ಶಿರಾ :
ತಾಲ್ಲೂಕಿನ ಜೆ.ಡಿ.ಎಸ್. ಪಕ್ಷದ ವತಿಯಿಂದ ಕೊರೋನ ಸೋಂಕಿನ ಮೊದಲನೆ ಮತ್ತು ಎರಡನೆ ಅಲೆಗಳ ಹರಡುವಿಕೆ ನಿಯಂತ್ರಣಗೊಳಿಸಲು ದೇಶ ಮತ್ತು ರಾಜ್ಯಾದಾದ್ಯಂತ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯಾಪಕವಾಗಿ ವಿಧಿಸಲಾದ ಸಂಪೂರ್ಣ ಲಾಕ್‍ಡೌನ್‍ನಿಂದ ಜನತೆ ಬಾಧಿತರಾದಂತಹ ಸಂದರ್ಭದಲ್ಲಿಯೇ ಬೆಲೆ ಏರಿಕೆಯಾಗಿದೆ ಎಂದು ಖಂಡಿಸಿ ತಾಲ್ಲೂಕು ಜೆ.ಡಿ.ಎಸ್..ನಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜೆ.ಡಿ.ಎಸ್. ಪಕ್ಷದ ಕಛೇರಿಯಿಂದ ಹೊರಟ ಪ್ರತಿಭಟನೆಯು ಪ್ರವಾಸಿ ಮಂದಿರದ ವೃತ್ತದಿಂದ ತಹಸೀಲ್ದಾರ್ ಕಛೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ತಾ. ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್ ಮಾತನಾಡಿ, ಸಂಕಷ್ಟದಿಂದ ರಾಜ್ಯದ ಜನತೆ ಬಳಲುತ್ತಿರುವ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತಾರೂಢರಾಗಿರುವ ಬಿ.ಜೆ.ಪಿ. ಸರ್ಕಾರಗಳು ಜನ ಸಾಮಾನ್ಯರ, ರೈತ ಮತ್ತು ರೈತ ಕೂಲಿ-ಕಾರ್ಮಿಕರ ಮತ್ತು ದೀನ ದಲಿತರ ಬದುಕಿನ ಮೇಲೆ ಬರೆ ಎಳೆಯುವಂತಹ ತೈಲ-ಇಂಧನ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ ಎಂದರು.
ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‍ಗೆ 100 ರೂ.ಗಳ ಗಡಿ ದಾಟಿದ್ದು, ವಿದ್ಯುತ್ ದರ, ರಸಗೊಬ್ಬರದ ಬೆಲೆ ಮುಂತಾದವುಗಳ ಬೆಲೆಗಳನ್ನು ಗಗನಕ್ಕೆ ಏರಿಸಿ, ಶ್ರೀ ಸಾಮಾನ್ಯರ ಹಾಗೂ ಮಧ್ಯಮ ವರ್ಗದ ಜನತೆ ಜೀವನ ಮಾಡುವುದಕ್ಕೂ ಪರಿತಪಿಸುವಂತಾಗಿದೆ. ಈ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನು ಇಳಿಸುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದರು.
ಮುಖಂಡರುಗಳಾದ ಜಿ.ಪಂ. ಮಾಜಿ ಸದಸ್ಯ ಸಿ.ಆರ್.ಉಮೇಶ್, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಿ, ಎ.ಪಿ.ಎಂ.ಸಿ. ಅಧ್ಯಕ್ಷ ಚಂದ್ರೇಗೌಡ, ಟಿ.ಡಿ.ಮಲ್ಲೇಶ್, ಆರ್.ರಾಮು, ರವಿಶಂಕರ್, ಅಂಜನಪ್ಪ, ನರಸಿಂಹಮೂರ್ತಿ, ನಾಗರಾಜ್, ಮಹದೇವ್, ರಹಮತ್, ಉದಯ್ ಶಂಕರ್, ಹುಂಜನಾಳ್ ರಾಜು, ಪುಟ್ಟಣ್ಣ ಬೇವಿನಹಳ್ಳಿ, ಪುಟ್ಟಸಿದ್ಧಪ್ಪ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
