ಬರಗೂರು :
ಲಾಕ್ ಡೌನ್ ಹಿನ್ನೆಲೆಯಲ್ಲಿ ಬಳೆ ಅಂಗಡಿ ತೆರೆಯಲು ಅನುಮತಿಯಿಲ್ಲ. ಪಡಿತರ ಆಹಾರ ಖಾಲಿಯಾಗಿದೆ, ತಿನ್ನಲು ಊಟವಿಲ್ಲ, ದುಡಿಯಲು ಬೇರೆ ದಾರಿಯಿಲ್ಲ ಎಂದು ತನ್ನ ಆಪ್ತರ ಸಹಾಯ ಪಡೆದು ಕ್ಷೇತ್ರದ ಶಾಸಕರಲ್ಲಿ ತನ್ನ ಅಸಹಾಯಕತೆ ಯನ್ನು ಹೇಳಿಕೊಂಡ ವೃದ್ದೆಯೊಬ್ಬರಿಗೆ ಕೂಡಲೆ ಗುರುವಾರ ಸ್ಥಳಕ್ಕೆ ಆಗಮಿಸಿದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಮಹಿಳೆಯ ಆರೋಗ್ಯ ವಿಚಾರಿಸಿ, ದಿನಸಿ ಆಹಾರ ಕಿಟ್ ನೀಡಿ ಧೈರ್ಯ ಹೇಳಿರುವುದು ಮೆಚ್ಚುವಂತದ್ದು.
ಶಿರಾ ತಾಲ್ಲೂಕಿನ ಬರಗೂರು ಗ್ರಾಮದ ವೃದ್ಧೆ ಬಳೆ ಪಾರ್ವತಮ್ಮ ಎಂಬ ಮಹಿಳೆ ವಿಧವೆಯಾಗಿದ್ದು, ಬಳೆ ವ್ಯಾಪಾರವನ್ನೇ ನಂಬಿ ಜೀವನ ಮಾಡುತ್ತಿದ್ದರು. ಇತ್ತೀಚೆಗೆ ಇವರ ಹಿರಿಯ ಪುತ್ರ ಕೂಡ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪುತ್ರ ಕೂಲಿ-ನಾಲಿ ಮಾಡಿ ತಂದ ಹಣದಿಂದ ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ಪಡಿತರ ಧಾನ್ಯದಲ್ಲಿ ಕಡಿಮೆ ಪ್ರಮಾಣದಲ್ಲಿ ಅಕ್ಕಿ ವಿತರಿಸಲಾಗುತ್ತಿದೆ. ಈಗ ಇದ್ದ ಅಕ್ಕಿ ಎಲ್ಲಾ ಮುಗಿದು ತಿನ್ನಲು ಊಟವಿಲ್ಲದೆ ಸೊರಗುವಂತಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ದುಡಿಯಲು ಬೇರೆ ದಾರಿಯಿಲ್ಲ ಎಂದು ಪಾರ್ವತಮ್ಮ ತನ್ನ ಆಪ್ತರೊಂದಿಗೆ ಅಳಲು ತೋಡಿಕೊಂಡಿದ್ದರು. ಅವರು ಶಾಸಕರಿಗೆ ಮಹಿಳೆಯ ಅಸಹಾಯಕ ಪರಿಸ್ಥಿತಿಯನ್ನು ತಿಳಿಸಿದ್ದರು. ಆಗ ಕೂಡಲೆ ಸ್ಪಂದಿಸಿದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಸ್ಥಳಕ್ಕೆ ಭೇಟಿ ನೀಡಿದ ಮಹಿಳೆಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಆಹಾರ ಧಾನ್ಯವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಈ ವೇಳೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಯರಾಮಯ್ಯ ಮಾತನಾಡಿ, ಗ್ರಾಮದಲ್ಲಿ ಹಸಿವಿನಿಂದ ಬಳಲುತ್ತಿರುವ ಜನರು ಇರುವುದು ಕಂಡು ಬಂದಿದೆ. ಅಂತಹ ವ್ಯಕ್ತಿಗಳನ್ನು ಗುರ್ತಿಸಿ ದಿನಸಿ ಆಹಾರ ಕಿಟ್‍ಗಳನ್ನು ಕಲ್ಪಿಸುವ ಭರವಸೆ ನೀಡಿದರು. ಗ್ರಾಮಸ್ಥರಾದ ಬಿ.ಎಸ್.ಸಿದ್ದೇಶ್, ನಾಗರಾಜು.ಎಂ.ಎನ್, ಶೇಖರ್ ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ