ಶಿರಾ : ಒಂದು ವಾರ ಇಡೀ ಗ್ರಾಮ ಸಂಪೂರ್ಣ ಲಾಕ್

 ಶಿರಾ :

      ತಾಲ್ಲೂಕಿನಲ್ಲಿ ಈವರೆಗೆ ಅತಿ ಹೆಚ್ಚಾಗಿ ಕಾಣಬರುತ್ತಿದ್ದ ಕೋವಿಡ್ ಸೋಂಕಿನ ಪ್ರಕರಣಗಳು ದಿನ ದಿನಕ್ಕೂ ಕಡಿಮೆಯಾಗುತ್ತಿದ್ದು ತಾಲ್ಲೂಕು ಆಡಳಿತ ನಿಟ್ಟುಸಿರು ಬಿಡುವಂತಹ ಸ್ಥಿತಿ ತಲುಪುವ ಹೊತ್ತಿಗೆ ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ಕಾಣ ಬರುತ್ತಿರುವ ಸೋಂಕಿನ ಪ್ರಮಾಣದಿಂದ ಈ ಭಾಗದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ.

      ಕಳೆದ ಹಲವು ದಿನಗಳಿಂದಲೂ ಬುಕ್ಕಾಪಟ್ಟಣವನ್ನು ಕೆಂಪು ವಲಯವನ್ನಾಗಿ ಘೋಷಣೆ ಮಾಡಲಾಗಿತ್ತಾದರೂ ಈವರೆಗೂ ಬುಕ್ಕಾಪಟ್ಟಣ ಗ್ರಾಮದಲ್ಲಿ ಮಾತ್ರ ಸೋಂಕಿನ ಪ್ರಮಾಣ ಕಡಿಮೆಯಾಗಿಯೇ ಇಲ್ಲ. ಸೋಂಕಿನ ಪ್ರಮಾಣ ಕಡಿಮೆ ಮಾಡಲು ತಾಲ್ಲೂಕು ಆಡಳಿತ ಬಿಗಿ ಕ್ರಮ ಕೈಗೊಂಡರೂ ಕೂಡ ಸಾರ್ವಜನಿಕರಲ್ಲಿ ಜಾಗೃತಿಯೂ ಕಡಿಮೆಯಾದ ಪರಿಣಾಮ ಸೋಂಕು ಹೆಚ್ಚಾಗಲು ಕಾರಣವಾಯಿತು.

      ಜಿಲ್ಲಾಡಳಿತದ ಸೂಚನೆಯಂತೆ ಬುಧವಾರದಿಂದಲೇ ಬುಕ್ಕಾಪಟ್ಟಣವನ್ನು ಮತ್ತೊಮ್ಮೆ ಕೆಂಪು ವಲಯವನ್ನಾಗಿ ಘೋಷಣೆ ಮಾಡಲಾಗಿದ್ದು, ಇಡೀ ಗ್ರಾಮವನ್ನು ದಿಗ್ಬಂಧನದಲ್ಲಿ ಇರಿಸಲಾಗಿದೆ. ಗ್ರಾಮದೊಳಕ್ಕೆ ಯಾರೂ ಕೂಡ ಪ್ರವೇಶ ಮಾಡದಂತೆ ಮತ್ತು ಗ್ರಾಮದೊಳಗಿನ ಜನ ಹೊರ ಬಾರದಂತೆ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಇಡೀ ಗ್ರಾಮವೇ ಒಂದು ವಾರ ಕಾಲ ಸಂಪೂರ್ಣ ಲಾಕ್ ಆಗಲಿದೆ ಎಂದು ತಾಲ್ಲೂಕು ದಂಡಾಧಿಕಾರಿ ಮಮತಾ ತಿಳಿಸಿದ್ದಾರೆ.

      ಬುಧವಾರ ಬುಕ್ಕಾಪಟ್ಟಣಕ್ಕೆ ಭೇಟಿ ನೀಡಿದ ತಾಲ್ಲೂಕು ದಂಡಾಧಿಕಾರಿ, ನಗರ ಠಾಣಾ ಸಿ.ಪಿ.ಐ. ಹನುಮಂತಪ್ಪ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯ್ತಿ ಸಿಬ್ಬಂದಿ ಗ್ರಾಮದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಬುಕ್ಕಾಪಟ್ಟಣದ ಬನ್ನಿ ಮಂಟಪ, ಪೇಟೆಬೀದಿ, ಇಂದಿರಾ ನಗರ ಹಾಗೂ ಮೊದಲ ಬ್ಲಾಕ್‍ಗಳ 454 ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತರಾಗಿ ಕೋವಿಡ್ ಪರೀಕ್ಷೆಗೆ ಒಂದೇ ದಿನ ಹಾಜರಾಗಿದ್ದು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸಿದ್ದೇಶ್ವರ್ ಹಾಗೂ ಡಾ.ಮಾಲತಿ ಅವರ ತಂಡ ಕೋವಿಡ್ ಪರೀಕ್ಷಾ ಕಾರ್ಯವನ್ನು ನಡೆಸಿದೆ. ಇನ್ನೂ ಎರಡು ದಿನಗಳವರೆಗೆ ಕೋವಿಡ್ ಪರೀಕ್ಷೆಯನ್ನು ಈ ತಂಡ ನಿರಂತರವಾಗಿ ನಡೆಸಲಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದ್ದು ಇಡೀ ಗ್ರಾಮವನ್ನು ಬುಧವಾರ ಸ್ಯಾನಿಟೈಸಿಂಗ್ ಮಾಡಲಾಗಿದೆ. ಮನೆ ಮನೆಗೆ, ತೆರಳಿ ಆರ್.ಟಿ.ಸಿ.ಆರ್. ಟೆಸ್ಟ್‍ಗಳನ್ನು ಮಾಡಲಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಹಸೀಲ್ದಾರ್ ಮಮತಾ ಪತ್ರಿಕೆಗೆ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap