ಶಿರಾ :
ಕಳೆದ 7 ವರ್ಷಗಳಿಂದಲೂ ದೇಶದಲ್ಲಿ ಆಡಳಿತ ಗದ್ದುಗೆ ಹಿಡಿದು ಕೂತ ಬಿ.ಜೆ.ಪಿ. ಸರ್ಕಾರ ಬೆಲೆಗಳನ್ನು ಏರಿಸಿ ಬಡವರ ಹೊಟ್ಟೆಗೆ ಹೊಡೆದಿದೆ. ರಾಜ್ಯದಲ್ಲಿನ ಮುಖ್ಯಮಂತ್ರಿ ಯಡಿಯೂರಪ್ಪನಂತಹ ಭ್ರಷ್ಟ ಮುಖ್ಯಮಂತ್ರಿ ಈ ರಾಜ್ಯದಲ್ಲಿ ಯಾರೂ ಕೂಡ ಬಂದಿರಲಿಲ್ಲ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿಸಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ತಾ, ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ನಡೆದ ಪ್ರತಿಭಟನಾ ಮೆರವಣಿಗೆಯನ್ನು ಉದ್ದೇಶಿಸಿ ಸಿ.ಎಂ. ವಿರುದ್ಧ ಜಯಚಂದ್ರ ಕೆಂಡಾಮಂಡಲ ವಾದರು.
ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ನಂಬಬೇಡಿ, ಅವರೊಬ್ಬ ಸುಳ್ಳಿನ ಸರದಾರ. ನುಡಿದಂತೆ ನಡೆಯುವ, ಕೊಟ್ಟ ಮಾತಿನಂತೆ ನಡೆಯುವ ವ್ಯಕ್ತಿ ಅವರಲ್ಲ ಎಂದು ಲೇವಡಿ ಮಾಡಿದರು.
ಕಳೆದ ಉಪ ಚುನಾವಣೆಯಲ್ಲಿ ನಾನೂ ಕೂಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಯಗೊಂಡೆನು. ಈ ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿ.ಜೆ.ಪಿ. ಅಭ್ಯರ್ಥಿ ಗೆದ್ದರೆ ಇನ್ನು 6 ತಿಂಗಳಲ್ಲಿ ಮದಲೂರು ಕೆರೆಗೆ ಹೇಮಾವತಿ ಹರಿಸುವ ಆಶ್ವಾಸನೆಯನ್ನು ಮತದಾರರಿಗೆ ನೀಡಿದ್ದರು. ಕಾಡು ಗೊಲ್ಲ ನಿಗಮಕ್ಕೆ 500 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದ್ದರು. ಇಷ್ಟ್ಟೆಲ್ಲಾ ಸಾಲದೆಂಬಂತೆ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವ ಭರವಸೆಯನ್ನೂ ನೀಡಿ ಹೋಗಿ 9 ತಿಂಗಳಾದರೂ ಶಿರಾ ಕಡೆಗೆ ಮುಖ್ಯಮಂತ್ರಿ ಸುಳಿದಿಲ್ಲ ಎಂದು ಜಯಚಂದ್ರ ಆರೋಪಿಸಿದರು.
ಕೇಂದ್ರ ಸರ್ಕಾರ ಆರಂಭದಲ್ಲಿ ಅಡುಗೆ ಅನಿಲದ ಬೆಲೆಯನ್ನು ಕೊಂಚ ಇಳಿಸಿದಾಗ ಶೋಭಾ ಕರಂದ್ಲಾಜೆ ಹಾಗೂ ಸ್ಮøತಿ ಇರಾನಿ ಇವರಿಬ್ಬರೂ ತಲೆಯ ಮೇಲೆ ಗ್ಯಾಸ್ ಸಿಲಿಂಡರ್‍ಗಳನ್ನು ಇಟ್ಟುಕೊಂಡು ಕುಣಿಸಿದ್ದರು. ಇವರಿಬ್ಬರೂ ಈಗ ಎಲ್ಲಿ ಹೋದರು? 345 ರೂ. ಸಿಲಿಂಡರ್ ಬೆಲೆ ಈಗ 900 ರೂ.ಗೆ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಮೂರರಷ್ಟು ಹೆಚ್ಚಾಗಿದೆ. ಈ ಸರ್ಕಾರಕ್ಕೆ ಬಡವರ ಕೂಗು ಕೇಳಿಸುತ್ತಿಲ್ಲವೆ? ದೇಶದ ಏರ್‍ಫೋರ್ಟ್‍ಗಳನ್ನೆಲ್ಲಾ ಅದಾನಿ, ಅಂಬಾನಿಗೆ ಮಾರಿಕೊಂಡದ್ದೇ ನಿಮ್ಮ ಸಾಧನೆಯಾ ಎಂದು ಜಯಚಂದ್ರ ಟೀಕಿಸಿದರು.
ಮಾಜಿ ಸಂಸದ ಬಿ.ಚಂದ್ರಪ್ಪ ಮಾತನಾಡಿ, ದೇಶದಲ್ಲಿ ಬಿ.ಜೆ.ಪಿ. ಅಧಿಕಾರ ಹಿಡಿದ ಕೂಡಲೇ ಅಚ್ಛೇ ದಿನ್ ಆಯೇಗಾ ಎಂದವರು ಈಗ ಇಡೀ ದೇಶವನ್ನೇ ಲೂಟಿ ಮಾಡ ಹೊರಟಿದ್ದಾರೆ. ಅಚ್ಛೇ ದಿನ್ ಎಂದರೆ ಬಡವರ ಹೊಟ್ಟೆಯ ಮೇಲೆ ಹೊಡೆಯುವುದಾ ಎಂದು ಖಂಡಿಸಿದರು.
ನಗರದ ಜಯಚಂದ್ರ ಅವರ ನಿವಾಸದಿಂದ ಎತ್ತಿನಗಾಡಿ, ಎಮ್ಮೆ ಸವಾರಿ ಹಾಗೂ ಸೈಕಲ್ ಸೇರಿದಂತೆ ಪಾದಯಾತ್ರೆಯ ಮೂಲಕವೂ ನಡೆದ ಪ್ರತಿಭಟನೆಯು ಪ್ರವಾಸಿ ಮಂದಿರ, ಖಾಸಗಿ ಬಸ್ ನಿಲ್ದಾಣದ ಮೂಲಕ ಹಾದು ತಹಸೀಲ್ದಾರ್ ಕಛೇರಿ ತಲುಪಿ, ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಹನುಮಂತಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಆರ್.ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ನಟರಾಜ್ ಬರಗೂರು, ಹುಣಸೆಹಳ್ಳಿ ಶಿವಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ ಹುಲಿಕುಂಟೆಮಠ್, ತಾ. ಯುವ ಕಾಂಗ್ರೆಸ್ ಅಧ್ಯಕ್ಷ ದಯಾನಂದಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಖಾ, ಮುಖಂಡರಾದ ಸಂಜಯ್ ಜಯಚಂದ್ರ, ಆರ್.ನಾಗರಾಜು, ಅರೇಹಳ್ಳಿ ರಮೇಶ್, ಶಶಿಧರ್ ಗೌಡ, ಅಬ್ದುಲ್ ಖಾನ್, ಗುರುಮೂರ್ತಿ, ಸುದರ್ಶನ್, ಅಮಾನುಲ್ಲಾ ಖಾನ್, ಹಾರೋಗೆರೆ ಮಹೇಶ್, ಚಿದಾನಂದ್, ಜಿ.ಎಸ್.ರವಿ, ಬಾಲೇನಹಳ್ಳಿ ಪ್ರಕಾಶ್, ಹಬೀಬ್‍ಖಾನ್, ಸೋರೆಕುಂಟೆ ಸತ್ಯಪ್ಪ, ಶ್ರೀನಿವಾಸ್‍ಬಾಬು, ಭೂವನಹಳ್ಳಿ ಸತ್ಯನಾರಾಯಣ, ಕೆ.ನರಸಪ್ಪ, ಜನಾರ್ಧನ್, ಎಂ.ವೈ.ಗೋಪಾಲ್, ಚೆನ್ನನಕುಂಟೆ ತಿಪ್ಪೇಶ್, ಸುಧಾಕರ್‍ಗೌಡ, ದಿವಾಕರ್‍ಗೌಡ, ಹೇಮಂತ್ ಉಪ್ಪಾರ್, ಪಿ.ಬಿ.ನರಸಿಂಹಯ್ಯ, ಹೇಮಂತ್ ಬಾಂಬೆ, ಅಶೋಕ್, ರಘು, ಬಸವರಾಜ್, ವಾಜರಹಳ್ಳಿ ರಮೇಶ್, ಲಿಂಗರಾಜ್, ದೇವರಾಜ್, ನೂರುದ್ಧೀನ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ