ತುಮಕೂರು :
ತೀವ್ರ ಕುತೂಹಲ ಕೆರಳಿಸಿದ್ದ ಶಿರಾ ಉಪ ಚುನಾವಣೆ ಹಾಗೂ ವಿಧಾನಪರಿಷತ್ ಆಗ್ನೆಯ ಪದವೀಧರ ಕ್ಷೇತ್ರದ ಚುನಾವಣಾ ಫಲಿತಾಂಶ ಇಂದು ಹೊರಬರಲಿದ್ದು, ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿರುವಂತೆ ಅಭ್ಯರ್ಥಿಗಳು, ಬೆಂಬಲಿಗರಲ್ಲಿ ಫಲಿತಾಂಶದ ಬಗೆಗೆ ಹೆಚ್ಚಿನ ಕಾತರ ಉಂಟಾಗಿದೆ.
ತುಮಕೂರಿನ ಸರಕಾರಿ ಪಾಲೆಟಿಕ್ನಿಕ್ ಕಾಲೇಜಿನಲ್ಲಿ ಬೆಳಿಗ್ಗೆ 8 ರಿಂದ ಶಿರಾ ಉಪಚುನಾವಣೆ ಮತ ಎಣಿಕೆ ನಡೆಯಲಿದ್ದು, ಎಣಿಕೆಗಾಗಿ ಮೂರು ಕೊಠಡಿಗಳನ್ನು ಮೀಸಲಿರಿಸಿ 18 ಟೇಬಲ್‍ಗಳನ್ನು ಹಾಕಿ, ಬಿಗಿ ಭದ್ರತೆ ಹಾಕಲಾಗಿದೆ. ಅಂಚೆ ಮತಪತ್ರದ ಎಣಿಕೆಯೇ ಒಂದು ಪ್ರತ್ಯೇಕ ಕೊಠಡಿಯಲ್ಲಿ ಜರುಗಲಿದ್ದು, ಎಣಿಕೆ ಕೇಂದ್ರದ ಹೊರಗಡೆ ವಿಜಯೋತ್ಸವ ಮೆರವಣಿಗೆ ನಿಷೇಧಿಸಲಾಗಿದೆ. ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.
ಶಿರಾದ 13, ಆಗ್ನೇಯದ 15 ಮಂದಿ ಭವಿಷ್ಯ ನಿರ್ಧಾರ:
ಶಿರಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಟಿ.ಬಿ.ಜಯಚಂದ್ರ, ಬಿಜೆಪಿಯಿಂದ ಡಾ.ಎಂ.ರಾಜೇಶ್‍ಗೌಡ ಹಾಗೂ ಜೆಡಿಎಸ್‍ನಿಂದ ಮಾಜಿ ಸಚಿವ ಬಿ.ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಸೇರಿದಂತೆ 13 ಮಂದಿ ಅಭ್ಯರ್ಥಿಗಳು ಸ್ಫರ್ಧಿಸಿದ್ದರು. ಅಂತೆಯೇ ಆಗ್ನೆಯ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‍ನಿಂದ ರಮೇಶ್‍ಬಾಬು, ಬಿಜೆಪಿಯಿಂದ ಚಿದಾನಂದಗೌಡ, ಜೆಡಿಎಸ್‍ನಿಂದ ಚೌಡರೆಡ್ಡಿ ತೂಪಲ್ಲಿ, ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದಿದ್ದ ಡಿ.ಟಿ.ಶ್ರೀನಿವಾಸ್, ಹಾಲನೂರು ಎಸ್.ಲೇಪಾಕ್ಷಿ ಸೇರಿ 15 ಮಂದಿ ಕಣಕ್ಕಿಳಿದಿದ್ದರು. ಇವರೆಲ್ಲರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ವಿಜಯಮಾಲೆ ಯಾರ ಕೊರಳಿಗೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮತದಾನೋತ್ತರ ಸಮೀಕ್ಷೆ, ಬಿಜೆಪಿಯಲ್ಲಿ ಹೆಚ್ಚಿದ ಜೋಶ್!
ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವಂತೆ ಅಭ್ಯರ್ಥಿಗಳು, ಅವರ ಬೆಂಬಲಿಗರಲ್ಲಿ ಮತದಾರರು ಯಾವ ತೀರ್ಪು ಬರೆದಿದ್ದಾರೋ ಎಂಬುದರ ಬಗ್ಗೆ ಚಿಂತೆ ಕಾಡಿಸಿರುವುದು ಒಂದೆಡೆಯಾದರೆ, ಗೆಲ್ಲುವ ಹುಮ್ಮಸ್ಸಿನಲ್ಲೇ ಅಭ್ಯರ್ಥಿಗಳು ಮಾತಾಡುತ್ತಿರುವುದು ಫಲಿತಾಂಶ ಮುನ್ನಾದಿನ ಕಂಡುಬಂತು. ಮತದಾನೋತ್ತರ ಸಮೀಕ್ಷೆ ಹೊರಬಂದ ಬಳಿಕ ವಿಶೇಷವಾಗಿ ಆಡಳಿತಾರೂಢ ಬಿಜೆಪಿ ಪಾಳಯದಲ್ಲಿ ಗೆಲುವಿನ ಉತ್ಸಾಹ ಹೆಚ್ಚಿನದಾಗಿ ಗೋಚರಿಸಿದ್ದು, ವಿಪಕ್ಷಗಳ ಪಾಳಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಆದರೂ ಗೆಲುವು ನಮ್ಮದೇ ಎಂಬ ಭರವಸೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರು ಸಂಚರಿಸುತ್ತಿದ್ದು, ಶಿರಾ ಗೆಲುವಿನ ಫಲಿತಾಂಶ ಯಾರಿಗೆ ದೀಪಾವಳಿ ಉಡುಗೊರೆಯಾಗಲಿದೆ ಎಂಬುದು ಇಂದು ಮಧ್ಯಾಹ್ನದೊಳಗೆ ಬಹಿರಂಗವಾಗಲಿದೆ.
ಟಿಬಿಜೆ ಪರ ಬಲಗಡೆ ಹೂ ವಿಡಿಯೋ ವೈರಲ್, ಬಿಜೆಪಿ, ಜೆಡಿಎಸ್ ನಾಯಕರಿಂದಲೂ ದೇವರ ಮೊರೆ!
ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಗೆಲುವಿಗೆ ಪ್ರಾರ್ಥಿಸಿ ಕೈ ಮುಖಂಡರು ದೇವಾಲಯಗಳಿಗೆ ಎಡತಾಕುತ್ತಿರುವುದು ಕಂಡುಬಂದಿದ್ದು, ಹೆಬ್ಬೂರು ಅತಿಥಿ ಮಠದ ಹೊನ್ನಾದೇವಿ ದೇವತೆಗೆ ಕಾಂಗ್ರೆಸ್ ಕಾರ್ಯಕರ್ತರು ವಿಶೇಷಪೂಜೆ ಸಲ್ಲಿಸಿ ಟಿ.ಬಿ.ಜೆ ಗೆಲ್ತಾರಾ, ಇಲ್ಲಾವಾ? ಗೆಲ್ಲುವುದಾದರೆ ಬಲಗಡೆ ಹೂ ಕೊಡಮ್ಮ, ಇಲ್ಲವಾದರೆ ಎಡಗಡೆ ಕೊಡಮ್ಮ ಎಂದು ಪ್ರಶ್ನೆ ಮಾಡಿದ್ದು, ಈ ವೇಳೆ ದೇವಿ ಮೂರ್ತಿಯ ಬಲತುದಿಯಿಂದ ಹೂ ಬಿದ್ದ ವಿಡಿಯೊ ಹೆಚ್ಚು ವೈರಲ್ ಆಗಿದೆ. ಕಾಂಗ್ರೆಸ್ ಅಷ್ಟೇ ಅಲ್ಲ, ಬಿಜೆಪಿಯವರು ಸಹ ಗೆಲುವಿಗಾಗಿ ಈಗಾಗಲೇ ಮಠ ಮಂದಿರಗಳನ್ನು ಸುತ್ತಿದ್ದು, ಚುನಾವಣೆ ಮುನ್ನಾ ದಿನವೇ ಕ್ಷೇತ್ರದ ಪ್ರಮುಖ ಉಸ್ತುವಾರಿ ವಹಿಸಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತುಮಕೂರಿನ ಜೈನಮಂದಿರ, ರಾಮಕೃಷ್ಣ ಆಶ್ರಮ ಹೀಗೆ ಹಲವು ದೇಗುಲಗಳಿಗೆ ಭೇಟಿ ನೀಡಿದ್ದರು. ಇನ್ನೂ ದೈವಶಕ್ತಿ ಬಗ್ಗೆ ಅಪಾರ ನಂಬಿಕೆಯುಳ್ಳ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಅವರು ಪ್ರಚಾರದ ವೇಳೆ ಕ್ಷೇತ್ರ ವ್ಯಾಪ್ತಿಯ ಮಠ, ಮಂದಿರಗಳಿಗೆ ಭೇಟಿ ಕೊಟ್ಟು ಆಶೀರ್ವಾದ ಪಡೆದಿದ್ದಾರೆ.
ಸೋಲು ಗೆಲುವಿನ ಫಲ ಅಭ್ಯರ್ಥಿಗೆ ಮಾತ್ರವಲ್ಲ, ಹಿಂದಿನ ಶಕ್ತಿಗಳಿಗೂ ಅನ್ವಯ :
ಶಿರಾ ವಿಧಾನಸಭೆ ಕ್ಷೇತ್ರದಲ್ಲಿ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲಿ ಯಾರೇ ಗೆದ್ದರೂ, ಯಾರೇ ಸೋತರೂ ಫಲಿತಾಂಶದ ಫಲ ಅಭ್ಯರ್ಥಿಗೆ ಮಾತ್ರಸೀಮಿತವಲ್ಲ. ಬದಲಾಗಿ ಚುನಾವಣೆ ನೇತೃತ್ವ ವಹಿಸಿಕೊಂಡವರಿಗೂ ಅನ್ವಯವಾಗಲಿದೆ. ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಗೆದ್ದರೆ ಪ್ರಮುಖವಾಗಿ ಕ್ಷೇತ್ರದ ಉಸ್ತುವಾರಿ ವಹಿಸಿದ್ದ ಸಿಎಂ ಬಿಎಸ್‍ವೈ ಪುತ್ರ ಬಿ.ವೈ.ವಿಜಯೇಂದ್ರ ಪಕ್ಷದಲ್ಲಿ ಪ್ರಭಾವವನ್ನು ಮತ್ತಷ್ಟು ಭದ್ರವಾಗಿಸಿಕೊಳ್ಳಲಿದ್ದು, ಪಕ್ಷದ ಆಂತರ್ಯದಲ್ಲಿ ಅಸೂಯೆಗೂ ನಾಂದಿಹಾಡಲಿದೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಜಿಲ್ಲಾ ಕಾಂಗ್ರೆಸ್‍ನ ಸಂಘಟಿತ ಹೋರಾಟಕ್ಕೆ ಸಿಕ್ಕ ಫಲವೆನಿಸಲಿದ್ದು, ಚುನಾವಣೆ ಸಮಿತಿ ಛೇರ್ಮನ್ ಡಾ.ಜಿ.ಪರಮೇಶ್ವರ, ಕೋ ಚೇರ್ಮನ್ ಕೆ.ಎನ್.ರಾಜಣ್ಣ ಅವರ ವರ್ಚಸ್ಸು ಹಿಗ್ಗಲಿದೆ. ಇನ್ನೂ ಜೆಡಿಎಸ್ ಅಭ್ಯರ್ಥಿ ಗೆಲುವು ಹಳೇ ಮೈಸೂರು ಭಾಗದಲ್ಲಿ ದೇವೆಗೌಡರು, ಕುಮಾರಸ್ವಾಮಿ ಅವರ ಕುಟುಂಬಕ್ಕಿರುವ ಬೆಂಬಲವನ್ನು ಸಾಭೀತುಪಡಿಸಲಿದೆ.
ಆಗ್ನೇಯ ಕ್ಷೇತ್ರದ ಬಂಡಾಯದ ಬಿಸಿ, ಫಲಿತಾಂಶ ವಿಳಂಬವಾಗುವ ಸಾಧ್ಯತೆಯೇ ಹೆಚ್ಚು :
ಆಗ್ನೇಯ ಪದವೀಧರ ಕ್ಷೇತ್ರ ವ್ಯಾಪ್ತಿಗೆ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆಯ 32 ತಾಲೂಕುಗಳು ಸೇರುವುದರಿಂದ ಇಷ್ಟು ತಾಲೂಕುಗಳ ಮತ ಎಣಿಕೆ ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನ ಒಂದೇ ಮತ ಎಣಿಕೆ ಕೇಂದ್ರದಲ್ಲಿ ನಡೆಯಲಿದೆ. ಈ ಕ್ಷೇತ್ರದ ಹಿಂದಿನ ಫಲಿತಾಂಶವನ್ನು ಅವಲೋಕಿಸಿದರೆ ಪ್ರತೀ ಬಾರಿಯೂ ಎಣಿಕೆ ಮಧ್ಯರಾತ್ರಿಯವರೆಗೆ ನಡೆದ ಉದಾಹರಣೆಗಳಿವೆ. ಈ ಬಾರಿಯೂ ಅದು ಮರಕಳಿಸುವ ಸಾಧ್ಯತೆಯೂ ಹೆಚ್ಚಿದ್ದು, ಅದರಲ್ಲೂ ಈ ಬಾರಿ ಆಡಳಿತಾರೂಢ ಬಿಜೆಪಿಯಿಂದ ಬಂಡಾಯವೆದ್ದು, ಪಕ್ಷೇತರರಾಗಿ ಸ್ಪರ್ಧಿಸಿದ್ದ ಡಿ.ಟಿ.ಶ್ರೀನಿವಾಸ್ ಹಾಗೂ ಹಾಲನೂರು ಲೇಪಾಕ್ಷಿ ಅವರ ಮತಗಳಿಕೆಯೂ ಫಲಿತಾಂಶದ ಮೇಲೆ ದಟ್ಟ ಪ್ರಭಾವ ಬೀರಲಿದೆ. ನಿಗದಿತ ಮೊದಲ ಪ್ರಾಶಸ್ತ್ಯ ಮತ ಪಡೆಯದಿದ್ದರೆ , ಇತರೆ ಅಭ್ಯರ್ಥಿಗಳ ಪ್ರಾಶಸ್ತ್ಯ ಮತಗಳ ಹಂಚಿಕೆ ಪ್ರಕ್ರಿಯೆ ಸಹ ನಡೆದು ನಂತರ ಫಲಿತಾಂಶ ಘೋಷಣೆ ಮಾಡಬೇಕಾಗುತ್ತದೆ. ಹಾಗಾಗಿ ಫಲಿತಾಂಶ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯೇ ಹೆಚ್ಚಿದೆ.
ಮತದಾನೋತ್ತರ ಸಮೀಕ್ಷೆಗಳಲ್ಲಿ ಏನೇ ಬಂದಿರಬಹುದು. ಆದರೆ ನನ್ನ ಕಾರ್ಯಕರ್ತರ ಮೇಲೆ ವಿಶ್ವಾಸ ಇಟ್ಟವನು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತೀ ಬೂತ್ ಮಟ್ಟದಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸಿದ್ದಾರೆ. ನನಗೆ ವಿಶ್ವಾಸವಿದೆ. ಶಿರಾ ಉಪ ಚುನಾವಣೆಯಲ್ಲಿ ಖಂಡಿತಾ ಗೆಲ್ಲುತ್ತೇನೆ.
-ಟಿ.ಬಿ.ಜಯಚಂದ್ರ, ಶಿರಾ ಕಾಂಗ್ರೆಸ್ ಅಭ್ಯರ್ಥಿ.
ಶಿರಾದಲ್ಲಿ ಮೊದಲ ಬಾರಿಗೆ ಬಿಜೆಪಿ ಕಮಲ ಅರಳುವುದು ನಿಶ್ಚಿತವೆನಿಸಿದೆ. ಕ್ಷೇತ್ರದಲ್ಲಿನ ಹಿಂದಿನ ಫಲಿತಾಂಶದ ಬದಲಾವಣೆ ಕೇವಲ ನನ್ನ ಗೆಲುವಷ್ಟೇ ಆಗುವುದಿಲ್ಲ. ಮತದಾರರ ಗೆಲುವು ಆಗುತ್ತದೆ ಎಂದು ಭಾವಿಸುತ್ತೇನೆ. ಕೇಂದ್ರ ಮತ್ತು ರಾಜ್ಯ ಸರಕಾರದ ಪಕ್ಷದ ನಾಯಕತ್ವಕ್ಕೆ ಇಂದಿನ ಫಲಿತಾಂಶ ಬಲ ತುಂಬಲಿದೆ. ಅಭಿವೃದ್ಧಿ ವೇಗಕ್ಕೂ ನಾಂದಿ ಹಾಡಲಿದೆ.
-ಡಾ.ರಾಜೇಶ್‍ಗೌಡ, ಶಿರಾ ಬಿಜೆಪಿ ಅಭ್ಯರ್ಥಿ
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್ ಗೆಲುವು ಸಾಧಿಸುವುದು ನಿಶ್ಚಿತವೆನಿಸಿದೆ. ಪದವೀಧರ ಪ್ರಜ್ಞಾವಂತ ಮತದಾರರು ಹುಸಿ ಭರವಸೆಯ ಮಾತುಗಳಿಗೆ ಮರುಳಾಗದೇ ಕೆಲಸ ಮಾಡುವವರಿಗೆ ಮತ ನೀಡಿದ್ದಾರೆಂಬ ವಿಶ್ವಾಸವಿದೆ. ಫಲಿತಾಂಶ ಮುಂಬರುವ ದಿನಗಳಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲಿದೆ.
-ಚೌಡರೆಡ್ಡಿ ತೂಪಲ್ಲಿ, ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ.