ಶಿರಾ : ಕೋವಿಡ್ ಪ್ರಕರಣಗಳನ್ನು ನಿಭಾಯಿಸುವಲ್ಲಿ ತಾಲ್ಲೂಕು ಆಡಳಿತ ವಿಫಲ

ಶಿರಾ :

      ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಾ ನಡೆದಂತೆ ಇದೀಗ ಜಿಲ್ಲೆಯ ಶಿರಾ ತಾಲ್ಲೂಕಿನಲ್ಲೂ ಕೋವಿಡ್ ಪ್ರಕರಣಗಳು ವ್ಯಾಪಕವಾಗಿ ಹರಡುವ ಎಲ್ಲಾ ಸೂಚನೆಗಳು ಕಂಡು ಬಂದಿವೆ.

      ಕಳೆದ ಎರಡು ದಿನಗಳ ಲಾಕ್‍ಡೌನ್ ನಂತರದಲ್ಲಾದರೂ ಪ್ರಕರಣಗಳ ಸಂಖ್ಯೆ ಇಳಿಮುಖವಾಗಬಹುದೆಂಬ ನಂಬಿಕೆ ಇದ್ದಿತಾದರೂ ಪ್ರಕರಣಗಳು ಇಳಿಮುಖವಾಗುವ ಸೂಚನೆಯಂತೂ ಕಾಣ ಬರುತ್ತಿಲ್ಲ. ಕೋವಿಡ್ ನಿಯಮಗಳನ್ನು ಸಾರ್ವಜನಿಕರು ಪಾಲಿಸುತ್ತಿಲ್ಲವೋ ಅಥವಾ ತಾಲ್ಲೂಕು ಮಟ್ಟದ ಆರೋಗ್ಯ ಇಲಾಖೆಯೇ ಕೈಚೆಲ್ಲಿ ಕೂತಿದೆಯೊ, ಇಲ್ಲವೇ ಇಡೀ ತಾಲ್ಲೂಕು ಆಡಳಿತದ ನಿರ್ಲಕ್ಷ್ಯವೋ ಒಟ್ಟಾರೆ ಆರೋಗ್ಯ ಇಲಾಖೆಗೆ ವ್ಯಾಪಕವಾಗಿ ಸಾರ್ವಜನಿಕರು ಹಿಡಿ ಶಾಪ ಹಾಕುವಂತಹ ವಾತಾವರಣವಂತೂ ಸೃಷ್ಟಿಯಾಗಿದೆ.

      ದಿನ ನಿತ್ಯ ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 300 ರಿಂದ 400 ಕ್ಕೂ ಹೆಚ್ಚು ಸ್ವಾಬ್ ಟೆಸ್ಟ್‍ಗಳನ್ನು ಮಾಡಲಾಗುತ್ತಿದ್ದು, ದಿನ ಬೆಳಗಾದರೆ ಸಾಕು ಜ್ವರ, ಕೆಮ್ಮು, ಗಂಟಲು ನೋವುಗಳಿಂದ ಸಾರ್ವಜನಿಕರು ಕೋವಿಡ್ ಟೆಸ್ಟ್‍ಗೆ ಸರದಿಯ ಸಾಲಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ. ಕಳೆದ ನಾಲ್ಕೈದು ದಿನಗಳಲ್ಲಿ ಶಿರಾ ತಾಲ್ಲೂಕಿನಲ್ಲಿ ಒಟ್ಟು ಐವರು ಕೋವಿಡ್‍ನಿಂದ ಮೃತಪಟ್ಟಿದ್ದು, ಬರದ ನಾಡಿನ ಜನತೆಯಲ್ಲಿ ಇದೀಗ ಆತಂಕ ಮನೆ ಮಾಡಿದೆ. ಕೋವಿಡ್ ಪರೀಕ್ಷೆಗಳು ನಿರಂತರವಾಗಿ ನಡೆಯುತ್ತಿದ್ದು, ನೆಗೆಟೀವ್‍ಗಿಂತಲೂ ಪಾಸಿಟೀವ್ ಪ್ರಕರಣಗಳೇ ಹೆಚ್ಚಾಗುತ್ತಿದ್ದು, ಪಾಸಿಟೀವ್ ಬಂದವರನ್ನು ಹೋಂ ಕ್ವಾರಂಟೈನ್‍ನಲ್ಲಿಡಲು ವೈದ್ಯರು ಸೂಚಿಸುತ್ತಿದ್ದಾರೆ.

      ಕಳೆದ ಒಂದು ವಾರದಿಂದಲೂ ಪಾಸಿಟೀವ್ ಬಂದವರಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಔಷಧಿಯನ್ನು ಸರಿಯಾಗಿ ನೀಡದೆ ವೈದ್ಯರು ಖಾಸಗಿ ಔಷಧಿ ಅಂಗಡಿಗಳಿಗೆ ಚೀಟಿ ಬರೆದುಕೊಡುತ್ತಿರುವ ಪ್ರಕರಣಗಳು ಕೂಡ ಹೆಚ್ಚಾಗಿವೆ. ಪಾಸಿಟೀವ್ ಬಂದ ರೋಗಿಗಳು ವೈದ್ಯರು ಬರೆದುಕೊಟ್ಟ ಔಷಧಿ ಚೀಟಿಯೊಂದಿಗೆ ಖಾಸಗಿ ಮೆಡಿಕಲ್ ಶಾಪ್‍ಗಳಿಗೆ ಹೋಗುತ್ತಿದ್ದು, ಔಷಧಿ ಚೀಟಿಯನ್ನು ನೋಡಿದ ಖಾಸಗಿ ಔಷಧಿ ವ್ಯಾಪಾರಿಗಳು ಕೂಡ ಭಯಭೀತರಾಗಿಯೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಔಷಧಿ ನೀಡುವಂತಾಗಿದೆ.
ಕೋವಿಡ್ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಉಚಿತ ಔಷಧಿ ನೀಡುವುದಾಗಿ ಸರ್ಕಾರ ಬಡಾಯಿ ಕೊಚ್ಚಿಕೊಳ್ಳುತ್ತಿದೆಯಾದರೂ ವೈದ್ಯರುಗಳು ಖಾಸಗಿ ಔಷಧಿ ಅಂಗಡಿಗಳತ್ತ ಬೆರಳು ಮಾಡಿ ಚೀಟಿ ಕೊಡುತ್ತಿರುವುದು ನಿಜಕ್ಕೂ ವಿಪರ್ಯಾಸವೂ ಆಗಿದೆ.

ಕೋವಿಡ್ ರೋಗಿಗಳು ಔಷಧಿಗಳನ್ನು ಪಡೆದುಕೊಂಡು ಮನೆಯಲ್ಲಿಯೇ ಕ್ವಾರಂಟೈನ್ ಆಗುವ ಮೂಲಕ ತಮ್ಮ ಕುಟುಂಬಕ್ಕೂ ಎಚ್ಚರಿಕೆಯ ಗಂಟೆಯಾಗಿ ವರ್ತಿಸಬೇಕು. ನಿಜ, ಆದರೆ, ಪಾಸಿಟೀವ್ ಬಂದ ಅನೇಕ ರೋಗಿಗಳು ಮೇಲ್ನೋಟಕ್ಕೆ ಗುಣಮುಖರಾದ ಕೂಡಲೇ ಕ್ವಾರಂಟೈನ್ ನಿಯಮಗಳನ್ನೂ ಗಾಳಿಗೆ ತೂರಿ ನಗರದಲ್ಲಿ ಓಡಾಡಿಕೊಂಡಿರುವ ಕಾರಣದಿಂದಾಗಿ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

      ಈವರೆಗೆ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಾವಾಗಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿಕೊಂಡು ಹೋಗುತ್ತಿದ್ದ ಅನೇಕ ವೈದ್ಯರು ಈಗ ಆಸ್ಪತ್ರೆಯೊಳಕ್ಕೆ ಬರುವಾಗಲೇ ಮೀನಾ-ಮೇಷ ಎಣಿಸಿಕೊಂಡೆ ಬರುವ ನಿರ್ಲಕ್ಷ್ಯ ಭಾವನೆಗಳು ಅಭಿವ್ಯಕ್ತಗೊಳ್ಳುತ್ತಿವೆ. ಈ ನಡುವೆ ಬೆರಳೆಣಿಕೆಯ ಸರ್ಕಾರಿ ವೈದ್ಯರು ಮಾತ್ರ ್ರ ದೇವರೇ ದಿಕ್ಕೆಂದು ಕರ್ತವ್ಯ ನಿರ್ವಹಿಸುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಕೆಲ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದರೂ ಆಸ್ಪತ್ರೆಯ ಆಜುಬಾಜಿನಲ್ಲಿಯೇ ಸುಖಾ ಸುಮ್ಮನೆ ಓಡಾಡಿಕೊಂಡಿದ್ದರೂ ರೋಗಿಗಳನ್ನು ಮುಟ್ಟುವ ಗೋಜಿಗೂ ಹೋಗುತ್ತಿಲ್ಲ.

      ಕೋವಿಡ್ ವ್ಯಾಕ್ಸಿನೇಷನ್ ಉಚಿತವಾಗಿ ನೀಡುತ್ತಿದ್ದು ಸಾರ್ವಜನಿಕರು ಆಸ್ಪತ್ರೆಗೆ ತೆರಳಿ ತಪ್ಪದೆ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವಂತೆ ಸರ್ಕಾರ ಸಲಹೆ ನೀಡುತ್ತಿದೆಯಾದರೂ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್‍ಗಾಗಿ ಜನ ಪರದಾಡುವಂತಾಗಿದೆ. ಕಳೆದ ಎರಡು ದಿನಗಳಿಂದಲೂ ಬೆರಳೆಣಿಕೆಯ ಮಂದಿಗೆ ವ್ಯಾಕ್ಸಿನೇಷನ್ ನೀಡಿ ನಂತರ ಕೊಠಡಿಗೆ ಬೀಗ ಜಡಿಯಲಾಗುತ್ತಿದೆ. ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಬಂದವರು ಬಂದ ದಾರಿಗೆ ಸುಂಕವಿಲ್ಲದಂತೆ ಸರ್ಕಾರಕ್ಕೆ ಹಾಗೂ ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿಗೆ ಹಿಡಿ ಶಾಪ ಹಾಕಿ ವಾಪಸ್ಸಾಗುತ್ತಿದ್ದಾರೆ.

      ತಾಲ್ಲೂಕಿನ ಬರಗೂರು, ತಾವರೇಕೆರೆ, ಕಳ್ಳಂಬೆಳ್ಳ, ಬುಕ್ಕಾಪಟ್ಟಣ, ಪಂಜಿಗಾನಹಳ್ಳಿ, ಪಟ್ಟನಾಯಕನಹಳ್ಳಿ ಸೇರಿದಂತೆ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಕೂಡ ವ್ಯಾಕ್ಸಿನೇಷನ್‍ಗಾಗಿ ಸಾರ್ವಜನಿಕರು ಸರದಿಯ ಸಾಲಲ್ಲಿ ನಿಲ್ಲುತ್ತಿದ್ದು, 30 ರಿಂದ 40 ಜನರಿಗೆ ಮಾತ್ರ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ದಿನನಿತ್ಯ ವ್ಯಾಕ್ಸಿನೇಷನ್ ಮಾಡಲಾಗುತ್ತಿದೆ ಎನ್ನಲಾಗಿದೆ. ವೈದ್ಯರನ್ನು ಪ್ರಶ್ನಿಸಿದರೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ವ್ಯಾಕ್ಸಿನೇಷನ್ ಸರಬರಾಜು ಕಡಿಮೆ ಇದೆ ಎಂಬ ಸಬೂಬನ್ನು ಕೇಳಿ ಸಾರ್ವಜನಿಕರು ಕೂಡ ರೋಸಿ ಹೋಗಿದ್ದಾರೆ.

      ಶಿರಾ ನಗರವೂ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಭೀತಿಯಿಂದಲೋ ಅಥವಾ ಬೀದಿಯಲ್ಲಿ ಹೋಗೋ ಕೊರೊನಾ ಹೆಮ್ಮಾರಿಯನ್ನು ಮನೆಗೇಕೆ ಕೊಂಡೊಯ್ಯಲಿ ಅನ್ನುವ ಆತಂಕವೋ ಒಟ್ಟಾರೆ ಇಡೀ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೋವಿಡ್ ನೆಪದಲ್ಲಿ ಸಾರ್ವಜನಿಕರ ಕೈಗೆಟುಕದಂತಾಗಿದ್ದಾರೆ.

       ಬಹುತೇಕ ಎಲ್ಲಾ ಸರ್ಕಾರಿ ಇಲಾಖೆಗಳಲ್ಲೂ ಇಬ್ಬಿಬ್ಬರು ಸಿಬ್ಬಂದಿಗೆ ಪಾಸಿಟೀವ್ ಬಂದಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗಳಿಗೆ ಬಂದಿದ್ದರೂ ಕುಂಟು ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿರುವುದು ನಗ್ನ ಸತ್ಯವೂ ಆಗಿದೆ. ಸ್ಥಳೀಯ ಅಧಿಕಾರಿಗಳನ್ನು ಹಿಡಿತಕ್ಕೆ ತೆಗೆದುಕೊಂಡು ಇಂತಹ ಕಠಿಣ ಸ್ಥಿತಿಯಲ್ಲಾದರೂ ಶಾಸಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವೂ ಆಗಿದೆ.

      ಈ ಎಲ್ಲಾ ಲೋಪದೋಷಗಳ ನಡುವೆ ಶಿರಾ ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ನಿಜಕ್ಕೂ ಸುಮ್ಮನೆ ಕುಳಿತಿಲ್ಲ ನಿಜ. ಸರ್ಕಾರಿ ಆಸ್ಪತ್ರೆಯ ಕೋವಿಡ್ ಸೆಂಟರ್‍ಗೆ ಭೇಟಿ ನೀಡಿ ಕೋವಿಡ್ ರೋಗಿಗಳಿಗೆ ಧೈರ್ಯ ತುಂಬುವುದು, ಆಸ್ಪತ್ರೆಗೆ ಹೆಚ್ಚುವರಿ ಕಾಟ್‍ಗಳನ್ನು ಸ್ವಂತ ಖರ್ಚಿನಿಂದ ಕೊಡಿಸುವುದು, ತಮ್ಮ ಬಿ.ಜೆ.ಪಿ. ಪಕ್ಷದ ಸ್ವಯಂ ಸೇವಕರನ್ನು ಕೋವಿಡ್ ರೋಗಿಗಳಿಗೆ ನೆರವಾಗಲು ಸಹಾಯ ಹಸ್ತ ನೀಡುವಂತೆ ಹುರಿದುಂಬಿಸುವುದು ಇಂತಹ ಬಹುತೇಕ ಜಾಗ್ರತೆಯ ಕೆಲಸಗಳನ್ನು ಮಾಡುತ್ತಿದ್ದರೂ ಸ್ಥಳೀಯ ವೈದ್ಯರನ್ನು, ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ.

       ಈ ಹಿಂದೆ ಕ್ಷೇತ್ರದಲ್ಲಿ ಶಾಸಕರಾಗಿದ್ದ ಬಿ.ಸತ್ಯನಾರಾಯಣ್, ಟಿ.ಬಿ.ಜಯಚಂದ್ರ ಸೇರಿದಂತೆ ಬಹುತೇಕ ಎಲ್ಲಾ ಶಾಸಕರು ಅಧಿಕಾರಿಗಳಿಂದ ನಿರ್ದಾಕ್ಷಿಣ್ಯವಾಗಿ ಸರ್ಕಾರದ ಕೆಲಸ ಮಾಡಿಸಿಕೊಳ್ಳುತ್ತಿದ್ದರಷ್ಟೇ ಅಲ್ಲದೆ ಕ್ರಿಯಾಶೀಲತೆಯನ್ನು ಮರೆತ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಲೂ ಯೋಚಿಸುತ್ತಿರಲಿಲ್ಲವೆಂಬುದು ಕ್ಷೇತ್ರದ ಜನತೆಗೆ ತಿಳಿದ ವಿಷಯವೇ ಆಗಿದೆ. ಅತ್ತ ಆಯುವುದೂ ಇಲ್ಲ, ಇತ್ತ ಒದೆಯುವುದೂ ಇಲ್ಲ ಅನ್ನುವಂತಹ ಹಾಲಿ ಶಾಸಕರ ಗುಣಗಳನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ದುರ್ಬಳಕೆ ಮಾಡಿಕೊಳ್ಳುತ್ತಿರುವುದಂತೂ ಕಟು ಸತ್ಯವೂ ಹೌದು.

      ಇದೀಗ ಬಂದಿರುವುದು ಅತ್ಯಂತ ಕಷ್ಟಕರವಾದ ಮಹಾಮಾರಿ ಎಂಬ ಅರಿವು ಶಾಸಕರಿಗಿದೆಯಾದರೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಹಾಗೂ ಸ್ಥಳೀಯ ಖಾಸಗಿ ವೈದ್ಯರನ್ನೂ ಬಳಸಿಕೊಂಡು ಹೆಚ್ಚಿನ ಕೋವಿಡ್ ಸೆಂಟರ್‍ಗಳ ಸ್ಥಾಪನೆ, ಹೆಚ್ಚೆಚ್ಚು ವ್ಯಾಕ್ಸಿನೇಷನ್ ಹಾಕಿಸುವಿಕೆ, ಪಾಸಿಟೀವ್ ಬಂದವರು ಹೋಂ ಕ್ವಾರಂಟೈನ್‍ನಲ್ಲಿದ್ದಾರೋ ಇಲ್ಲವೋ ಎಂದು ಪತ್ತೆ ಹಚ್ಚುವಿಕೆಯ ಕಾರ್ಯಗಳನ್ನು ಮಾಡದೇ ಇದ್ದಲ್ಲಿ ಶಿರಾ ತಾಲ್ಲೂಕಿನಲ್ಲೂ ಕೋವಿಡ್ ಪ್ರಕರಣಗಳು ಕೈ ಮೀರಿ ಹೋದರೂ ಅಚ್ಚರಿ ಇಲ್ಲ.

        ಕಳೆದ 6-7 ತಿಂಗಳಿಂದಲೂ ಮೊಂಡುತನದಿಂದ ಜಡ್ಡು ಹಿಡಿದು ಕೂತ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವಂತಹ, ಕರ್ತವ್ಯದಲ್ಲಿ ಸೋಮಾರಿಗಳಾಗಿ ಕಛೇರಿಗೂ ಬಾರದೆ ಗಂಟೆ ಬಾರಿಸಿ ಸಂಬಳ ತೆಗೆದುಕೊಳ್ಳುತ್ತಿರುವಂತಹ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಾಸಕರು ಚಾಟಿ ಬೀಸದೆ ಇದ್ದಲ್ಲಿ ಕ್ಷೇತ್ರದ ಅಭಿವೃದ್ಧಿಯಲ್ಲೂ ಶಿರಾ ಕ್ಷೇತ್ರ ಹಿನ್ನಡೆಯಾದರೂ ಅಚ್ಚರಿ ಇಲ್ಲ.
 
      ಕೋವಿಡ್ ರೋಗಿಗಳು ಔಷಧಿಗಳನ್ನು ಪಡೆದುಕೊಂಡು ಮನೆಯಲ್ಲಿಯೇ ಕ್ವಾರಂಟೈನ್ ಆಗುವ ಮೂಲಕ ತಮ್ಮ ಕುಟುಂಬಕ್ಕೂ ಎಚ್ಚರಿಕೆಯ ಗಂಟೆಯಾಗಿ ವರ್ತಿಸಬೇಕು ನಿಜ ಆದರೆ, ಪಾಸಿಟೀವ್ ಬಂದ ಅನೇಕ ರೋಗಿಗಳು ಮೇಲ್ನೋಟಕ್ಕೆ ಗುಣಮುಖರಾದ ಕೂಡಲೇ ಕ್ವಾರಂಟೈನ್ ನಿಯಮಗಳನ್ನೂ ಗಾಳಿಗೆ ತೂರಿ ನಗರದಲ್ಲಿ ಓಡಾಡಿಕೊಂಡಿರುವ ಕಾರಣದಿಂದಾಗಿ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

 ಕೋವಿಡ್ ವ್ಯಾಕ್ಸಿನೇಷನ್ ಉಚಿತವಾಗಿ ನೀಡುತ್ತಿದ್ದು ಸಾರ್ವಜನಿಕರು ಆಸ್ಪತ್ರೆಗೆ ತೆರಳಿ ತಪ್ಪದೇ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವಂತೆ ಸರ್ಕಾರ ಸಲಹೆ ನೀಡುತ್ತಿದೆಯಾದರೂ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್‍ಗಾಗಿ ಜನ ಪರದಾಡುವಂತಾಗಿದೆ. ಕಳೆದ ಎರಡು ದಿನಗಳಿಂದಲೂ ಬೆರಳೆಣಿಕೆಯ ಮಂದಿಗೆ ವ್ಯಾಕ್ಸಿನೇಷನ್ ನೀಡಿ ನಂತರ ಕೊಠಡಿಗೆ ಬೀಗ ಜಡಿಯಲಾಗುತ್ತಿದೆ. ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಬಂದವರು ಬಂದ ದಾರಿಗೆ ಸುಂಕವಿಲ್ಲದಂತೆ ಸರ್ಕಾರಕ್ಕೆ ಹಾಗೂ ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿಗೆ ಹಿಡಿ ಶಾಪ ಹಾಕಿ ವಾಪಸ್ಸಾಗುತ್ತಿದ್ದಾರೆ.

ಈ ಹಿಂದೆ ಕ್ಷೇತ್ರದಲ್ಲಿ ಶಾಸಕರಾಗಿದ್ದ ಬಿ.ಸತ್ಯನಾರಾಯಣ್, ಟಿ.ಬಿ.ಜಯಚಂದ್ರ ಸೇರಿದಂತೆ ಬಹುತೇಕ ಎಲ್ಲಾ ಶಾಸಕರು ಅಧಿಕಾರಿಗಳಿಂದ ನಿರ್ದಾಕ್ಷಿಣ್ಯವಾಗಿ ಸರ್ಕಾರದ ಕೆಲಸ ಮಾಡಿಸಿಕೊಳ್ಳುತ್ತಿದ್ದರಷ್ಟೇ ಅಲ್ಲದೆ ಕ್ರಿಯಾಶೀಲತೆಯನ್ನು ಮರೆತ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಲೂ ಯೋಚಿಸುತ್ತಿರಲಿಲ್ಲವೆಂಬುದು ಕ್ಷೇತ್ರದ ಜನತೆಗೆ ತಿಳಿದ ವಿಷಯವೇ ಆಗಿದೆ. ಅತ್ತ ಆಯುವುದೂ ಇಲ್ಲ, ಇತ್ತ ಒದೆಯುವುದೂ ಇಲ್ಲ ಅನ್ನುವಂತಹ ಹಾಲಿ ಶಾಸಕರ ಗುಣಗಳನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ದುರ್ಬಳಕೆ ಮಾಡಿಕೊಳ್ಳುತ್ತಿರುವುದಂತೂ ಕಟು ಸತ್ಯವೂ ಹೌದು.

 

 (ಬರಗೂರು ವಿರೂಪಾಕ್ಷ)

Recent Articles

spot_img

Related Stories

Share via
Copy link
Powered by Social Snap