ಹೈನುಗಾರಿಕೆಯನ್ನು ಉಪ ಕಸುಬನ್ನಾಗಿಸಿಕೊಳ್ಳಲು ಸಚಿವರ ಸಲಹೆ

 ಶಿರಾ : 

      ಹೈನುಗಾರಿಕೆಯು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ವರದಾನವಾಗಿದ್ದು, ಈ ಹಿನ್ನೆಲೆಯಲ್ಲಿ ರೈತರು ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಸ್ವೀಕರಿಸಿ ಆರ್ಥಿಕ ಸಂಕಷ್ಟದಿಂದ ಹೊರ ಬರುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು.

      ತಾಲ್ಲೂಕಿನ ಮೂಗನಹಳ್ಳಿ ಗ್ರಾಮದಲ್ಲಿ ಗುರುವಾರ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಬಾರದ ಮಳೆ, ಕೈತುಂಬಾ ಲಭ್ಯವಾಗದ ಬೆಲೆಯಿಂದ ರೈತರು ಸಂಕಷ್ಟದಲ್ಲಿರುವಂತಹ ಸಂದರ್ಭದಲ್ಲಿ ಹೈನುಗಾರಿಕೆ ನೆರವಾಗಬಲ್ಲದು. ರಾಸುವನ್ನು ನೆಚ್ಚಿಕೊಂಡರೆ ಎಂದಿಗೂ ಸಂಕಷ್ಟ ಎದುರಾಗದು ಎಂದು ಅವರು ಹೇಳಿದರು.
ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಮಾತನಾಡಿ, ಒಕ್ಕೂಟವು ಸಾಕಷ್ಟು ಸೌಲಭ್ಯಗಳನ್ನು ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡುತ್ತಿದೆ. ವೈದ್ಯಕೀಯ ಸೌಲಭ್ಯಗಳನ್ನೂ ರಾಸುಗಳಿಗೆ ನೀಡುತ್ತಿದ್ದು, ಮರಣ ಹೊಂದಿದ ರಾಸುಗಳಿಗೆ ವಿಮೆ ಸೌಲಭ್ಯವನ್ನು ಒಕ್ಕೂಟ ನೀಡುತ್ತಿದೆ ಎಂದರು.

      ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಹಾಗೂ ರೇಷ್ಮೆ ಉದ್ಯಮಗಳ ಅಭಿವೃದ್ಧಿ ಮಂಡಳಿ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ, ಕೋವಿಡ್‍ನಿಂದ ಮೃತಪಟ್ಟ ರೈತ ಕುಟುಂಬಕ್ಕೆ 1 ಲಕ್ಷ ರೂ.ಗಳ ಪರಿಹಾರ ಸೇರಿದಂತೆ ಉತ್ಪಾದಕರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯದ ಸೌಲಭ್ಯವನ್ನು ಒಕ್ಕೂಟ ಕಲ್ಪಿಸಿದೆ. ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡಿ ಗೌರವಿಸಿದೆ ಎಂದರು.

      ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಎಸ್.ನರಸಿಂಹನ್, ಉಪ ವ್ಯವಸ್ಥಾಪಕ ಡಿ.ವೀರಣ್ಣ, ಸಹಾಯಕ ಸಿ.ಡಿ.ಓ. ಶ್ರೀನಿವಾಸ್, ಕೆ.ಮಧುಸೂದನ್, ಸಂಘದ ಅಧ್ಯಕ್ಷೆ ನವ್ಯಶ್ರೀ, ವಿಸ್ತರಣಾಧಿಕಾರಿ ದಿವಾಕರ್, ಸಮಾಲೋಚಕ ಪ್ರವೀಣ್, ಹೊಸಪಾಳ್ಯ ಸತ್ಯನಾರಾಯಣ್, ಮಂಜುನಾಥ್ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link