ಶಿರಾ :
ಕ್ಷೇತ್ರದ ಶಾಸಕರಾದ ಡಾ.ಸಿ.ಎಂ.ರಾಜೇಶ್‍ಗೌಡ ಅವರ ನೇತೃತ್ವದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಕೋವಿಡ್ ರೋಗಿಗಳು, ನಿರಾಶ್ರಿತರು ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಸಲುವಾಗಿ ಬಿಜೆಪಿ ಯುವ ಮೋರ್ಚಾದಿಂದ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ ಎಂದು ನಗರ ಬಿ.ಜೆ.ಪಿ. ಘಟಕದ ಅಧ್ಯಕ್ಷ ವಿಜಯರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ಮಂಡಳಿಯ ಸಹಕಾರದೊಂದಿಗೆ ತುರ್ತು ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುವ ರೋಗಿಗಳನ್ನು ವೈದ್ಯರೊಂದಿಗೆ ಸಂಪರ್ಕಗೊಳಿಸಲು ನಮ್ಮ ಸಹಾಯವಾಣಿ ಸದಾ ಸಿದ್ಧವಿದೆ. ಬಿ.ಜೆ.ಪಿ. ಯುವ ಮೋರ್ಚಾ ತಂಡದ ಸುಮಾರು 50ಕ್ಕೂ ಹೆಚ್ಚು ಮಂದಿ ಎಲ್ಲರ ನೆರವಿಗೆ ದಾವಿಸಲಿದ್ದಾರೆ ಎಂದರು.
ಏ.28 ರಿಂದ ಲಾಕ್‍ಡೌನ್ ಇರುವುದರಿಂದಾಗಿ ಹೊರಭಾಗದಿಂದ ಬರುವವರಿಗೆ, ನಿರಾಶ್ರಿತರಿಗೆ ದಿನ ನಿತ್ಯ ಊಟ, ತಿಂಡಿಯನ್ನು ಅವರು ಇದ್ದಲ್ಲಿಯೇ ಹೋಗಿ ಉಚಿತವಾಗಿ ನೀಡಲು ನಮ್ಮ ಯುವ ತಂಡ ಸಿದ್ಧವಿದೆ. ಶಾಸಕರು ದಿನನಿತ್ಯವೂ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸುತ್ತಿದ್ದು, ಅವರಿಗೆ ಧೈರ್ಯವನ್ನೂ ತುಂಬುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಶಾಸಕರ ಸೂಚನೆಯಂತೆ ಕೋವಿಡ್‍ನಿಂದ ಮೃತಪಟ್ಟ ರೋಗಿಗಳ ಶವ ಸಂಸ್ಕಾರವನ್ನು ಅವರ ಕುಟುಂಬದವರು ಕೂಡ ನೆರವೇರಿಸಲು ಹಿಂಜರಿಯುತ್ತಿರುವ ಕಾರಣದಿಂದಾಗಿ ನಮ್ಮ ಯುವ ಮೋರ್ಚಾ ತಂಡವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮೃತ ವ್ಯಕ್ತಿಯ ಗ್ರಾಮಕ್ಕೆ ತೆರಳಿ ಅಂತಿಮ ಸಂಸ್ಕಾರ ಮಾಡಲು ಕೂಡ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ಯಾವ ನಿರಾಶ್ರಿತರು ಕೂಡ ಹಸಿವಿನಿಂದ ಬಳಲಬಾರದೆಂಬ ಭಾವನೆಯಿಂದ ಶಾಸಕರ ಸೂಚನೆಯಂತೆ ನಮ್ಮ ಸಹಾಯವಾಣಿ ತಂಡ ಸಮರೋಪಾದಿಯಲ್ಲಿ ನಿರಾಶ್ರಿತರು, ಕೋವಿಡ್ ರೋಗಿಗಳಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡಲಿದೆ. ಒಂದು ದೂರವಾಣಿ ಕರೆ ಮಾಡಿ ತಿಳಿಸಿದರೂ ಸಾಕು, ಅವರು ಇದ್ದಲ್ಲಿಗೇ ಹೋಗಿ ತಿಂಡಿಯನ್ನು ನೀಡಿ ಬರಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಗ್ರಾಮೀಣ ಭಾಗದಿಂದ ನಗರಕ್ಕೆ ಕೋವಿಡೇತರ ಬಡ ರೋಗಿಗಳು ಬಂದು ಔಷಧಿಗಳನ್ನು ಕೊಂಡು ಹೋಗಲು ಸಾಧ್ಯವಾಗದಂತಹ ಸ್ಥಿತಿಯಲ್ಲಿದ್ದರೆ ಅಂತಹವರು ನಮ್ಮ ಸಹಾಯವಾಣಿಗೆ ಒಂದು ಕರೆ ಮಾಡಿದರೆ ಸಾಕು, ನಮ್ಮ ಯುವ ಮೋರ್ಚಾ ತಂಡ ಔಷಧಿಯನ್ನು ಕೊಂಡು ರೋಗಿಗಳು ಇದ್ದಲ್ಲಿಗೇ ಹೋಗಿ ಔಷಧಿಯನ್ನು ಉಚಿತವಾಗಿ ನೀಡಿ ಬರಲು ಸಿದ್ಧವಿದೆ ಎಂದು ತಿಳಿಸಿರುವ ವಿಜಯರಾಜ್, ಆಸಕ್ತರು ನಮ್ಮ ಸಹಾಯವಾಣಿ ಕೇಂದ್ರದ ಈ ಮುಂದಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡುವಂತೆ ಅವರು ತಿಳಿಸಿದ್ದಾರೆ.
ಸಹಾಯವಾಣಿ ಕೇಂದ್ರದ ಸಂಖ್ಯೆಗಳು: ವಿಜಯರಾಜ್-9986771044, ನಟರಾಜ್-9380894259, ಯಶವಂತ್-9900331091, ವಿಜಯಸಿಂಹ-9945065570 ಮತ್ತು ಯುವರಾಜ್-7892197417
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ