊಂಡನಹಳ್ಳಿ ತಾ.ಪಂ. ಸದಸ್ಯೆ ತಿಪ್ಪಮ್ಮ ಅಳಲು ತೋಡಿಕೊಂಡರು.

      ಶಿರಾ ಆಸ್ಪತ್ರೆಯಲ್ಲಿ ಎಲ್ಲವೂ ಇದ್ದರೂ ಏನೂ ಪ್ರಯೋಜನವಿಲ್ಲದಂತಾಗಿದೆ. ಇಲ್ಲಿನ ಟಿ.ಬಿ. ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದ್ದೆವು. ದಿನ ನಿತ್ಯ ಬರೀ ಸಬೂಬುಗಳನ್ನು ಹೇಳಿ ಉತ್ತಮ ಚಿಕಿತ್ಸೆ ನೀಡದೆ, ಕನಿಷ್ಠಪಕ್ಷ ಸ್ಕ್ಯಾನಿಂಗ್, ಎಕ್ಸರೆ ಕೂಡ ಮಾಡಿಸದೆ ರೋಗಿಯನ್ನು ವೈದ್ಯರೊಬ್ಬರು ನಿರ್ಲಕ್ಷ್ಯ ಮಾಡಿದರು. ವೈದ್ಯರ ನಿರ್ಲಕ್ಷ್ಯದಿಂದ ನಮ್ಮ ಸೊಸೆ, ಮಗುವನ್ನು ಕಳೆದುಕೊಳ್ಳುವಂತಾಯಿತು ಎಂದು ಮುಗ್ದ ಗ್ರಾಮೀಣ ಭಾಗದ ತಾ.ಪಂ. ಸದಸ್ಯೆ ತಿಪ್ಪಮ್ಮ ಎಲ್ಲರ ಎದುರು ಕಂಬನಿ ಮಿಡಿದಾಗ ಇಡೀ ಸಭೆ ಮೌನಗೊಂಡಿತು. ಶಾಸಕ, ಸಂಸದರು ಕೂಡ ಕ್ಷಣ ಕಾಲ ದಂಗಾಗಿ ಹೋದರು.

      ವರದಿ ನೀಡಲು ಸಭೆಗೆ ಆಗಮಿಸಿದ್ದ ವೈದ್ಯರ ವಿರುದ್ಧ ಶಾಸಕ, ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರು ಹರಿಹಾಯ್ದರು. ಸದರಿ ಅಧಿಕಾರಿಯ ವಿರುದ್ಧ ಈ ಕೂಡಲೆ ಕ್ರಮ ಕೈಗೊಳ್ಳಿ ಎಂದು ಹಾಜರಿದ್ದ ವೈದ್ಯರಿಗೆ ಸೂಚನೆ ನೀಡಿದರಲ್ಲದೆ. ಆಡಳಿತ ವೈದ್ಯರು ಇಲ್ಲವೆ ತಾಲ್ಲೂಕು ವೈದ್ಯಾಧಿಕಾರಿಗಳನ್ನು ಸಭೆಗೆ ಕಳಿಸುವಂತೆ ಹಾಜರಿದ್ದ ನೇರಲಗುಡ್ಡ ಆಸ್ಪತ್ರೆಯ ವೈದ್ಯರನ್ನು ಹೊರ ಕಳಿಸಿದರು.

      ಬೆಂಚೆ ಹಾಗೂ ಪಟ್ಟನಾಯಕನಹಳ್ಳಿ ಆಸ್ಪತ್ರೆಗಳಿಗೆ ತುರ್ತು ವಾಹನ ಮಂಜೂರಾಗಿದ್ದರೂ ಈವರೆವಿಗೂ ವಾಹನಗಳನ್ನು ಪೂರೈಕೆ ಮಾಡಲಾಗಿಲ್ಲ. ಅಲ್ಲಿನ ರೋಗಿಗಳ ಪರಿಸ್ಥಿತಿ ಏನಾಗಬೇಕು ಎಂದು ತಾ.ಪಂ. ಸದಸ್ಯ ಪುಟ್ಟರಾಜು ಆರೋಪಿಸಿದರು. ತಾ.ಪಂ. ಸದಸ್ಯ ಶ್ರೀನಿವಾಸ್ ಮಾತನಾಡಿ, ಪಟ್ಟನಾಯಕನಹಳ್ಳಿಗೆ ಆ್ಯಂಬ್ಯುಲೆನ್ಸ್ ನೀಡಿ ಎಂದು ಎಲ್ಲಾ ಸಭೆಗಳಲ್ಲೂ ಕೇಳಿ ಕೇಳಿ ಸಾಕಾಗಿ ಹೋಗಿದೆ ಎಂದು ದೂರಿದರು.

      ಬೆಂಚೆ ಹಾಗೂ ಪಟ್ಟನಾಯಕನಹಳ್ಳಿ ಸೇರಿದಂತೆ ಅಗತ್ಯವಿರುವ ಉಪ ಕೇಂದ್ರಗಳಿಗೆ ಆ್ಯಂಬ್ಯುಲೆನ್ಸ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಹಾಗೂ ಸಂಸದ ಎ.ನಾರಾಯಣಸ್ವಾಮಿ ಭರವಸೆ ನೀಡಿದರು.
ಶಿರಾ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ.ಗಳ ಸ್ಕ್ಯಾನಿಂಗ್ ಯಂತ್ರವಿದೆಯಾದರೂ ಅದನ್ನು ಉಪಯೋಗಿಸಲು ತಜ್ಞ ವೈದ್ಯರೆ ಇಲ್ಲ. ಕಳೆದ ಮೂರು-ನಾಲ್ಕು ವರ್ಷಗಳಿಂದಲೂ ಈ ಯಂತ್ರ ತುಕ್ಕು ಹಿಡಿಯುತ್ತಾ ಕೂತಿದೆ ಎಂದು ಸದಸ್ಯರಾದ ಪುಟ್ಟರಾಜು, ಶ್ರೀನಿವಾಸ್ ಹಾಗೂ ಶ್ರೀಮತಿ ಮಂಜುಳಾಬಾಯಿ ಶೇಷಾನಾಯ್ಕ ಆರೋಪಿಸಿದರು.

      ಸದರಿ ಸಮಸ್ಯೆಗೆ ಉತ್ತರಿಸುತ್ತಾ ಶಾಸಕ ಚಿದಾನಂದ್ ಎಂ.ಗೌಡ ಮಾತನಾಡಿ, ನಾನೂ ಸೇರಿದಂತೆ ಈ ಕ್ಷೇತ್ರದ ಸಮಸ್ಯೆಗಳನ್ನು ಈಡೇರಿಸಲು ಮೂರು ಮಂದಿ ಕ್ರಿಯಾಶೀಲ ಜನಪ್ರತಿನಿಧಿಗಳಿದ್ದೇವೆ. ಶಾಸಕ ರಾಜೇಶ್‍ಗೌಡ ಹಾಗೂ ಸಂಸದ ನಾರಾಯಣಸ್ವಾಮಿ ಅವರು ಸೇರಿಕೊಂಡಂತೆ ನಾವೆಲ್ಲರೂ ಸೇರಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಕೂಡಲೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

     ಶಾಸಕರ ಸೂಚನೆಯಿಂದ ಸಭೆಯಿಂದ ಹೊರ ಹೋಗಿದ್ದ ವೈದ್ಯರು ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್ ಹಾಗೂ ಡಾ.ಡಿ.ಎಂ.ಗೌಡ ಅವರೊಂದಿಗೆ ಮತ್ತೆ ಸಭೆಗೆ ಹಾಜರಾಗಿ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆದರು. ಸ್ಕ್ಯಾನಿಂಗ್ ಯಂತ್ರದ ತಜ್ಞ ವೈದ್ಯರ ಹುದ್ದೆ ಖಾಲಿ ಇದೆ. ವರ್ಗವಾಗಿ ಬಂದ ವೈದ್ಯರು ಇಲ್ಲಿ ಕೆಲಸ ಮಾಡುವುದೆ ಇಲ್ಲ. ರೋಗಿಗಳು ಖಾಸಗಿಯಾಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ರೋಗಿಗಳಿಗೆ ತೊಂದರೆಯಾಗಿರುವುದು ಸತ್ಯ ಎಂದರು.

     ಶಿರಾ ಆಸ್ಪತ್ರೆಗೆ ಮೂರು ಮಂದಿ ಶಸ್ತ್ರ ಚಿಕಿತ್ಸಾ ವೈದ್ಯರ ಅಗತ್ಯವಿದೆಯಲ್ಲದೆ ಸಿಬ್ಬಂದಿಯ ಕೊರತೆಯೂ ಇದೆ. ಕೋವಿಡ್‍ನಿಂದ ಈವರೆಗೆ 26 ಮಂದಿ ಶಿರಾ ತಾಲ್ಲೂಕಿನಲ್ಲಿ ಮೃತಪಟ್ಟಿದ್ದು, 2010 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. 87,000 ಮಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ಸುಮಾರು 51,000 ಮಂದಿಯ ರ್ಯಾಪಿಡ್ ಟೆಸ್ಟ್ ಮಾಡಲಾಗಿದೆ ಎಂದು ಡಾ.ಶ್ರೀನಾಥ್ ಸಭೆಯ ಗಮನಕ್ಕೆ ತಂದರು. ಆಸ್ಪತ್ರೆಯ ಎಲ್ಲಾ ಸಮಸ್ಯೆಗಳನ್ನು ಸಂಗ್ರಹಿಸಿ ತಮಗೆ ಒಂದು ವರದಿ ನೀಡುವಂತೆ ಶಾಸಕ ರಾಜೇಶ್‍ಗೌಡ ವೈದ್ಯರಿಗೆ ಸೂಚನೆ ನೀಡಿದರು.

ಶಾಲಾ ಕಟ್ಟಡ ದುರಸ್ಥಿಗೆ ಕ್ರಮ :

      ತಾಲ್ಲೂಕಿನಲ್ಲಿ ಶಿಥಿಲಗೊಂಡ ಕಟ್ಟಡಗಳ ಪಟ್ಟಿ ಮಾಡಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಕೆಲ ಶಾಲಾ ಕಟ್ಟಡಗಳು ಕೂಡ ದುರಸ್ತಿಗೊಳ್ಳಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕರಯ್ಯ ಸಭೆಯಲ್ಲಿ ತಿಳಿಸಿದರು. ಅಂತಹ ಶಾಲೆಗಳ ಸಂಪೂರ್ಣ ಪಟ್ಟಿಯನ್ನು ನೀಡುವಂತೆ ಹಾಗೂ ಕೋವಿಡ್‍ನಿಂದ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲವಾದ್ದರಿಂದ ರಜೆಯ ಸಂದರ್ಭದಲ್ಲಿ ಶೌಚಾಲಯಗಳನ್ನು ಹಾಗೂ ಕಟ್ಟಡಗಳ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.

ನಿರ್ಮಿತಿ ಕೇಂದ್ರದ ಮೇಲೆ ಆರೋಪ :

      ಶಿರಾ ತಾಲ್ಲೂಕಿನ ಹುಯಿಲ್‍ದೊರೆ, ಕುಣಿಗಾಟನಹಳ್ಳಿ, ಸುಬಾಬುಲ್ ರಂಗನಹಳ್ಳಿ, ಗಿಡ್ಡನಹಳ್ಳಿ, ರಂಗನಾಥಪುರ ಗ್ರಾಮಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 2016-17 ರಲ್ಲಿ ಅಂಬೇಡ್ಕರ್ ಭವನ ಮಂಜೂರಾಗಿದ್ದು, ನಿರ್ಮಿತಿ ಕೇಂದ್ರದವರು ಈವರೆವಿಗೂ ಕಾಮಗಾರಿಯನ್ನೇ ಆರಂಭಿಸಿಲ್ಲ ಎಂದು ತಾ.ಪಂ. ಸದಸ್ಯೆ ಮಂಜುಳಾಬಾಯಿ ಸಭೆಯಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳುವುದಾಗಿ ಇಲಾಖೆಯ ಅಧಿಕಾರಿ ಭರವಸೆ ನೀಡಿದರು.

      ತಾ.ಪಂ. ಅಧ್ಯಕ್ಷ ಚಂದ್ರಯ್ಯ, ಉಪಾಧ್ಯಕ್ಷ ರಂಗನಾಥಗೌಡ, ಸ್ಥಾಯಿ ಸಮಿತಿಯ ಅಧ್ಯಕ್ಷ ತಿಮ್ಮಯ್ಯ, ತಾ.ಪಂ. ಇ.ಓ. ಅತೀಕ್‍ಪಾಷಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಸ್ಕ್ಯಾನಿಂಗ್ ಯಂತ್ರದ ತಜ್ಞ ವೈದ್ಯರ ಹುದ್ದೆ ಖಾಲಿ ಇದೆ. ವರ್ಗವಾಗಿ ಬಂದ ವೈದ್ಯರು ಇಲ್ಲಿ ಕೆಲಸ ಮಾಡುವುದೆ ಇಲ್ಲ. ರೋಗಿಗಳು ಖಾಸಗಿಯಾಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ರೋಗಿಗಳಿಗೆ ತೊಂದರೆಯಾಗಿರುವುದು ಸತ್ಯ.

-ಡಾ.ಶ್ರೀನಾಥ್, ಆಡಳಿತ ವೈದ್ಯಾಧಿಕಾರಿ, ಸಿರಾ

Recent Articles

spot_img

Related Stories

Share via
Copy link