ಶಿರಾ ಕೆ.ಡಿ.ಪಿ. ಸಭೆಯಲ್ಲಿ ಜಿಲ್ಲಾ ಸಚಿವರಿಂದ ಅಧಿಕಾರಿಗಳಿಗೆ ತರಾಟೆ

 ಶಿರಾ : 

      ಯಾವುದೇ ಕೆ.ಡಿ.ಪಿ. ಸಭೆಯಲ್ಲಿ ಸಭೆಗೂ ಮುನ್ನವೇ ಇಲಾಖೆಯ ಅಧಿಕಾರಿಗಳು ಪ್ರಗತಿಯ ವರದಿಗಳನ್ನು ಮುಂಚಿತವಾಗಿಯೇ ತಾ.ಪಂ. ಇಲಾಖೆಗೆ ನೀಡಿ ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಸ್ಪಷ್ಟವಾಗಿ ನೀಡಬೇಕಾದ್ದು ನಿಯಮವೂ ಹೌದು. ಆದರೆ ಶಿರಾ ತಾಲ್ಲೂಕಿನ ಎರಡು ಮತ್ತು ಮೂರನೇ ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಜಿಲ್ಲಾ ಅಧಿಕಾರಿಗಳು ಸಭೆಯ ಮುಂದಿಟ್ಟ ಅನೇಕ ಅಂಕಿ-ಅಂಶಗಳಿಂದ ಸಚಿವರು, ಶಾಸಕರುಗಳೇ ದಂಗಾದ ಪ್ರಸಂಗ ನಡೆಯಿತು.

      ನಗರದ ತಾಲ್ಲೂಕು ಪಂಚಾಯ್ತಿಯ ಸಭಾಂಗಣದಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ತ್ರೈಮಾಸಿಕ ಕೆ.ಡಿ.ಪಿ. ಸಭೆ ನಡೆಯಿತು. ಕ್ಷೇತ್ರ ಶಿಕ್ಷಣ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ವಲಯ ಅರಣ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯ ವರದಿಯಲ್ಲಿ ನೀಡಿದ್ದ ಅನೇಕ ಅಂಕಿ-ಅಂಶಗಳು ಒಂದಕ್ಕೊಂದು ತಾಳೆಯಾಗದ ಪರಿಣಾಮ ಜಿಲ್ಲಾ ಸಚಿವ ಮಾಧುಸ್ವಾಮಿ, ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ, ಎಂಎಲ್.ಸಿ.ಗಳಾದ ಚಿದಾನಂದ್ ಎಂ.ಗೌಡ, ಕೆ.ಎ.ತಿಪ್ಪೇಸ್ವಾಮಿ, ನಾರಾಯಣಸ್ವಾಮಿ ಸೇರಿದಂತೆ ಎಲ್ಲಾ ಶಾಸಕರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡದ್ದು ಸಭೆಯ ವಿಶೇಷವೂ ಆಗಿತ್ತು.
ಕ್ಷೇತ್ರ ಶಿಕ್ಷಣ ಇಲಾಖೆಯ ವರದಿಯಂತೆ ಅನುದಾನ ರಹಿತ, ಅನುದಾನ ಸಹಿತ ಹಾಗೂ ಖಾಸಗಿ ಶಾಲೆಗಳೂ ಮತ್ತು ಸರ್ಕಾರಿ ಶಾಲೆಗಳ ದಾಖಲಾತಿಯ ಸಂಖ್ಯೆಯಲ್ಲಿ ಬಾರೀ ಪ್ರಮಾಣದ ವ್ಯತ್ಯಾಸದ ಅಂಕಿ-ಅಂಶಗಳು ಕಂಡದ್ದರಿಂದ ಸದರಿ ಇಲಾಖೆಯ ಅಧಿಕಾರಿಗಳನ್ನು ಜಿಲ್ಲಾ ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡರೆ ಉಳಿದ ಎಲ್ಲಾ ಶಾಸಕರು ಕೂಡಾ ಸಚಿವರ ಅಂಕಿ-ಅಂಶದ ಪರಿಶೀಲನೆಯನ್ನು ನೋಡಿ ಸಂಬಂಧಿಸಿದ ಅಧಿಕಾರಿಯ ವಿರುದ್ಧ ಹರಿಹಾಯ್ದರು.

     ಅಂಕಿ-ಅಂಶಗಳನ್ನು ಕಂಪ್ಯೂಟರ್‍ನಲ್ಲಿ ಟೈಪ್ ಮಾಡುವಾಗ ಲೋಪವಾಗಿದೆ ಎಂದು ಬಿ.ಇ.ಓ. ತಮ್ಮ ತಪ್ಪನ್ನು ಒಪ್ಪಿಕೊಂಡರೆ ಇನ್ನೊಂದೆಡೆ ವಲಯ ಅರಣ್ಯ ಇಲಾಖೆಯ ವರದಿಯಲ್ಲೂ ವ್ಯಾಪಕ ತಪ್ಪುಗಳಾಗಿದ್ದವು. ಅರಣ್ಯ ಇಲಾಖೆಯ ವರದಿಯ ಅಂಕಿ-ಅಂಶಗಳಂತೆ ಕಳೆದ ಮೂರು ತಿಂಗಳಲ್ಲಿ ನಿರ್ಧಿಷ್ಟವಾದ ಗುರಿ ಹೊಂದಿದ ಜಮೀನುಗಳಲ್ಲಿ ಸಸಿ ನೆಡುವ ಸಂಬಂಧ ಖರ್ಚು ಮಾಡಿದ ಅನುಧಾನದ ಅಂಕಿ-ಅಂಶಗಳಲ್ಲಿ ವ್ಯತ್ಯಯ ಕಂಡು ಶಾಸಕರೆಲ್ಲರೂ ಅಚ್ಚರಿಪಟ್ಟರು.

ಕಳೆದ ಹತ್ತಾರು ವರ್ಷಗಳಿಂದಲೂ ಸಾಂಪ್ರದಾಯಿಕವೆಂಬಂತೆ ಹಳೆಯ ಅಂಕಿ-ಅಂಶಗಳನ್ನೇ ಸಭೆಗಳಿಗೆ ನೀಡಿ ನಮ್ಮನ್ನೆಲ್ಲಾ ಅನಕ್ಷರಸ್ಥರು ಅಂದುಕೊಂಡಿದ್ಧೀರಿ, ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುವುದನ್ನು ಮೊದಲು ಕಲಿಯಿರಿ ಎಂದು ಸಚಿವ ಮಾಧುಸ್ವಾಮಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

      ಅಸಮರ್ಪಕ ಅಂಕಿ-ಅಂಶಗಳನ್ನು ಸಭೆಗೆ ನೀಡಿ ಸಭೆಗೆ ಅಗೌರವ ತರಬೇಡಿ. ಸಭೆಗೆ ಬರುವ ಮುನ್ನ ಇಲಾಖೆಯ ಪ್ರಗತಿಯ ಸಮಗ್ರವಾದ ಮಾಹಿತಿಗಳನ್ನು ಅಧಿಕಾರಿಗಳು ಕ್ರೂಡೀಕರಿಸಿ ತರಬೇಕು. ಇಲ್ಲದಿದ್ದರೆ ಸಭೆಗೆ ಬರುವ ಅಗತ್ಯವೇ ಇಲ್ಲಾ ಎಂದು ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅಧಿಕಾರಿಗಳ ಮೇಲೆ ಕಿಡಿ ಕಾರಿದರು.

ಔಷಧಿ ಮಾರಾಟದ ಆರೋಪ: 

     ತಾಲ್ಲೂಕಿನ ಪಶುಪಾಲನಾ ಇಲಾಖೆಗೆ ಸರಬರಾಜಾಗುವ ಅದರಲ್ಲೂ ಕುರಿಗಾಯಿಗಳಿಗೆ ನೀಡಬೇಕಾದ ಉಚಿತ ಔಷಧಿಗಳನ್ನು ಅಧಿಕಾರಿಗಳೇ ಮಾರಾಟ ಮಾಡಿಕೊಳ್ಳುತ್ತಿರುವ ಬಗ್ಗೆ ವ್ಯಾಪಕವಾದ ದೂರುಗಳಿವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಸಭೆಯ ಗಮನಕ್ಕೆ ತಂದರು.

      ರೈತರು ಔಷಧಿಗಳಿಗಾಗಿ ಪಶು ಆಸ್ಪತ್ರೆಗೆ ಹೋದಾಗ ಔಷಧಿ ಸರಬರಾಜಿಲ್ಲ ಎಂದು ಕೆಲ ವೈದ್ಯರೇ ಹೇಳುತ್ತಿದ್ದು ಹಣ ಪೀಕಿದ ರೈತರಿಗೆ ಔಷಧಿ ನೀಡುವ ಪರಿಪಾಠವಿದೆ ಎಂಬ ದೂರುಗಳಿವೆ ಎಂದು ಶಾಸಕ ರಾಜೇಶ್‍ಗೌಡ ಪಶುಪಾಲನಾ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

     ಅಂತಹ ಯಾವುದೇ ಪ್ರಕರಣಗಳು ಇಲಾಖೆಯಲ್ಲಿ ನಡೆದಿಲ್ಲ. ಅರ್ಹ ರೈತರಿಗೆ ಉಚಿತ ಔಷಧಿ ನೀಡಲಾಗಿದೆ. ಒಂದು ವೇಳೆ ರೈತರನ್ನು ಅಗೌರವದಿಂದ ವೈದ್ಯರುಗಳು ಕಂಡಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ನಿರ್ದೇಶಕರು ತಿಳಿಸಿದರು.

ಯೋಜನೆಗಳು ಸದ್ಬಳಕೆ ಅಗತ್ಯ: 

      ಸರ್ಕಾರಿ ಆರೋಗ್ಯ ಇಲಾಖೆಯ ಅಧಿಕಾರಿಯು ಎಂದಿನಂತೆ ಮಲೇರಿಯಾ, ಟೈಪಾಯಿಡ್, ಟಿ.ಬಿ, ರ್ಯಾಬೀಸ್ ಔಷಧಿಯ ಬಗ್ಗೆ ಮಾಹಿತಿ ನೀಡಲು ಆರಂಭಿಸಿದಾಗ ವೈದ್ಯರ ಮಾತಿಗೆ ಕಡಿವಾಣ ಹಾಕಲು ಸೂಚಿಸಿದ ಜಿಲ್ಲಾ ಸಚಿವರು ಬರೀ ಹಳೆಯ ಪ್ಲೇಟ್ ಕೇಳಿ ಕೇಳಿ ಸಾಕಾಗಿದೆ. ಆರೋಗ್ಯ ಕೇಂದ್ರದ ಕರ್ತವ್ಯದಲ್ಲಿ ಹೊಸತನವನ್ನು ಮೊದಲು ಮೂಡಿಸಿ. ಕೇಂದ್ರ ಸರ್ಕಾರದ ಆಯಷ್ಮಾನ್ ಯೋಜನೆಯ ಅರಿವನ್ನು ಮೊದು ಜನರಿಗೆ ಮೂಡಿಸಿ. ಕೇಂದ್ರದ ಯೋಜನೆಗಳು ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಬಳಕೆಯಾಗುತ್ತಿಲ್ಲ ಎಂದು ತಿಳಿ ಹೇಳಿದರು.

     ಆಸ್ಪತ್ರೆಯ ಅಂಬುಲೆನ್ಸ್ ವಾಹನಗಳನ್ನು ಬಡ ರೋಗಿಗಳು ಜಿಲ್ಲಾಸ್ಪತ್ರೆಗೆ ತೆರಳಲು ಕೇಳಿದಾಗ ನೀಡದೆ ಖಾಸಗಿ ವಾಹನಗಳನ್ನು ಬಳಸುತ್ತಿರುವ ಆರೋಪವಿದೆ ಎಂದು ಶಾಸಕ ರಾಜೇಶ್‍ಗೌಡ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ವಯೋವೃದ್ಧರು ಚಿಕಿತ್ಸೆಗೆ ಬಂದಾಗ ನಿಮ್ಮ ವೈದ್ಯರಿಗೆ ಅವರನ್ನು ಗೌರವದಿಂದ ನಡೆದುಕೊಳ್ಳಲು ತಿಳಿ ಹೇಳಿ ಎಂದು ಸಲಹೆ ಮಾಡಿದರು.

ಸದ್ದು ಮಾಡಿದ ಓವರ್ ಹೆಡ್‍ಟ್ಯಾಂಕ್:

      ಸದರಿ ಕೆ.ಡಿ.ಪಿ. ಸಭೆಯಲ್ಲಿ ಕುಡಿಯುವ ನೀರಿನ ಓವರ್‍ಹೆಡ್ ಟ್ಯಾಂಕ್‍ಗಳ ಬಗ್ಗೆ ವ್ಯಾಪಕ ಚರ್ಚೆಯೇ ನಡೆಯಿತು. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಓವರ್‍ಹೆಡ್ ನೀರಿನ ಟ್ಯಾಂಕ್‍ಗಳಿದ್ದರೂ ಅನೇಕ ಟ್ಯಾಂಕ್‍ಗಳಿಗೆ ನೀರನ್ನೇ ಪೂರೈಸುತ್ತಿಲ್ಲ. ಕೆಲವೆಡೆ ಶಾಲೆಗಳ ಕಾಂಪೌಂಡ್‍ನಲ್ಲಿಯೇ ನೀರಿನ ಹಳೆಯ ಟ್ಯಾಂಕ್‍ಗಳು ಮಕ್ಕಳು ಓಡಾಡುವ ಸ್ಥಳದಲ್ಲಿಯೇ ಇದ್ದು ಕೂಡಲೇ ಕ್ರಮ ಕೈಗೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.
ಜಗಜೀವನರಾಮ್ ಮಿಷನ್ ಯೋಜನೆಯಲ್ಲಿ ಸಾಕಷ್ಟು ಅನುದಾನವಿದ್ದರೂ ಕುಡಿಯುವ ನೀರಿನ ಓವರ್‍ಹೆಡ್ ಟ್ಯಾಂಕ್‍ಗಳಿಗೆ ನೀರು ಪೂರೈಸುವ ಕೆಲಸ ನಡೆದಿಲ್ಲವೆಂಬುದು ನಮಗೆ ಅವಮಾನ ಮಾಡಿದಂತೆ. ಪ್ರತೀ ಗ್ರಾಮಕ್ಕೂ ಒಂದೊಂದು ಓವರ್‍ಹೆಡ್ ಟ್ಯಾಂಕ್ ಇರುವಂತೆ ಕ್ರಮ ಕೈಗೊಳ್ಳಿ. ಈ ಯೋಜನೆಯ ಅನುಧಾನವನ್ನು ಬಳಸಿಕೊಳ್ಳಿ. 15ನೇ ಹಣಕಾಸು ಯೋಜನೆಯ ಅನುಧಾನವನ್ನೂ ಬಳಿಸಿಕೊಳ್ಳಿ ಎಂದು ಸಚಿವ ಮಾಧುಸ್ವಾಮಿ ಅಧಿಕಾರಿಗೆ ಸಲಹೆ ಮಾಡಿದರು.

ಟೋಲ್‍ನಲ್ಲಿ ತಹಶೀಲ್ದಾರ್‍ಗೆ ನಿರ್ಭಂಧ:

      ತಾಲ್ಲೂಕಿನ ಕರೇ ಜವನಹಳ್ಳಿಯ ಐ.ಆರ್.ಬಿ. ಟೋಲ್‍ಗೇಟ್‍ನಲ್ಲಿ ಸರ್ಕಾರಿ ಇಲಾಖೆಯ ಅಧಿಕಾರಿಗಳಿಗೂ ಕೂಡಾ ಇಲಾಖಾ ವಾಹನದಲ್ಲಿ ತೆರಳುವಾಗ ಉಚಿತ ಸೇವೆಯನ್ನು ಈ ಟೋಲ್‍ನಲ್ಲಿ ನೀಡುತ್ತಿಲ್ಲವೆಂದು ಕುದ್ದಾಗಿ ತಾಲ್ಲೂಕು ದಂಡಾಧಿಕಾರಿಗಳೇ ಕೆ.ಡಿ.ಪಿ. ಸಭೆಯಲ್ಲಿ ಸಮಸ್ಯೆ ತೋಡಿಕೊಂಡ ಪ್ರಸಂಗ ನಡೆಯಿತು.

      ಕಳೆದ ಎರಡು ದಿನಗಳ ಹಿಂದಷ್ಟೆ ತಾಲ್ಲೂಕು ದಂಡಾಧಿಕಾರಿಗಳು ಸದರಿ ಟೋಲ್‍ನಲ್ಲಿ ಇಲಾಖೆಯ ವಾಹನದಲ್ಲಿ ಕೂತು ಹೋಗುತ್ತಿದ್ದಾಗ ನನ್ನ ಗುರುತಿನ ಚೀಟಿ ತೋರಿಸಿದರೂ ಉಚಿತ ಸೇವೆಯನ್ನು ನೀಡದೆ ಸತಾಯಿಸಿದ್ದಾರೆ. ಕೂಡಲೇ ತರಾಟೆಗೆ ತೆಗೆದುಕೊಂಡಿದ್ದೇನೆ ಎಂದರು.

      ತಹಶೀಲ್ದಾರ್ ನಿವೇದನೆಯನ್ನು ತೀಕ್ಷ್ಣವಾಗಿ ಪರಿಗಣಿಸಿದ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಸಭೆಯಲ್ಲಿ ಹಾಜರಿದ್ದ ಟೋಲ್‍ಗೇಟ್ ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಜನ ಸಾಮಾನ್ಯರ ಓಡಾಟಕ್ಕೆ ಶುಲ್ಕ ಪಡೆದುಕೊಳ್ಳುವುದು ಸರಿಯಷ್ಟೆ ಆದರೆ ತಾಲ್ಲೂಕಿನ ಸರ್ಕಾರಿ ಇಲಾಖೆಯ ಅಧಿಕಾರಿಗಳಿಗೆ ಅದರಲ್ಲೂ ದಂಡಾಧಿಕಾರಿಗಳಿಂದಲೇ ಟೋಲ್ ಶುಲ್ಕ ಪಾವತಿಸಲು ಒತ್ತಡ ಹೇರುವುದು ಎಷ್ಟರಮಟ್ಟಿಗೆ ಸರಿ ಎಂದರು.

      ಕರೇ ಜವನಹಳ್ಳಿ ಟೋಲ್‍ನಲ್ಲಿ ಟೋಲ್‍ನಿಂದ ಸಿಬ್ಬಂಧಿ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ನಿಯಮಾನುಸಾರ ನೀಡುವ ಯಾವುದೇ ಸೇವೆ ಲಭ್ಯವಾಗುತ್ತಿಲ್ಲ. ಈ ಸಂಬಂಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

      ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಸಂಸದ ಎ.ನಾರಾಯಣಸ್ವಾಮಿ, ತಾ.ಪಂ. ಅಧ್ಯಕ್ಷ ಚಂದ್ರಯ್ಯ, ಉಪಾಧ್ಯಕ್ಷ ರಂಗನಾಥಗೌಡ, ಸ್ಥಾಯಿ ಸಮಿತಿಯ ಅಧ್ಯಕ್ಷ ತಿಮ್ಮಯ್ಯ, ಜಿ.ಪಂ. ಸದಸ್ಯರಾದ ಶ್ರೀಮತಿ ಅಂಬುಜಾ ಎಸ್.ಆರ್.ಗೌಡ, ರಾಮಕೃಷ್ಣ, ಬೊಮ್ಮಣ್ಣತಾ.ಪಂ. ಇ.ಓ. ಲಕ್ಮಣ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
 
      ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಓವರ್‍ಹೆಡ್ ನೀರಿನ ಟ್ಯಾಂಕ್‍ಗಳಿದ್ದರೂ ಅನೇಕ ಟ್ಯಾಂಕ್‍ಗಳಿಗೆ ನೀರನ್ನೇ ಪೂರೈಸುತ್ತಿಲ್ಲ. ಕೆಲವೆಡೆ ಶಾಲೆಗಳ ಕಾಂಪೌಂಡ್‍ನಲ್ಲಿಯೇ ನೀರಿನ ಹಳೆಯ ಟ್ಯಾಂಕ್‍ಗಳು ಮಕ್ಕಳು ಓಡಾಡುವ ಸ್ಥಳದಲ್ಲಿಯೇ ಇದ್ದು ಕೂಡಲೇ ಕ್ರಮ ಕೈಗೊಳ್ಳಿ.

-ಚಿದಾನಂದ್ ಎಂ.ಗೌಡ, ವಿಧಾನಪರಿಷತ್ ಸದಸ್ಯ

 
      ಅಸಮರ್ಪಕ ಅಂಕಿ-ಅಂಶಗಳನ್ನು ಸಭೆಗೆ ನೀಡಿ ಸಭೆಗೆ ಅಗೌರವ ತರಬೇಡಿ. ಸಭೆಗೆ ಬರುವ ಮುನ್ನ ಇಲಾಖೆಯ ಪ್ರಗತಿಯ ಸಮಗ್ರವಾದ ಮಾಹಿತಿಗಳನ್ನು ಅಧಿಕಾರಿಗಳು ಕ್ರೂಡೀಕರಿಸಿ ತರಬೇಕು. ಇಲ್ಲದಿದ್ದರೆ ಸಭೆಗೆ ಬರುವ ಅಗತ್ಯವೇ ಇಲ್ಲಾ.

-ಕೆ.ಎ.ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap