ಶೇಂಗಾ ಅಭಿವೃದ್ಧಿ ಪ್ರಾಧಿಕಾರ : ಮೇಲ್ಮನೆಯಲ್ಲಿ ಬೇಡಿಕೆ ಸಲ್ಲಿಸಲಾಗುವುದು

 ಶಿರಾ : 

      ಶಿರಾ ಭಾಗವು ಶೇಂಗಾ ಬೆಳೆಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದು ಈ ಭಾಗದ ರೈತರ ಜೀವನಾಡಿಯೇ ಶೇಂಗಾ ಆಗಿದೆ. ಸಂಕಷ್ಟದ ಸ್ಥಿತಿಯಲ್ಲೂ ಎಣ್ಣೆ ಬೀಜದ ಬೆಳೆ ಬೆಳೆಯುವ ರೈತರ ಹಿತ ಕಾಯುವುದು ಸರ್ಕಾರದ ಕರ್ತವ್ಯವೂ ಹೌದು. ಈ ಹಿನ್ನೆಲೆಯಲ್ಲಿ ಶೇಂಗಾ ಬೆಳೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತೆ ಮೇಲ್ಮನೆಯಲ್ಲಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ತಿಳಿಸಿದರು.

      ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸಾರ್ವಜನಿಕರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ರೈತರೊಂದಿಗೆ ನಡೆದ ಸಮಾಲೋಚನೆಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

      ಮಳೆ-ಬೆಳೆಗಳ ವೈಫಲ್ಯದ ನಡುವೆಯೂ ಈ ಬರದ ನಾಡಿನ ರೈತರು ಹೆಕ್ಟೇರ್‍ಗೆ 60-70 ಸಾವಿರ ರೂ.ಗಳನ್ನು ಖರ್ಚು ಮಾಡಿ ಶೇಂಗಾ ಬೆಳೆಯುತ್ತಾರೆ. ಲಾಭವೂ ಬಾರದೆ ರೈತರು ಸಂಕಷ್ಟಕ್ಕೆ ಸಿಲುಕಿದರೂ ಶೇಂಗಾ ಬೆಳೆಯನ್ನು ಬೆಳೆದು ಎಣ್ಣೆ ಬೀಜದ ಬವಣೆಯನ್ನು ನೀಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶೇಂಗಾ ಅಭಿವೃದ್ಧಿ ಪ್ರಾಧಿಕಾರ ರಚನೆಯಾದಲ್ಲಿ ರೈತರ ಸಂಕಷ್ಟ ನಿವಾರಣೆಯಾಗಬಲ್ಲದಾದ್ದರಿಂದ ಸರ್ಕಾರಕ್ಕೆ ಈ ಬಗ್ಗೆ ಮೇಲ್ಮನೆಯ ಅಧಿವೇಶದಲ್ಲಿ ಬೇಡಿಕೆ ಸಲ್ಲಿಸಲಾಗುವುದು ಎಂದರು.

      ಸಮಾಲೋಚನಾ ಸಭೆಯಲ್ಲಿ ಸಾರ್ವಜನಿಕರು ಸಾಕಷ್ಟು ಬೇಡಿಕೆಗಳನ್ನಿಟ್ಟಿದ್ದಾರೆ. ನೀರಾವರಿಗೆ ಸಂಬಂಧಿಸಿದ ಬೇಡಿಕೆಗಳನ್ನೂ ರೈತರು ನಿವೇದನೆ ಮಾಡಿಕೊಂಡಿದ್ದಾರೆ. ಅಪ್ಪರ್ ಭದ್ರಾ ಯೋಜನೆಯ ಕಾಮಗಾರಿ ಇನ್ನು 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಈ ಯೋಜನೆಯಿಂದ 64 ಕೆರೆಗಳು ಸೌಲಭ್ಯ ಪಡೆಯಲಿವೆ ಎಂದರು.

      ಶಿರಾ ಭಾಗದ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸುವ ಪ್ರಮಾಣವನ್ನು ನಿಗದಿಗೊಳಿಸಬೇಕಿದೆ. ಈಗಾಗಲೆ 2800 ಹೆಕ್ಟೇರ್ ರೈತರ ಜಮೀನಿನ ಪೈಕಿ 800 ಹೆಕ್ಟೇರ್ ಜಮೀನನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡು ಕೈಗಾರಿಕೆಗಳ ಅಭಿವೃದ್ಧಿ ಕೈಗೊಂಡಿದೆ. ಉಳಿದ 2000 ಹೆ. ಜಮೀನನ್ನು ಪಡೆದುಕೊಂಡು ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಮೂಲಕ ಈ ಭಾಗದ ನಿರುದ್ಯೋಗಿಗಳಿಗೂ ಉದ್ಯೋಗದ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮೇಲ್ಮನೆಯಲ್ಲಿ ಮನವಿ ಮಾಡಲಾಗುವುದು ಎಂದು ಚಿದಾನಂದ್ ಎಂ.ಗೌಡ ತಿಳಿಸಿದರು.

      ಅರಣ್ಯ, ಬಗರ್‍ಹುಕುಂ ಜಮೀನಿನ ಸಾಗುವಳಿ ಚೀಟಿಯ ಮಂಜೂರಾತಿ, ವಸತಿ ಯೋಜನೆಯಡಿಯಲ್ಲಿ ಅರ್ಹರಿಗೆ ನಿವೇಶನ ಸಂಬಂಧವೂ ಸಾರ್ವಜನಿಕರು ತಮ್ಮ ಮನವಿ ಸಲ್ಲಿಸಿ ಮೇಲ್ಮನೆಯ ಅಧಿವೇಶನದಲ್ಲಿ ಸರ್ಕಾರಕ್ಕೆ ಮನವಿ ಮಾಡುವಂತೆ ನಮ್ಮಲ್ಲಿ ಕೋರಿಕೊಂಡಿದ್ದಾರೆ ಎಂದು ಚಿದಾನಂದ್ ತಿಳಿಸಿದರು.

      ಗ್ರಾಮಾಂತರ ಘಟಕದ ಬಿ.ಜೆ.ಪಿ. ಅಧ್ಯಕ್ಷ ರಂಗಸ್ವಾಮಿ, ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ಉಮೇಶ್, ಹೊನ್ನಗೊಂಡನಹಳ್ಳಿ ಚಿಕ್ಕಣ್ಣ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap