ಶಿರಾ :
ಶಿರಾ ಕ್ಷೇತ್ರ ನನಗೆ ಅತ್ಯಂತ ಪ್ರಿಯವಾದ ಕ್ಷೇತ್ರ. ಈ ಕ್ಷೇತ್ರದಲ್ಲಿ ನಮ್ಮ ಪಕ್ಷದ ಗಟ್ಟಿಮುಟ್ಟಾದ ಕಾರ್ಯಕರ್ತರಿದ್ದಾರೆ. ಅಧಿಕಾರದ ಸವಿಯನ್ನುಂಡು ಕೆಲ ಪ್ರಮುಖ ದುರೀಣರು ಪಕ್ಷ ತೊರೆದರೂ ಯಾವೊಬ್ಬ ಕಾರ್ಯಕರ್ತರು ಪಕ್ಷ ತೊರೆಯದೇ ಪಕ್ಷದ ಉಳಿವಿಗೆ ಜೀವ ತುಂಬುವ ಜನ ಇಲ್ಲಿದ್ದು ಈ ಕ್ಷೇತ್ರದ ಅಭಿವೃದ್ಧಿಗೆ ಶಿರಾ ಕ್ಷೇತ್ರವನ್ನು ಧತ್ತು ತೆಗೆದುಕೊಳ್ಳಲೂ ನಾನು ತಯಾರಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ತಾಲ್ಲೂಕಿನ ಗೌಡಗೆರೆ ಹೋಬಳಿಯ ಪಟ್ಟನಾಯಕನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಅವರ ಪರ ಮತ ಯಾಚನೆ ಮಾಡುವ ಸಂದರ್ಬದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಈ ಹೇಳಿಕೆ ನೀಡಿದ್ದಾರೆ.
ಶಿರಾ ಕ್ಷೇತ್ರ ಜೆ.ಡಿ.ಎಸ್. ಪಕ್ಷದ ಭದ್ರಕೋಟೆಯಾಗಿದೆ. ಜೆ.ಡಿ.ಎಸ್. ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಇಲ್ಲಿದ್ದಾರೆ.
ಶಾಸಕ ಬಿ.ಸತ್ಯನಾರಾಯಣ್ ಅವರನ್ನು ಎರಡು ಬಾರಿ ಆಯ್ಕೆ ಮಾಡಿಕೊಳ್ಳುವ ಮೂಲಕ ಈ ಕ್ಷೇತ್ರದ ಜನ ನಮ್ಮ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಇಂತಹ ಕ್ಷೇತ್ರಕ್ಕೆ ನಾನು ಚಿರಋಣಿಯಾಗಿರಲೇಬೇಕು. ಈ ಕಾರಣಕ್ಕಾಗಿಯೇ ನಾನು ಈ ಕ್ಷೇತ್ರದ ಅಭಿವೃದ್ಧಿಗಾಗಿ ಧತ್ತು ತೆಗೆದುಕೊಳ್ಳಲೂ ಸಿದ್ಧನಿದ್ದೇನೆ ಎಂದರು.
ನಾನು ರಾಜ್ಯಸಭಾ ಸದಸ್ಯನಿದ್ದೇನೆ. ನನಗೆ ವರ್ಷಕ್ಕೆ ಎರಡು ಕೋಟಿ ರೂಗಳ ವೇತನ ಬರುತ್ತಿದ್ದು ಈ 2 ಕೋಟಿ ರೂಗಳನ್ನು ಶಿರಾ ಕ್ಷೇತ್ರದ ಅಭಿವೃದ್ಧಿಗಾಗಿಯೇ ಮೀಸಲಿಟ್ಟು ಕ್ಷೇತ್ರವನ್ನು ಧತ್ತು ತೆಗೆದುಕೊಳ್ಳುತ್ತೇನೆಂದು ದೇವೇಗೌಡರು ಕ್ಷೇತ್ರದ ಮತದಾರರಿಗೆ ಭರವಸೆ ನೀಡಿದರು.
ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ, ಜಿ.ಪಂ. ತಾಲ್ಲೂಕು ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ಮಾಜಿ ಸದಸ್ಯ ಸಿ.ಆರ್.ಉಮೇಶ್, ಮಾಜಿ ಸಚಿವ ಬಂಡೆಪ್ಪ ಕಾಶಂಪುರ, ಬಿ.ಸತ್ಯಪ್ರಕಾಶ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ