ಶಿರಾ :
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ಬಿಎಸ್ಸಿ., ವ್ಯಾಸಂಗ ಮಾಡುತ್ತಿರುವ ಕು. ಪೂಜಿತಾ ಮಹಿಳೆಯರ ಬಾಡಿ ಬಿಲ್ಡಿಂಗ್ (Body building) ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.
ಮಾರ್ಚ್ ತಿಂಗಳು ದೆಹಲಿಯಲ್ಲಿ ನಡೆಯಲಿರುವ ಮಹಿಳೆಯರ ಅಂತಾರಾಷ್ಟ್ರೀಯ ಬಾಡಿ ಬಿಡ್ಡಿಂಗ್ ಸ್ಪರ್ಧೆಯಲ್ಲಿ ಅವರು ಭಾಗವಹಿಸಲಿದ್ದಾರೆ.ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣರವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಜನವರಿ 12 ರ ಯುವ ದಿನಾಚರಣೆಯಲ್ಲಿ ಈಕೆಯನ್ನು ಗೌರವಿಸಿ ಅಭಿನಂದಿಸಿದ್ದಾರೆ.
ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ತಾಳಗುಂದ ಸಮೀಪದ ಮಾಟನಹಳ್ಳಿ ಗ್ರಾಮದ ಶಿಕ್ಷಕರಾದ ರಂಗನಾಥ್ ಅವರ ಪುತ್ರಿಯಾದ ಪೂಜಿತಾ ಸ.ಪ್ರ.ದ. ಕಾಲೇಜಿನಲ್ಲಿ ಅಂತಿಮ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.
ಈ ಸಂಬಂಧ ಸದರಿ ವಿದ್ಯಾರ್ಥಿನಿಯನ್ನು ಶಿರಾ ಪ್ರ.ದ. ಕಾಲೇಜಿನ ಸಿಬ್ಬಂದಿ ಅಭಿನಂದಿಸಿದ್ದಾರೆ. ಈ ಗ್ರಾಮೀಣ ಪ್ರತಿಭೆಯ ಸಾಧನೆ ಬಗ್ಗೆ ಪ್ರಾಂಶುಪಾಲರು ಹಾಗೂ ಕಾಲೇಜಿನ ಸಿಬ್ಬಂದಿ ಪ್ರಶಂಸಿಸಿದ್ದು, ಪ್ರಾಂಶುಪಾಲ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅಪೂರ್ವ ಪ್ರತಿಭೆಯಿದ್ದು, ಅದನ್ನು ಗುರುತಿಸಿ ಉತ್ತೇಜಿಸಿದರೆ ಈ ರೀತಿ ಗ್ರಾಮಾಂತರ ಪ್ರದೇಶದ ಪದವಿ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ. ತನ್ಮೂಲಕ ಕಾಲೇಜಿಗೆ, ವಿಶ್ವವಿದ್ಯಾನಿಲಯಕ್ಕೆ ಮಾದರಿಯಾಗುತ್ತಾರೆ ಮತ್ತು ಇತರರಿಗೆ ಸ್ಪೂರ್ತಿಯಾಗುತ್ತಾರೆಂದು ತಿಳಿಸಿದ್ದಾರೆ.
ಡಾ.ಆರ್.ಶಿವಣ್ಣ, ಇಂಗೀಷ್ ಪ್ರಾಧ್ಯಾಪಕ ಡಾ.ಗಿರೀಶ್, ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಸ್.ಟಿ. ರಂಗಪ್ಪ, ಪ್ರೊ.ಹಸೀಬಾ ಖಾನಂ, ಪ್ರೊ.ಬಿ.ಆರ್.ಹೇಮಲತಾ ಪ್ರೊ.ಟಿ.ಎಲ್.ಸುಕನ್ಯ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
