ಶಿರಾ ಶಾಸಕರ ಜನಸ್ಪಂದನ ಸಭೆಯಲ್ಲಿ ದೂರುಗಳ ಸುರಿಮಳೆ

 ಶಿರಾ : 

      ಶಿರಾ ನಗರಸಭಾ ಸದಸ್ಯರ ಅಧಿಕಾರಾವಧಿ ಮುಗಿದು ಮೂರುವಾದರೂ ಈವರೆಗೂ ಚುನಾವಣೆಯೆ ನಡೆದಿಲ್ಲ. ನಗರದ ವಾರ್ಡುಗಳ ಸಮಸ್ಯೆಗಳನ್ನು ಕೇಳುವವರೆ ಇಲ್ಲವಾಗಿದೆ. ರಸ್ತೆ, ಚರಂಡಿಗಳ ಅವ್ಯವಸ್ಥೆಯ ಬಗ್ಗೆ ಯಾರೂ ಗಮನವನ್ನೆ ಹರಿಸುತ್ತಿಲ್ಲ ಎಂಬ ಸಮಸ್ಯೆಗಳೂ ಸೇರಿದಂತೆ ನೂರಾರು ಸಾರ್ವಜನಿಕರು ಶಾಸಕರ ಮುಂದೆ ನಗರದ ಸಮಸ್ಯೆಗಳ ಸುರಿಮಳೆಗೈದ ಪ್ರಸಂಗ ಮಂಗಳವಾರ ನಡೆಯಿತು.

      ಮಂಗಳವಾರ ಬೆಳಗ್ಗೆ ನಗರದ ನಗರಸಭೆಯ ಸಭಾಂಗಣದಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನೀಡಿ ಸಮಸ್ಯೆ ನೀಗಿಸುವಂತೆ ಶಾಸಕರಿಗೆ ದುಂಬಾಲು ಬಿದ್ದರು.
ವಿದ್ಯಾನಗರದ ಸಾರ್ವಜನಿಕರಾದ ನಿವೃತ್ತ ಉಪ ಪ್ರಾಂಶುಪಾಲ ನಾಗೇಂದ್ರಪ್ಪ ಹಾಗೂ ಮಹಾಲಿಂಗಪ್ಪ 30ನೆ ವಾರ್ಡಿನ ಸಾರ್ವಜನಿಕರೊಂದಿಗೆ ಸಭೆಗೆ ಆಗಮಿಸಿ ವಾರ್ಡಿನ ಸಮಸ್ಯೆಗಳನ್ನು ನಿವೇದಿಸಿಕೊಂಡರು.

      ನಾಗೇಂದ್ರಪ್ಪ ಮಾತನಾಡಿ, ಕೆರೆಯ ಕುಡಿಯುವ ನೀರಿನ ಜಲ ಸಂಗ್ರಹಾಗಾರದಲ್ಲಿ ನೀರನ್ನು ಸರಿಯಾಗಿ ಶುದ್ಧೀಕರಿಸುತ್ತಿಲ್ಲ. ಆಲಂನ್ನು ನಿಗದಿತ ಪ್ರಮಾಣದಲ್ಲಿ ಹಾಕುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಂಡು ಕುಡಿಯುವ ನೀರನ್ನು ಸರಿಯಾಗಿ ಶುದ್ಧೀಕರಿಸಿ ಜನರಿಗೆ ನೀಡಬೇಕು ಎಂದರು.

      ವಿದ್ಯಾನಗರ ವಾರ್ಡಿನಲ್ಲಿ ಒಳ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಪೌರ ಕಾರ್ಮಿಕರು ಸಮಯಕ್ಕೆ ಸರಿಯಾಗಿ ಚರಂಡಿ ತೆಗೆಯಲು ಬಾರದ್ದರಿಂದ ಕಲುಷಿತ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಅನೇಕ ರಸ್ತೆಗಳಿಗೆ ಬೀದಿ ದೀಪಗಳೇ ಇಲ್ಲ. ನಗರಸಭೆಗೆ ಮನೆ ಕಂದಾಯವನ್ನು ಬ್ಯಾಂಕಿಗೆ ಕಟ್ಟಿ ರಸೀದಿ ಪಡೆದು ಇಟ್ಟುಕೊಂಡಾಗ ರಸೀದಿ ಆಕಸ್ಮಿಕವಾಗಿ ಕಳೆದು ಹೋದರೆ ಮತ್ತೊಮ್ಮೆ ಸಿಬ್ಬಂದಿ ಕಂದಾಯವನ್ನು ಬಲವಂತವಾಗಿ ಕಟ್ಟಿಸಿಕೊಳ್ಳುತ್ತಾರೆ. ಕಂದಾಯ ಕಟ್ಟಿರುವ ಬಗ್ಗೆ ನಗರಸಭೆಯಲ್ಲಿ ದಾಖಲೆಗಳನ್ನೇ ಇಟ್ಟುಕೊಳ್ಳುವುದಿಲ್ಲ ಎಂದು ನಾಗೇಂದ್ರಪ್ಪ ದೂರಿದರು.

      31ನೇ ವಾರ್ಡಿನ ಸಪ್ತಗಿರಿ ಬಡಾವಣೆಯ ಅನೇಕ ಸಾರ್ವಜನಿಕರು ವಾರ್ಡಿನ ಬಲ ಸಮಸ್ಯೆಗಳನ್ನೊತ್ತ ಹತ್ತು ಹಲವು ಅರ್ಜಿಗಳನ್ನು ಶಾಸಕರಿಗೆ ನೀಡಿದರು. ಸದರಿ ವಾರ್ಡಿನಲ್ಲಿ ಸಂಪೂರ್ಣವಾಗಿ ಚರಂಡಿ ವ್ಯವಸ್ಥೆಯೆ ಇಲ್ಲ. ಇಡೀ ಬಡಾವಣೆಯಲ್ಲಿ ಒಂದೇ ಒಂದು ಸಿ.ಸಿ. ರಸ್ತೆಯನ್ನೂ ನಿರ್ಮಾಣ ಮಾಡಿಲ್ಲ. ಈ ಬಡಾವಣೆಯ ಮೇಲೆ ನಗರಸಭೆಯು ಮಲತಾಯಿ ದೋರಣೆ ಅನುಸರಿಸಿದೆ ಎಂದು ಆರೋಪಿಸಿ ಶಾಸಕರಿಗೆ ದೂರು ನೀಡಿದರು.

      ಬಾಲಾಜಿ ನಗರ ವಾರ್ಡಿನ ಜೈನ್ ದೇವಸ್ಥಾನದ ಮುಂಭಾಗ ಹಾಗೂ ಹಿಂಭಾಗದಲ್ಲಿ ರಸ್ತೆ ವ್ಯವಸ್ಥೆಯಯನ್ನು ನಿರ್ಮಾಣ ಮಾಡಿಕೊಡುವಂತೆ ದೇವಾಲಯದ ಭಕ್ತರು ಶಾಸಕರಿಗೆ ಮನವಿ ಸಲ್ಲಿಸಿದರೆ, ಇದೇ ವಾರ್ಡಿನ ಶಿವಕುಮಾರ್ ಮತ್ತು ವಿನಯ್ ಸೇರಿದಂತೆ ಅನೇಕ ಮಂದಿ ಒಳ ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಸಂಬಂಧಿತ ಅರ್ಜಿಗಳನ್ನು ಶಾಸಕರಿಗೆ ನೀಡಿದರು.

       ಕಲ್ಲುಕೋಟೆ ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರಿಲ್ಲದೆ ಜನ ಪರಿತಪಿಸುವಂತಾಗಿದೆ. ಈ ಕಲ್ಲುಕೋಟೆ ಬಡಾವಣೆಯಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಈ ವಾರ್ಡಿನ ಸಾರ್ವಜನಿಕರು ಮನವಿ ಸಲ್ಲಿಸಿದರು. ರಂಗನಾಥ ನಗರದ ಅನೇಕ ಕಡು ಬಡ ಕುಟುಂಬಗಳಿಗೆ ನಿವೇಶನಗಳೆ ಇಲ್ಲ, ಪೌರ ಕಾರ್ಮಿಕರಿಗಂತೂ ಅನೇಕ ಮಂದಿ ಸ್ವಂದ್ದೊಂದು ಸೂರನ್ನೂ ನಿರ್ಮಾಣ ಮಾಡಿಕೊಂಡಿಲ್ಲ. ಇಂತಹವರಿಗೆ ನಿವೇಶನ ನೀಡಿ ಎಂದು ರೇಣುಕಮ್ಮ, ರಂಗನಾಥ್ ಸೇರಿದಂತೆ ಹಲವರು ಮನವಿ ಸಲ್ಲಿಸಿದರು.

      ಭವಾನಿ ನಗರದ ದಿಬ್ಬಣ್ಣ ಸೇರಿದಂತೆ ಈ ವಾರ್ಡಿನ ಅನೇಕ ಮಂದಿ ನಿವೇಶನಗಳನ್ನು ಕೋರಿ ಅರ್ಜಿಗಳನ್ನು ಶಾಸಕರಿಗೆ ನೀಡಿದರು. ಈ ಹಿಂದೆ ಭವಾನಿ ನಗರದ ಅರ್ಹ ಫಲಾನುಭವಿಗಳಿಗೆ ಸೂರು ನೀಡಲು ನಗರಸಭೆಯು ಪಟ್ಟಿಯನ್ನು ತಯಾರಿಸಿತ್ತು. ಈವರೆಗೂ ಈ ಅರ್ಹ ಫಲಾನುಭವಿಗಳಿಗೆ ಸೂರನ್ನು ನೀಡುವ ಪ್ರಯತ್ನವೇ ನಡೆದಿಲ್ಲ ಎಂದು ದಿಬ್ಬಣ್ಣ ಶಾಸಕರಿಗೆ ಮನವಿ ನೀಡಿದರು.
 
      ಈವರೆಗೂ ನಗರದ ಬಹುತೇಕ ನಿರಾಶ್ರಿತರಿಗೆ ಸ್ವಂತದ್ದೊಂದು ಸೂರು ಕೂಡಾ ಇಲ್ಲದಂತಾಗಿದೆ. ನಗರಸಭೆಗೆ ನಿವೇಶನವನ್ನು ನೀಡುವಂತೆ ಸುಮಾರು 3600ಕ್ಕೂ ಹೆಚ್ಚು ಫಲಾನುಭವಿಗಳು ನಗರಸಭೆಗೆ ಹಾಗೂ ಹಿಂದಿನ ಶಾಸಕರು, ಸಚಿವರುಗಳಿಗೆ ಮನವಿ ಸಲ್ಲಿಸಿ ನಾಲ್ಕೈದು ವರ್ಷಗಳೆ ಸಂದಿವೆ ಎಂದು ವಿವಿಧ ವಾರ್ಡುಗಳ ಸಾರ್ವಜನಿಕರು ಶಾಸಕರಿಗೆ ದೂರು ನೀಡಿದರು.

      ಬೆಳಗ್ಗೆ 11 ಗಂಟೆಗೆ ಆರಂಭಗೊಂಡ ಜನಸ್ಪಂದನ ಸಭೆಯು ಸಂಜೆ 3 ಗಂಟೆಯವರೆಗೂ ನಡೆಯಿತಲ್ಲದೆ ಸದರಿ ಸಭೆಗೆ ಬಂದ ಬಹುತೇಕ ದೂರುಗಳು ನಿವೇಶನವನ್ನು ಕೋರಿದ ಅಹವಾಲುಗಳೇ ಆಗಿದ್ದವು. ಕಳೆದ ಎರಡು ವರ್ಷಗಳ ಹಿಂದೆಯೇ ಹಾಲಿ ನಗರಸಭೆಯ ಎಲ್ಲಾ ಸದಸ್ಯರು ಮಾಜಿ ಸದಸ್ಯರಾದ ಪರಿಣಾಮ ಎಲ್ಲಾ ವಾರ್ಡುಗಳಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸುವವರೇ ಇಲ್ಲವಾಗಿದೆ. ಈ ಬಗ್ಗೆ ಶಾಸಕರು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಪ್ರಬಲವಾದ ಕೋರಿಕೆಯೂ ಆಗಿತ್ತು.

      ಜನಸ್ಪಂದನ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ನಗರದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪದಂತಹ ಸಮಸ್ಯೆಗಳು ಹಾಗೂ ನಿವೇಶನ ಕೋರಿ ಬಂದಿರುವ ಅರ್ಜಿಗಳೆ ಹೆಚ್ಚಾಗಿದ್ದು, ಈ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

      ಸಭೆಯಲ್ಲಿ ತಹಸೀಲ್ದಾರ್ ಮಮತಾ, ಪೌರಾಯುಕ್ತ ಪರಮೇಶ್ವರಪ್ಪ, ನಗರ ಬಿಜೆಪಿ ಘಟಕದ ಅಧ್ಯಕ್ಷ ವಿಜಯರಾಜ್, ಎ.ಇ.ಇ. ಮಂಜುನಾಥ್ ಮುಂತಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap