ಹಾಗಲವಾಡಿ ಕೆರೆಗೆ ಹೇಮಾವತಿ ನೀರು ಹರಿಸುವ ಯೋಜನ ವಿಳಂಬ

 ಗುಬ್ಬಿ : 

      ತಾಲ್ಲೂಕಿನ ಹಾಗಲವಾಡಿ ಕೆರೆಗೆ ಹೇಮಾವತಿ ನೀರು ಹರಿಸುವ ಯೋಜನೆ ಕಳೆದ ಐದು ವರ್ಷದಿಂದ ಮಂದಗತಿಯಲ್ಲಿ ಸಾಗುತ್ತಿದ್ದು ಸಂಪೂರ್ಣ ಹಳ್ಳ ಹಿಡಿಯುವ ಆತಂಕ ಸುಮಾರು 36 ಗ್ರಾಮಗಳ ಜನರಲ್ಲಿ ಮೂಡಿದೆ. ಈ ಬಗ್ಗೆ ನಿರ್ಲಕ್ಷ್ಯವಹಿಸಿರುವ ಹೇಮಾವತಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶೀಘ್ರದಲ್ಲಿ ಕಾಮಗಾರಿ ಆರಂಭಿಸದಿದ್ದರೆ ಉಗ್ರ ಹೋರಾಟ ನಡೆಸಲು ಚಿಂತಿಸಲಾಗಿದೆ ಎಂದು ಹಾಗ¯ವಾಡಿ ಕುಡಿಯುವ ನೀರಿನ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

      ತಾಲ್ಲೂಕಿನ ನಿಟ್ಟೂರು ಹೋಬಳಿ ಭೋಗಸಂದ್ರ ಗ್ರಾಮದ ಕೆರೆ ಹಿಂಬದಿ ನಡೆದಿರುವ ಆಮೆಗತಿಯ ಕಾಮಗಾರಿ ಸ್ಥಳದಲ್ಲಿ ಎಚ್ಚರಿಕೆ ನೀಡಿದ ಹೋರಾಟ ಸಮಿತಿ 11 ಕೋಟಿ ರೂಗಳ ಮೂಲಕ ಆರಂಭವಾದ ಹಾಗಲವಾಡಿ ನೀರು ಯೋಜನೆಯು ಮೊದಲಿನಿಂದಲೂ ನೂರೆಂಟು ವಿಘ್ನ ಎದುರಿಸಿಕೊಂಡೇ ನಡೆದಿದೆ. ಕೆಲ ತಾಂತ್ರಿಕ ಸಮಸ್ಯೆ ಬಂದಾಗ ಬಗೆಹರಿಸುವಲ್ಲಿ ಆಸಕ್ತಿ ವಹಿಸದ ಅಧಿಕಾರಿಗಳು ಯೋಜನೆಯನ್ನೇ ಕೈ ಬಿಡುವ ಸಾಧ್ಯತೆ ಮೂಡಿಸಿದ್ದರು. ಈ ಯೋಜನೆಗೆ ಹೋರಾಟವನ್ನೇ ನಡೆಸಿಕೊಂಡು ಕಳೆದ ಐದು ವರ್ಷದ ಹಿಂದೆ ಮಂಜೂರಾತಿ ನಡೆಸಿ ಕಾಮಗಾರಿ ಆರಂಭಿಸಿದರೆ ಇನ್ನೂ ಕೆಲಸಕ್ಕೆ ಕಾಯಕಲ್ಪ ಸಿಕ್ಕಿಲ್ಲ. ನಿಧಾನಗತಿಯಲ್ಲಿ ವಾರಕೊಮ್ಮೆ ಕೆಲಸ ನಡೆದಿದೆ ಎಂದು ಕಿಡಿಕಾರಿದರು.

      ಹಾಗಲವಾಡಿ ಕುಡಿಯುವ ನೀರಿನ ಹೋರಾಟ ಸಮಿತಿ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಹಾಗಲವಾಡಿ ಭಾಗವು ಬರಪೀಡಿತ ಪ್ರದೇಶವೆನಿಸಿದೆ. ಹೇಮಾವತಿ ನೀರು ತರುವುದು ಕಷ್ಟ ಎನಿಸಿದ್ದ ಸಂದರ್ಭದಲ್ಲಿ ಹೋರಾಟ ಮೂಲಕ ಅಸ್ತು ಪಡೆಯಲಾಯಿತು. ಹೋರಾಟದ ಫಲ ಸಾರ್ಥಕವೆನಿಸಿಕೊಳ್ಳುವ ಹಂತದಲ್ಲಿ ಕಾಮಗಾರಿ ವಿಳಂಬವಾಗಿದೆ ಎಂದರು.

      ಸಮಿತಿ ಸದಸ್ಯ ಡಾ.ರಾಜ್‍ಗೋಪಾಲ್ ಮಾತನಾಡಿ ಹಾಗಲವಾಡಿ ಕೆರೆಗೆ ನೀರಿಲ್ಲದೇ ಕೃಷಿ ಚಟುವಟಿಕೆ ನಿಂತಿದೆ. ಫಲವತ್ತಾಗಿದ್ದ ತೆಂಗು ಅಡಕೆಮರಗಳು ಒಣಗಿ ನಿಂತಿದೆ. 1500 ಅಡಿಗಳ ಆಳದಲ್ಲಿ ಅಂತರ್ಜಲ ಹುಡುಕಾಟ ನಡೆದಿದೆ. ಹೀಗೆ ಸಾಗಿದ್ದಲ್ಲಿ ಹಾಗಲವಾಡಿ ಸುತ್ತಲಿನ 36 ಗ್ರಾಮಸ್ಥರು ಗುಳೆ ಹೊರಡಬೇಕಾಗುತ್ತದೆ. ಹೇಮಾವತಿ ನೀರು ನಂಬಿ ಕಾದು ಕುಳಿತ ಈ ಭಾಗದ ಮುಗ್ದ ಜನರನ್ನು ಚುನಾವಣೆಗೆ ಮಾತ್ರ ಬಳಸಿಕೊಳ್ಳದೇ ಅಭಿವೃದ್ದಿಗೆ ಸಹಕರಿಸಿ. ಶೀಘ್ರದಲ್ಲಿ ಕಾಮಗಾರಿ ಚುರುಕುಗೊಳಿಸಿ ಹಾಗಲವಾಡಿ ಕೆರೆಗೆ ನೀರು ಹರಿಸಿ ಎಂದು ಆಗ್ರಹಿಸಿದರು.

      ಮುಖಂಡ ಅಪ್ಪಣ್ಣಹಳ್ಳಿ ಗುರುಮೂರ್ತಿ ಮಾತನಾಡಿ, ಹಾಗಲವಾಡಿ ಕೆರೆಗೆ ನೀರು ಹರಿಸುವ ಕಾಮಗಾರಿ ಪೂರ್ಣಗೊಳ್ಳುವ ಮುನ್ನ ಯಾವ ಕೆರೆಗೂ ನೀರು ಹರಿಸುವಂತಿಲ್ಲ. ಆದರೆ ಪ್ರಭಾವಿಗಳ ಶಿಫಾರಸ್ಸಿನಲ್ಲಿ ಭೋಗಸಂದ್ರ ಕೆರೆಗೆ ನೀರು ಹರಿಸಲಾಗುತ್ತಿದೆ. ಹಾಗಲವಾಡಿ ಕೆರೆಗೆ ನೀರು ಹರಿಯುವವರೆಗೆ ಬೇರೆ ಕೆರೆಗೆ ನೀರು ಹರಿಸದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

      ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಲೋಕೇಶ್, ಶಿವಾನಂದ್, ಕುಮಾರ್, ಗುರುಪಾದಯ್ಯ, ಉಮೇಶ್, ಸಿದ್ದಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap