ಶಿರಾ :
ನಗರದ ಬರಗೂರು ರಾಮಚಂದ್ರಪ್ಪ ಬಯಲುರಂಗ ಮಂದಿರದ ಆವರಣದಲ್ಲಿ ಭಾನುವಾರ ಜೆಡಿಎಸ್ ಪಕ್ಷದಿಂದ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮತ ನೀಡುವಂತೆ ಮತದಾರರನ್ನು ಸೆರಗೊಡ್ಡಿ ಬೇಡಿದ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಬಿ.ಸತ್ಯನಾರಾಯಣ್ ತಲೆ ಸುತ್ತು ಬಂದು ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಘಟನೆಯೂ ನಡೆಯಿತು.
ಬೆಳಗ್ಗೆ 11 ಗಂಟೆಗೆ ಸಹಸ್ರಾರು ಕಾರ್ಯಕರ್ತರ ಬೃಹತ್ ರ್ಯಾಲಿ ಶಿರಾ ನಗರದ ಪ್ರವಾಸಿ ಮಂದಿರದಿಂದ ಆರಂಭಗೊಂಡಿತು. ಸದರಿ ರ್ಯಾಲಿಯಲ್ಲಿ ಅಮ್ಮಾಜಮ್ಮ ಕೂಡ ಪಾಲ್ಗೊಂಡಿದ್ದರು. ಮಧ್ಯಾಹ್ನ 3 ಗಂಟೆಯವರೆಗೂ ನಡೆದ ರ್ಯಾಲಿಯ ನಂತರ ಬಯಲುರಂಗ ಮಂದಿರದ ಆವರಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ತಮ್ಮ ಸೆರಗನ್ನು ಒಡ್ಡಿ ಮತ ಯಾಚನೆ ಮಾಡಿದ ಅಮ್ಮಾಜಮ್ಮ, ನನ್ನ ಪತಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ನಿಮ್ಮ ಮನೆ ಮಗಳಿಗೆ ಮತ ಹಾಕಿ ಎಂದು ಸೆರಗು ಒಡ್ಡಿದರು.
ಕೆಲ ನಿಮಿಷಗಳ ನಂತರ ಕೈ ಮುಗಿದುಕೊಂಡು ನಿಂತಿದ್ದ ಅಮ್ಮಾಜಮ್ಮ ದಿಢೀರನೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದದ್ದರಿಂದ ಇಡೀ ಸಭೆಯಲ್ಲಿ ಒಂದು ರೀತಿಯ ಆತಂಕವೂ ಸೃಷ್ಟಿಯಾಯಿತು. ಸಭೆಯಲ್ಲಿಯೇ ಇದ್ದ ಕೆಲ ವೈದ್ಯರು ಅಭ್ಯರ್ಥಿಯ ನಾಡಿ ಮಿಡಿತ ಪರೀಕ್ಷಿಸಿ ಕೂಡಲೇ ಆಸ್ಪತ್ರೆಗೆ ಕಳುಹಿಸುವ ಸಲಹೆ ಮಾಡಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮ್ಮಾಜಮ್ಮ ಗುಣಮುಖವಾಗಿದ್ದಾರೆಂಬ ಮಾಹಿತಿ ಸಭೆಗೆ ಬಂದು ಪಕ್ಷದ ಕಾರ್ಯಕರ್ತ-ಮುಖಂಡರಿಗೆ ನೆಮ್ಮದಿ ತಂದಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
