ಶಿರಾ :
ಕಳವು ಮಾಡಿದ ಚಿನ್ನಾಭರಣಗಳನ್ನು ಕೊಂಡುಕೊಳ್ಳದಿದ್ದರೂ ವಿನಾ ಕಾರಣ ಶಿರಾ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸುಳ್ಳು ಆರೋಪ ಮಾಡಿ ಕಿರುಕುಳ ನೀಡುತ್ತಿದ್ದಾರೆಂದು ರಾಜ್ಯ ಚಿನ್ನಾಭರಣ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಬಿ.ರಾಮಾಚಾರಿ ಆರೋಪಿಸಿದ್ದಾರೆ.
ನಗರದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೆಲ ಚಿನ್ನಬೆಳ್ಳಿ ವ್ಯಾಪಾರಿಗಳ ಅಂಗಡಿಗಳಿಗೆ ಓರ್ವ ಮಹಿಳಾ ಆರೋಪಿಯನ್ನು ಕರೆದುಕೊಂಡು ಬಂದ ನಗರದ ಆರಕ್ಷಕ ಸಿಬ್ಬಂದಿ ಕಳವು ಪ್ರಕರಣದ ಚಿನ್ನವನ್ನು ನಿಮಗೆ ಈಕೆ ಮಾರಾಟ ಮಾಡಿದ್ದಾಳೆಂದು, ಸೆಟಲ್‍ಮೆಂಟ್ ಹೆಸರಿನಲ್ಲಿ ನಗದು ಹಣಕ್ಕಾಗಿ ಒತ್ತಾಯಿಸಿ ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆಂದು ಅವರು ಆರೋಪಿಸಿದರು.
ನಗರದ ಸುಬ್ರ್ರಹ್ಮಣೇಶ್ವರ ಜ್ಯುಯಲರ್ಸ್‍ನ ವೀರಬ್ರಹ್ಮಾಚಾರ್, ಮಾರುತಿ ಪ್ರಸಾದ್ ಜ್ಯುಯಲರ್ಸ್‍ನ ಸುನೀಲ್‍ಕುಮಾರ್ ಎಂಬ ಮಾಲೀಕರ ಬಳಿ ಬಂದು ಡಿವೈಎಸ್‍ಪಿ ಕುಮಾರಪ್ಪ, ಸಿ.ಪಿ.ಐ. ಹನುಮಂತಪ್ಪ ಸೇರಿದಂತೆ ಠಾಣೆಯ ಸಿಬ್ಬಂದಿ ಕಳವು ಚಿನ್ನಾಭರಣ ಕೊಂಡ ಬಗ್ಗೆ ಸುಳ್ಳು ಆರೋಪ ಹೊರಿಸಿ ಹಣ ಪೀಕಲು ಸಂಚು ನಡೆಸಿದ್ದಾರೆಂದು ದೂರಿದರು.
ಪೊಲೀಸರೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ರಾಜ್ಯ ಸಂಘವು ಸರ್ಕಾರಕ್ಕೆ ದೂರು ಸಲ್ಲಿಸಿದ್ದು, ಅಪರಿಚಿತ ಮಹಿಳೆಯನ್ನು ಮುಂದೆ ಇಟ್ಟುಕೊಂಡು 15-20 ದಿನಗಳಿಂದಲೂ ಒಂದೇ ಎಫ್‍ಐಆರ್‍ನ್ನು ತೋರಿಸಿ ಶಿರಾ ಸೇರಿದಂತೆ ಇನ್ನಿತರ ಪ್ರದೇಶಗಳ ಚಿನ್ನ ಬೆಳ್ಳಿ ವ್ಯಾಪಾರಿಗಳಿಂದ ಲಕ್ಷಾಂತರ ರೂ.ಗಳ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ದೂರಿದರು.
ಕಾನೂನಿನ ಪ್ರಕಾರ ಸುಪ್ರೀಂ ಕೋರ್ಟ್‍ನ ಆದೇಶದ ಪ್ರಕಾರ ನಡೆದುಕೊಳ್ಳದೆ, ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಬಂಧಿಸಿದ ಕೂಡಲೇ ಸ್ಥಳೀಯ ನ್ಯಾಯಾಲಯಕ್ಕೂ ಹಾಜರುಪಡಿಸದೆ, ನ್ಯಾಯಾಲಯದ ಅನುಮತಿಯನ್ನೂ ಪಡೆಯದೆ, ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಸುಳ್ಳು ಪ್ರಕರಣಗಳಿಗೆ ಸಿಲುಕಿಸಿ ಜೈಲಿಗೆ ಕಳುಹಿಸುವುದಾಗಿಯೂ ಶಿರಾ ನಗರ ಠಾಣೆಯ ಅಧಿಕಾರಿಗಳು ವರ್ತಕರನ್ನು ಬೆದರಿಸುತ್ತಿದ್ದಾರೆ. ಇಂತಹ ಅನೇಕ ಪ್ರಕರಣಗಳಲ್ಲಿ ಚಿನ್ನಬೆಳ್ಳಿ ವ್ಯಾಪಾರಿಗಳನ್ನು ಸಿಲುಕಿಸುವ ಪ್ರಯತ್ನ ನಡೆದಿದ್ದು, ಈ ಕೂಡಲೆ ಸಿಬಿಐ ತನಿಖೆ ಕೈಗೊಂಡು ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಜ್ಯುಯಲರ್ಸ್ ಫೆಡರೇಷನ್ ಒತ್ತಾಯಿಸಿದೆ.
ತಾಲ್ಲೂಕು ಸಂಘದ ಅಧ್ಯಕ್ಷ ಹೆಚ್.ಕೆ.ನಟರಾಜಾಚಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್, ಖಜಾಂಚಿ ಶಶಿಧರಾಚಾರ್, ರಾಜ್ಯ ಫೆಡರೇಷನ್ ಖಜಾಂಚಿ ಚಂದ್ರಶೇಖರ್, ನಿರ್ದೇಶಕರಾದ ಕೃಷ್ಣಾಚಾರ್, ನರಸಿಂಹಾಚಾರ್, ಬ್ರಹ್ಮಾಚಾರ್, ಮಲ್ಲಿಕಾರ್ಜುನಾಚಾರ್, ಹನುಮಂತಾಚಾರ್, ಯಶೋದಮ್ಮ ಸೇರಿದಂತೆ ಸಂಘದ ಅನೇಕ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ